ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳ್ಳಬೇಕು: ಯಡಿಯೂರಪ್ಪ ಒತ್ತಾಯ

ಧಾರವಾಡ (ಅಂಬಿಕಾತನತನಯದತ್ತ ಪ್ರಧಾನ ವೇದಿಕೆ): ಕೃಷ್ಣೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹದಾಯಿ ತೀರ್ಪು ಬಂದಿದೆ. ಕಳಸಾ- ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಆ ಮೂಲಕ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ಕೃಷಿ ವಿವಿ ಮೈದಾನದಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಬಿಕಾತನತನಯದತ್ತ ಪ್ರಧಾನ ವೇದಿಕೆಯಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಹೆಮ್ಮೆ ಯ ಇತಿಹಾಸ ನೆನೆಯುತ್ತ ಮೈ ಮರೆತು ಕುಳಿತುಕೊಳ್ಳಬಾರದು. ಬದಲಾಗಿ ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕೆ ಕ್ಷೇತ್ರದಲ್ಲಿ ಸಾಧಿಸಬೇಕಾದುದು ಬಹಳಷ್ಟಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜನರಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಐತಿಹಾಸಿಕವಾಗಿ ಉತ್ತರ ಕರ್ನಾಟಕ ಹಿಂದುಳಿರುವುದು ಸತ್ಯ. ಭೇದಭಾವ ಮಾಡದೇ ಅಖಂಡ ಕರ್ನಾಟಕದ ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಬೇಕು. ಇದಕ್ಕಾಗಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ. ರೈತರು, ಮಹಿಳೆ ಯರು ನೆಮ್ಮದಿಯಿಂದ ಬದುಕುವಂತಾಗಬೇಕು. ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ರೈತರನ್ನು ಸಾಲದ ಸುಳಿಯಲ್ಲಿ ಸಿಗದಂತೆ ಮಾಡಬೇಕು. ಈ ವರ್ಷ 156 ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ ಎಂದು ಸರ್ಕಾರವೇ ಘೊಷಿಸಿದೆ. ನದಿಗಳಿಂದ ನೀರನ್ನು ತಂದು ಕೆರೆ- ಕಟ್ಟೆಗಳನ್ನು ತುಂಬಿಸಿ ನೀರಾವರಿ ಯೋಜನೆಗೆ ಆದ್ಯತೆ ಕೊಡಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕು. ರೈತ ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕುವಂತಾಗಬೇಕು. ಇದು ಎಲ್ಲ ಸರ್ಕಾರದ ಕರ್ತವ್ಯ. ಈ ದಿಸೆಯಲ್ಲಿ ಪಕ್ಷ ಭೇದ ಮರೆತು ಕೆಲಸ ಮಾಡಬೇಕಾಗಿದೆ ಎಂದರು.

ಇದೇ ಸ ಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಸಾಧಕರನ್ನು ಯಡಿಯೂರಪ್ಪ ಸನ್ಮಾನಿಸಿದರು. ಸನ್ಮಾನಿತರ ಪರ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿದರು. ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿಎಂ. ನಿಂಬಣ್ಣವರ, ಅಮೃತ ದೇಸಾಯಿ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಮುಖಂಡರಾದ ಮೋಹನ ಲಿಂಬಿಕಾಯಿ, ಎಸ್.ಐ. ಚಿಕ್ಕನಗೌಡರ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಇತರರಿದ್ದರು. ಮಲ್ಲಿಕಾರ್ಜುನ ಯಂಡಿಗೇರಿ ಸ್ವಾಗತಿಸಿದರು. ಶರಣು ಗೋಗೇರಿ ನಿರೂಪಿಸಿದರು. ಪೊ›. ಕೆ.ಎಸ್. ಕೌಜಲಗಿ ನಿರ್ವಹಿಸಿದರು. ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ವಂದಿಸಿದರು.