ಕಳಚಿತು ಅಲ್ಪಸಂಖ್ಯಾತ ಮೀಸಲು ಪಟ್ಟ!

ಪರಶುರಾಮ ಕೆರಿ ಹಾವೇರಿ:ಮೂರನೇ ಲೋಕಸಭೆ, ಅಂದರೆ 1962ನೇ ಇಸ್ವಿಯಿಂದ ಇಲ್ಲಿಯವರೆಗೆ ಮುಸ್ಲಿಂ ಅಭ್ಯರ್ಥಿಗಳಿಗೇ ಕಾಂಗ್ರೆಸ್ ಪಕ್ಷ ಹಾವೇರಿ ಕ್ಷೇತ್ರದಲ್ಲಿ ಮಣೆ ಹಾಕುತ್ತ ಬಂದಿದೆ. ಆದರೆ, ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೇ ಮೀಸಲಿಟ್ಟಿದೆ ಎಂಬ ಅಘೊಷಿತ ಮೀಸಲು ನೀತಿ- ಪ್ರೀತಿಗೆ ಈ ಬಾರಿ ತೆರೆಬಿದ್ದಿದೆ. 17ನೇ ಲೋಕಸಭೆ ಚುನಾವಣೆಯಲ್ಲಿ ಡಿ.ಆರ್. ಪಾಟೀಲರು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಮೀಸಲು ಪರಂಪರೆಗೆ ಕೊನೆ ಹಾಡಿದ್ದಾರೆ.

ಹೌದು, ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ (ಇದಕ್ಕೂ ಮುನ್ನ ಧಾರವಾಡ ದಕ್ಷಿಣ ಕ್ಷೇತ್ರ ಎಂದಾಗಿತ್ತು) ಕಳೆದ 57 ವರ್ಷಗಳಿಂದ ನಡೆದ 14 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿತ್ತು. 14 ಚುನಾವಣೆಗಳಲ್ಲಿ 10 ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಇಲ್ಲಿ ಗೆಲುವನ್ನು ಸಾಧಿಸಿದ್ದರು. 1952 ಹಾಗೂ 1962ರಲ್ಲಿ ನಡೆದ ಚುನಾವಣೆಯಲ್ಲಿ ಹಿರೇಕೆರೂರ ತಾಲೂಕಿನ ಸಾದರ ಲಿಂಗಾಯತ ಸಮುದಾಯದ ಟಿ.ಆರ್. ನೇಸ್ವಿಯವರಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಈ 2 ಚುನಾವಣೆಗಳಲ್ಲಿಯೂ ಅವರು ಗೆಲುವನ್ನು ಸಾಧಿಸಿದ್ದರು. 1962ರಿಂದ ಸಾಮಾಜಿಕ ನ್ಯಾಯದಡಿ ಅಲ್ಪಸಂಖ್ಯಾತ ಸಮುದಾ ಯದ ಎಚ್.ಎಫ್. ಮೊಹಸೀನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಇದರಿಂದ ಬಂಡಾ ಯವೆದ್ದ ಅಂದಿನ ಹಾಲಿ ಸಂಸದ ಟಿ.ಆರ್. ನೇಸ್ವಿ ಅವರು ಪ್ರಜಾ ಸೋಷಿಯಾಲಿಸ್ಟ್ ಪಾರ್ಟಿ(ಪಿಎಸ್​ಪಿ)ಯಿಂದ ಕಣಕ್ಕಿಳಿದರು. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ಮುಂದೆ ಅವರು ಸೋಲು ಕಾಣಬೇಕಾಯಿತು. ಮೊದಲ ಬಾರಿಗೆ ಮೊಹಸೀನ್ ಗೆಲುವಿನೊಂದಿಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ಅಲ್ಪಸಂಖ್ಯಾತ ಮೀಸಲು ಕ್ಷೇತ್ರವೆಂದೇ ಪರಿಗಣಿತವಾಗತೊಡಗಿತು. ಅಲ್ಲಿಂದ ಸತತವಾಗಿ 57 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸಾಂಪ್ರದಾಯಿಕವಾಗಿ ಟಿಕೆಟ್ ನೀಡುತ್ತಾ ಬಂದರು.

