ಕಳಸ ಬಸ್​ನಿಲ್ದಾಣಕ್ಕೆ ಅನುದಾನದ ಭರವಸೆ

ಕಳಸ: ಕಳಸಕ್ಕೆ ಸುಸಜ್ಜಿತ ಬಸ್​ನಿಲ್ದಾಣ ಬೇಕು ಎನ್ನುವ ಕಳಸ ಜನರ ಹಲವು ಹಲವು ವರ್ಷಗಳ ಕನಸು ನನಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಸ್​ನಿಲ್ದಾಣ ನಿರ್ವಣಕ್ಕೆ ಬೇಕಾದ ಅನುದಾನ ಬಿಡುಗಡೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಧಿಕಾರಿಗಳಿಗ ಸೂಚಿಸಿದ್ದಾರೆ.

ಬೆಳೆಯುತ್ತಿರುವ ಪಟ್ಟಣ, ಪ್ರವಾಸಿಗರ ನೆಚ್ಚಿನ ತಾಣ, ಎರಡು ಪ್ರಮುಖ ಧಾರ್ವಿುಕ ಕ್ಷೇತ್ರಗಳನ್ನು ಒಳಗೊಂಡಿರುವ ಕಳಸದಲ್ಲಿ ಬಸ್​ನಿಲ್ದಾಣ ಇರಲಿಲ್ಲ. ದೂರದಿಂದ ಬರುವ ಪ್ರವಾಸಿಗರಿಗೆ ಕಳಸದಲ್ಲಿ ಬಂದು ಎಲ್ಲಿ ಇಳಿಯಬೇಕು, ಮುಂದೆ ಪ್ರಯಾಣಿಸಲು ಎಲ್ಲಿ ಬಸ್ ಹತ್ತಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಿದ್ದರು.

ನಿತ್ಯ ಕಳಸಕ್ಕೆ ಬರುವ ನೂರಾರು ಖಾಸಗಿ ಮತ್ತು ಸರ್ಕಾರಿ ಬಸ್​ಗಳು ಕೆ.ಎಂ.ರಸ್ತೆ, ಮಂಜಿನಕಟ್ಟೆ, ಮಹಾವೀರ ರಸ್ತೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಿ ಹೋಗುತ್ತಿದ್ದರು. ಇದರಿಂದ ನಿತ್ಯ ಪ್ರಯಾಣಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು.

ಹೆಸರಿಗೆ ಮಾತ್ರ ನಿಲ್ದಾಣ:ಹೆಸರಿಗೆ ಮಾತ್ರ ನಿಲ್ದಾಣ ಕೋಟೆಹೊಳೆ ರಸ್ತೆ ಸಂತೆ ಮಾರ್ಕೆಟ್ ಬಳಿ ಒಂದು ಬಸ್ ತಂಗುದಾಣವಿದೆ. ಇಲ್ಲಿಗೆ ಯಾವ ಬಸ್​ಗಳು ಬರುವುದಿಲ್ಲ. ಇಲ್ಲಿ ಯಾವ ಮೂಲ ಸೌಲಭ್ಯವೂ ಇಲ್ಲದೆ ಹಾಳು ಬಿದ್ದು ಕೊಂಪೆಯಾಗಿದೆ. ಅಲ್ಲದೇ ಇದು ಕುಡುಕರು ಮತ್ತು ಜಲ್ಲಿ, ಮರಳಿನ ಶೇಖರಣಾ ಕೇಂದ್ರವಾಗಿ ಮಾರ್ಪಟ್ಟಿದೆ.

ಕಳಸದಲ್ಲಿ ಸುಸಜ್ಜಿತ ಬಸ್​ನಿಲ್ದಾಣ ನಿರ್ವಿುಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಬಾರಿ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರ ನೇತೃತ್ವದಲ್ಲಿ ತಾಪಂ ಸದಸ್ಯ ಮಹಮ್ಮದ್ ರಫೀಕ್ ಮತ್ತಿತರರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಭೇಟಿ ಮಾಡಿ ಕಳಸದಲ್ಲಿ ಬಸ್​ನಿಲ್ದಾಣ ಇಲ್ಲದೆ ಜನರು, ಪ್ರವಾಸಿಗರು, ನಿತ್ಯ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿ ನೂತನ ಬಸ್​ನಿಲ್ದಾಣ ನಿರ್ವಿುಸುವಂತೆ ಮನವಿ ಮಾಡಿದ್ದಾರೆ.

ಶೀಘ್ರ ಅನುದಾನ ಬಿಡುಗಡೆಗೆ ಸೂಚನೆ: ನಿಯೋಗದ ಮನವಿ ಆಲಿಸಿದ ಸಚಿವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಳಸ ಮತ್ತು ಶೃಂಗೇರಿಗೆ ಬಸ್​ನಿಲ್ದಾಣ ನಿರ್ವಣಕ್ಕೆ ಬೇಕಾದ ಅನುದಾನವನ್ನು ಶೀಘ್ರ ಮಂಜೂರು ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಕಳಸ ಗ್ರಾಪಂ ನಿಲ್ದಾಣಕ್ಕೆ ಬೇಕಾದ ಸ್ಥಳ ಒದಗಿಸುವ ಬಗ್ಗೆ ನಿರ್ಣಯ ತೆಗೆದುಕೊಂಡು ಸಾರಿಗೆ ಇಲಾಖೆಗೆ ಕಳುಹಿಸುವಂತೆ ಸೂಚಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾಹಿತಿ ನೀಡಿದ್ದಾರೆ.