ಕಳಪೆ-ಖುಲ್ಲಾ ಬೀಜ ಮತ್ತೆ ಮಾರುಕಟ್ಟೆಗೆ

ರಾಣೆಬೆನ್ನೂರ: ಬೀಜೋತ್ಪಾದನೆಯಲ್ಲಿ ಹೆಸರಾಗಿರುವ ರಾಣೆಬೆನ್ನೂರ ಮಾರುಕಟ್ಟೆಯಲ್ಲಿ ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟಕ್ಕೆ ಕಡಿವಾಣ ಬೀಳುವುದೇ? ಇಂಥದೊಂದು ಪ್ರಶ್ನೆ ಮುಂಗಾರು ಹಂಗಾಮಿಗೆ ಮುನ್ನವೇ ರೈತರಲ್ಲಿ ಮೂಡಿದೆ.

ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಹೈದರಾಬಾದ್ ಮೂಲದ ಖುಲ್ಲಾ ಹಾಗೂ ಕಳಪೆ ಬೀಜ ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಳೆದ ವರ್ಷ ಮಾರಾಟ ಜಾಲದ ಮೇಲೆ ಬೆಳಗಾವಿ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ನಕಲಿ ಬೀಜಗಳನ್ನು ವಶಪಡಿಸಿಕೊಂಡಿದ್ದರು. ಆದರೂ ಖುಲ್ಲಾ ಬೀಜ ಮಾರಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿಲ್ಲ.

ಸಂಸ್ಕರಣೆ ಬೇರೆಡೆ: ಬೀಜೋತ್ಪಾದನೆಯ ಬಹುತೇಕ ಕಂಪನಿಗಳ ಸಂಸ್ಕರಣ ಘಟಕವಿರುವುದು ಹೈದರಾಬಾದ್​ನಲ್ಲಿ. ಆದರೆ, ಹೈದರಾಬಾದ್ ಅಧಿಕೃತ ಕಂಪನಿಯ ಏಜೆಂಟರ ಮೂಲಕ ತಿರಸ್ಕೃತ ಬೀಜಗಳನ್ನು (ಬಿತ್ತನೆಗೆ ಯೋಗ್ಯವಲ್ಲದ ಬೀಜ) ಕಡಿಮೆ ಬೆಲೆಗೆ ಖರೀದಿಸಿ ಅವುಗಳಿಗೆ ಬಣ್ಣ ಸೇರಿಸಿ, ವಿವಿಧ ಕಂಪನಿಗಳ ನಕಲಿ ಪ್ಯಾಕೇಟ್​ಗಳಲ್ಲಿ ಹಾಕಿ ಅಲ್ಲಿಂದ ಹಾವೇರಿ ಮತ್ತಿತರ ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ.

ಈ ಹಿಂದೆ ರಾಣೆಬೆನ್ನೂರಿನಲ್ಲಿಯೇ ಇಂಥ ಅಕ್ರಮ ದಂಧೆ ನಡೆಯುತ್ತಿತ್ತು. ಆದರೆ, ಕಳೆದ ವರ್ಷ ನಡೆದ ಕೃಷಿ ಅಧಿಕಾರಿಗಳ ದಾಳಿಯಿಂದಾಗಿ ಎಚ್ಚೆತ್ತುಕೊಂಡಿರುವ ಅಕ್ರಮ ದಂಧೆಕೋರರು ಈ ಬಾರಿ ಪಕ್ಕದ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ತಾಲೂಕಿನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರತೊಡಗಿವೆ.

ಅಲ್ಲಿಂದ ಬೀಜಗಳನ್ನು ತಂದು ತಾಲೂಕಿನ ಗೋದಾಮುಗಳಲ್ಲಿ ಸಂಗ್ರಹಿಸುವ ಕಾರ್ಯ ಭರದಿಂದ ನಡೆಸಿದ್ದಾರೆ ಎನ್ನುವ ಆರೋಪವಿದೆ. ಆದ್ದರಿಂದ ಈ ಬಾರಿ ಮುಂಗಾರು ಹಂಗಾಮು ಆರಂಭಕ್ಕೂ ಮುನ್ನ ಕೃಷಿ ಅಧಿಕಾರಿಗಳು ದಾಳಿ ನಡೆಸಿ, ಖುಲ್ಲಾ ಬೀಜ ಮಾರಾಟದ ಹಾವಳಿ ತಪ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಮಳೆ ಬಂದರೆ ದಂಧೆ ಜೋರು
ಮುಂಗಾರು ಹಂಗಾಮಿಗೆ ಖುಲ್ಲಾ ಬೀಜ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡ ದಂಧೆಕೋರರು, ಮಳೆಯಾಗುವುದನ್ನೇ ಕಾಯುತ್ತಿದ್ದಾರೆ. ಮಳೆ ಬಿದ್ದು ರೈತರು ಬಿತ್ತನೆಗೆ ಶುರು ಮಾಡುತ್ತಿದ್ದಂತೆ ಖುಲ್ಲಾ ಬೀಜ ಮಾರಾಟಗಾರರ ಹಾವಳಿ ಅಧಿಕವಾಗಲಿದೆ. ಬೇರೆ ಬೇರೆ ಜಿಲ್ಲೆಯಿಂದ ಬೀಜ ಖರೀದಿಸಲು ಬರುವ ರೈತರನ್ನು ಟಾರ್ಗೆಟ್ ಮಾಡುವ ದಂಧೆಕೋರರು, ಗುಣಮಟ್ಟದ ಹೆಸರು ಹೇಳಿ ಕಳಪೆ ಬೀಜ ಮಾರಾಟ ಮಾಡುತ್ತಾರೆ. ಇಂಥ ಬಲೆಗೆ ಬಿದ್ದ ಎಷ್ಟೋ ರೈತರು ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ ಬೀಜ ಕೊಟ್ಟ ಅಂಗಡಿಕಾರರ ವಿರುದ್ಧ ಪ್ರತಿಭಟನೆಗೆ ಮುಂದಾದ ಉದಾಹರಣೆಗಳು ಬಹಳಷ್ಟಿವೆ.

ಸಭೆ ನಡೆಸಿ ಸೂಚನೆ
ಕಳೆದ ಬಾರಿ ವ್ಯಾಪಕವಾಗಿ ಹರಡಿಕೊಂಡಿದ್ದ ಖುಲ್ಲಾ ಬೀಜ ಮಾರಾಟದ ಬಗ್ಗೆ ಎಚ್ಚೆತ್ತುಕೊಂಡಿರುವ ಕೃಷಿ ಅಧಿಕಾರಿಗಳು ಈ ಬಾರಿ ಬೀಜ ಮಾರಾಟಗಾರರ ಹಾಗೂ ರೈತ ಮುಖಂಡರ ಸಭೆ ನಡೆಸುವ ಮೂಲಕ ಖುಲ್ಲಾ ಬೀಜ ಮಾರಾಟ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಇಷ್ಟಕ್ಕೆ ಕೈಬಿಡದೆ ಅಕ್ರಮವಾಗಿ ಖುಲ್ಲಾ ಹಾಗೂ ಕಳಪೆ ಬೀಜ ಮಾರಾಟ ಕುರಿತು ಪ್ರತಿ ಅಂಗಡಿಗೂ ಭೇಟಿ ನೀಡಿ ಪರಿಶೀಲಿಸಬೇಕು. ಅಂದಾಗ ಅಕ್ರಮಕ್ಕೆ ಕಡಿವಾಣ ಬೀಳಲು ಸಾಧ್ಯ ಎಂಬುದು ರೈತರ ಅಭಿಪ್ರಾಯವಾಗಿದೆ.

ರಾಣೆಬೆನ್ನೂರ ನಗರದಲ್ಲಿ ಖುಲ್ಲಾ ಬೀಜ ಮಾರಾಟಕ್ಕೆ ಈಗಾಗಲೇ ಕೆಲ ದಂಧೆಕೋರರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂಥವರಿಗೆ ಅಮಾಯಕ ರೈತರು ಮೋಸ ಹೋಗುವ ಮುನ್ನವೇ ಕೃಷಿ ಅಧಿಕಾರಿಗಳು ಖುಲ್ಲಾ ಬೀಜ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
| ಜಗದೀಶ ಪಿ., ರೈತ ಮುಖಂಡ

ಖುಲ್ಲಾ ಬೀಜ ಮಾರಾಟ ಮಾಡದಂತೆ ಈಗಾಗಲೇ ಎಲ್ಲ ಅಂಗಡಿಕಾರರ ಸಭೆ ನಡೆಸಿ ಸೂಚಿಸಿದ್ದೇವೆ. ಕಳಪೆ ಬೀಜ ಮಾರಾಟ ಮಾಡುತ್ತಿರುವ ಕುರಿತು ಯಾರಾದರೂ ಮಾಹಿತಿ ನೀಡಿದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
| ಮಂಜುನಾಥ ಅಂತರವಳ್ಳಿ, ಕೃಷಿ ಉಪ ನಿರ್ದೇಶಕ ರಾಣೆಬೆನ್ನೂರ

Leave a Reply

Your email address will not be published. Required fields are marked *