ಮೊಹಸೀನ್ ಸತತ 5 ಸಾರಿ ಗೆಲುವು: ಕಾಂಗ್ರೆಸ್ ಪಕ್ಷದ ನಿರ್ಧಾರವು ಅಂದು ಹುಸಿಯಾಗಲಿಲ್ಲ. 1962ರಿಂದ 1980ರವರೆಗೆ ಎಚ್.ಎಫ್. ಮೊಹಸೀನ್ ಅವರೇ ಟಿಕೆಟ್ ಪಡೆದು ಸತತವಾಗಿ ಐದು ಬಾರಿ ಲೋಕಸಭೆ ಪ್ರವೇಶಿಸಿದರು. 1984ರಲ್ಲಿ ಅವರ ಬದಲು ಎ.ಎ. ಅಜೀಜ್​ಶೇಟ್, 1989 ಹಾಗೂ 1991ರಲ್ಲಿ ಬಿ.ಎಂ. ಮುಜಾಹೀದ ಸ್ಪರ್ಧಿಸಿ ಆಯ್ಕೆಯಾದರು. 1996ರಲ್ಲಿ ಐ.ಜಿ. ಸನದಿ ಆಯ್ಕೆಯಾದರು. 1998ರಲ್ಲಿ ಮಾತ್ರ ಮತದಾರರು ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಲೋಕಶಕ್ತಿ ಪಕ್ಷವನ್ನು ಬೆಂಬಲಿಸಿದರು. ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಬಿ.ಎಂ. ಮೆಣಸಿನಕಾಯಿ ಅವರು ಕಾಂಗ್ರೆಸ್ ಅಧಿಪತ್ಯಕ್ಕೆ ಬ್ರೇಕ್ ಹಾಕಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಐ.ಜಿ. ಸನದಿ ಅವರು ಕಾಂಗ್ರೆಸ್​ನಿಂದ ಕಣಕ್ಕಿಳಿದು ಕಾಂಗ್ರೆಸ್ ಭದ್ರಕೋಟೆಯನ್ನು ವಶಪಡಿಸಿಕೊಂಡರು. 2004ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಂಜುನಾಥ ಕುನ್ನೂರ, ಐ.ಜಿ. ಸನದಿ ಅವರನ್ನು ಸೋಲಿಸಿ ಕೈ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು.

2004ರಿಂದ ಕೈ ಧೂಳೀಪಟ: 1952ರಿಂದ 1999ರವರೆಗೆ ನಡೆದ ಚುನಾವಣೆಯಲ್ಲಿ ಒಮ್ಮೆ ಮಾತ್ರ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷವು ಕ್ಷೇತ್ರವನ್ನು ಅಲ್ಪಸಂಖ್ಯಾತ ಮೀಸಲು ಪಟ್ಟಿಯಿಂದ ಬದಲಾವಣೆ ಮಾಡಲಿಲ್ಲ. ಇದರ ಪರಿಣಾಮ 2004ರಿಂದ 2014ರವರೆಗಿನ ಮೂರು ಚುನಾವಣೆಗಳಲ್ಲಿಯೂ ಸತತವಾಗಿ ಹ್ಯಾಟ್ರಿಕ್ ಸೋಲು ಕಂಡಿದೆ. ಈ ಹ್ಯಾಟ್ರಿಕ್ ಸೋಲು ಕೈ ಪಾಳಯದಲ್ಲಿ ಆತಂಕವನ್ನು ತಂದಿತ್ತು. ಹೀಗಾಗಿ ತನ್ನ ಸಾಂಪ್ರದಾಯಿಕ ಪದ್ಧತಿಯ ಬದಲು ಗೆಲುವಿಗಾಗಿ ಬದಲಾವಣೆ ಕಂಡುಕೊಳ್ಳಲೇಬೇಕು ಎಂಬ ಸೂತ್ರಕ್ಕೆ 57 ವರ್ಷದ ನಂತರ ಮೊರೆ ಹೋಗಿರುವುದು ಈಗ ಎದ್ದು ಕಾಣುತ್ತಿದೆ.

ಕ್ಷೇತ್ರ ಬದಲಾವಣೆಯಿಂದ ಚಿತ್ರಣವೂ ಬದಲು: 2009ಕ್ಕೂ ಮೊದಲು ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರವಾಗಿದ್ದ ಸಮಯದಲ್ಲಿದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾವೇರಿ, ಬ್ಯಾಡಗಿ, ಹಿರೇಕೆರೂರ, ರಾಣೆಬೆನ್ನೂರ, ಹಾನಗಲ್ಲ, ಗದಗ ಜಿಲ್ಲೆಯ ಶಿರಹಟ್ಟಿ, ಧಾರವಾಡ ಜಿಲ್ಲೆಯ ಕುಂದಗೋಳ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಕೆಲ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯವೂ ಹೆಚ್ಚಿತ್ತು. ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳೊಂದಿಗೆ ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದ್ದರಿಂದ ಸಹಜವಾಗಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸತತವಾಗಿ ಆಯ್ಕೆಯಾಗಿದ್ದರು. 2009ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆಯಾಗಿ ಶಿಗ್ಗಾಂವಿ, ಕುಂದಗೋಳ ಕ್ಷೇತ್ರಗಳು ಕೈಬಿಟ್ಟು, ಹಾವೇರಿ ಜಿಲ್ಲೆಯ ಐದು, ಗದಗ ಜಿಲ್ಲೆಯ ಮೂರು ಕ್ಷೇತ್ರಗಳು ಸೇರಿ ಹಾವೇರಿ ಲೋಕಸಭೆ ಕ್ಷೇತ್ರವಾಯಿತು. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಪ್ರಬಲರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​ನ ಅಲ್ಪಸಂಖ್ಯಾತ ಗಾಳ ಇಲ್ಲಿ ಸತತವಾಗಿ ಹುಸಿಯಾಗಿದೆ.