ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಕುಮಟಾ: ಬಗ್ಗೋಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು ನಿತ್ಯ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಬಸ್ ಸಂಚಾರವೂ ನಿಂತಿದ್ದು ಕೇಳುವವರೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸಾಯಂಕಾಲ ಅಕ್ಕಿ ಮಿಲ್​ಗೆ ಬಂದಿದ್ದ ಲಾರಿ ಒಳಚರಂಡಿ ಕಾಮಗಾರಿಗಾಗಿ ಅಗೆದ ತಗ್ಗಿನಲ್ಲಿ ಸಿಲುಕಿಕೊಂಡಿತ್ತು. ಅದನ್ನು ಎತ್ತಲು ಬಂದ ಟೋವಿಂಗ್ ಕ್ರೇನ್ ಕೂಡಾ ಸಿಲುಕಿಕೊಂಡಿತ್ತು. ರಾತ್ರಿ ಸಿಲುಕಿಕೊಂಡ ಕ್ರೇನ್ ಎತ್ತಲು ಬಂದ ಇನ್ನೊಂದು ಕ್ರೇನ್ ಕೂಡಾ ಹುದುಗಿಹೋಗಿ ಬಗ್ಗೋಣ ರಸ್ತೆಯಲ್ಲಿ ಜನ-ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ರಾತ್ರಿ ಕಷ್ಟಪಟ್ಟು ತಗ್ಗಿನಲ್ಲಿ ಸಿಲುಕಿಕೊಂಡ ವಾಹನಗಳನ್ನು ಎತ್ತಲಾಯಿತು. ಆದರೆ, ಶುಕ್ರವಾರ ಬೆಳಗ್ಗೆ ತಂಪುಪಾನೀಯದ ವಾಹನ ಸಿಲುಕಿ ಜನ ಪರದಾಡುವಂತಾಯಿತು.

ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಳಚರಂಡಿ ಯೋಜನೆ ನಮಗೆ ಬೇಕಾಗಿಯೇ ಇರಲಿಲ್ಲ. ಯೋಜನೆಯನ್ನು ನಮ್ಮ ಮೇಲೆ ಹೇರಲಾಗಿದೆ. ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಚರಂಡಿ ಚೇಂಬರ್​ಗಳಲ್ಲಿ ಈಗ ನೀರು ಉಕ್ಕುತ್ತಿದೆ. ಮುಂದೆ ಹೊಲಸು ಉಕ್ಕಲಿದೆ. ಬೇಸಿಗೆಯಲ್ಲಿ ಧೂಳಿನ ಕಾಟ, ಮಳೆಗಾಲದಲ್ಲಿ ರಸ್ತೆಯೇ ಹಾಳು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಕುಮಟಾ ಪೇಟೆ ಭಾಗದಲ್ಲಿ ಒಳಚರಂಡಿ ಕೆಲಸ ಮಾಡುವಾಗ ಧೂಳು ಬಾರದಂತೆ ದಿನಕ್ಕೆ 5-6 ಬಾರಿ ನೀರು ಹೊಡೆದಿದ್ದರು. ಆದರೆ ಬಗ್ಗೋಣದಲ್ಲಿ ಒಮ್ಮೆಯೂ ಧೂಳಿಗಾಗಿ ನೀರು ಹಾಕಿಲ್ಲ. ಕಾಂಕ್ರೀಟ್ ಕೆಲಸಕ್ಕೂ ಕ್ಯೂರಿಂಗ್ ಮಾಡಿಲ್ಲ. ನಮಗೆ ಇಂಥ ಕಳಪೆ ಒಳಚರಂಡಿ ಯೋಜನೆ ಬೇಡವೇ ಬೇಡ ಎಂದು ಸ್ಥಳೀಯರಾದ ನಾಗೇಶ ನಾಯ್ಕ, ನಾರಾಯಣ ನಾಯ್ಕ, ಕೃಷ್ಣ ಗೌಡ, ಮಾರುತಿ ನಾಯ್ಕ, ಈಶ್ವರ ನಾಯ್ಕ, ದತ್ತಾತ್ರಯ ನಾಯ್ಕ, ಸುರೇಶ, ಮೋಹನ ನಾಯ್ಕ, ಜಗದೀಶ ನಾಯ್ಕ, ಗಣಪತಿ ಮುಕ್ರಿ, ರಾಮಾ ಮುಕ್ರಿ, ಸುಬ್ರಾಯ ಮುಕ್ರಿ ಇನ್ನಿತರರು ವಿರೋಧ ವ್ಯಕ್ತಪಡಿಸಿದರು.

ಒಳಚರಂಡಿ ಕಾಮಗಾರಿ ಅವಾಂತರಕ್ಕೆ ಬಗ್ಗೋಣದಿಂದ ಊರಕೇರಿವರೆಗಿನ ಜನ ಬೆಲೆ ತೆರುವಂತಾಗಿದೆ. ರಸ್ತೆ ಒಂದಿಲ್ಲೊಂದು ಕಡೆ ಕುಸಿಯುತ್ತಿದ್ದು, ದೊಡ್ಡ ವಾಹನ ಮಾತ್ರವಲ್ಲದೇ ದ್ವಿಚಕ್ರ ವಾಹನ ಸವಾರರೂ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಬಗ್ಗೋಣದಲ್ಲಿ ಒಳಚರಂಡಿ ಕಾಮಗಾರಿಯಿಂದ ಕುಸಿದ ರಸ್ತೆಗೆ ಗುತ್ತಿಗೆದಾರರು ಶುಕ್ರವಾರ ಕಲ್ಲುಮಣ್ಣು ಹಾಕಿ ಮುಚ್ಚುತ್ತಿದ್ದಾರೆ. ಮಳೆಗಾಲ ಮುಗಿಯುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಕುಮಟಾದಲ್ಲಿ ಒಳಚರಂಡಿ ಕಾಮಗಾರಿ ತೀರಾ ಕಳಪೆಯಾಗಿದ್ದು, ಬಗ್ಗೋಣದಲ್ಲಿ ಮಿತಿಮೀರಿ ಕಳಪೆಯಾಗಿದೆ. ಅರೆಬರೆ ಕೆಲಸ ಮಾಡಿ ಹೋಗಿದ್ದು ಸಮಸ್ಯೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ಬಸ್ ಸೇವೆಯೂ ಬಂದ್ ಆಗಿದೆ. ನಮಗೆ ಒಳಚರಂಡಿ ಬೇಡವೇ ಬೇಡ.
– ನಾಗೇಶ ನಾಯ್ಕ, ಬಗ್ಗೋಣ.