ಚಾಮರಾಜನಗರ: ನಗರದ ಕಲ್ಯಾಣ ಮಂಟಪದಲ್ಲಿ ವಧುವಿನ ಕೊಠಡಿಯಲ್ಲಿ ಇಟ್ಟಿದ್ದ ಮುಯ್ಯಿ ಹಣವನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದಾರೆ.
ನಗರದ ವಿರಕ್ತ ಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆಯುತ್ತಿದ್ದ ಕೊತ್ತಲವಾಡಿಯ ಗುರುಪ್ರಸಾದ್ ಮತ್ತು ಬಂಡಿಗೌಡನಹಳ್ಳಿ ಮಹೇಶ್ವರಿ ವಿವಾಹದಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಗಾಳೀಪುರದ ಯಾಸಿನ್ (18) ಪೊಲೀಸರು ಬಂಧಿಸಿದ್ದಾರೆ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕವರ್ ಸುಟ್ಟು ಹಾಕಿದ್ದ: ಮದುವೆಯಲ್ಲಿ ವಧುವಿಗೆ ಸಂಬಂಧಿಕರು, ಹಿತೈಷಿಗಳು ಮುಯ್ಯಿ ಹಣವನ್ನು ನೀಡಿದ್ದರು. ಇದನ್ನು ವಧುವಿನ ಕೊಠಡಿಯಲ್ಲಿ ಇಡಲಾಗಿತ್ತು. ಇಲ್ಲಿಗೆ ಬಂದ ಯಾಸಿನ್ ಹಣವನ್ನು ಕದ್ದು ಪರಾರಿಯಾಗಿದ್ದ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಸಿಸಿಟಿವಿ ಕ್ಯಾಮರಾಗಳಲ್ಲಿ ಪರಿಶೀಲಿಸಿದರು. ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳೂ ಕಳ್ಳನ ಪತ್ತೆಗೆ ನೆರವಾಗಿವೆ. ದೃಶ್ಯಾವಳಿಯಲ್ಲಿ ಯಾಸಿನ್‌ನನ್ನು ಪೊಲೀಸರು ಗುರುತಿಸಿದ್ದಾರೆ. ತಕ್ಷಣ ಈತನ ಮನೆ ಬಳಿಗೆ ಹೋಗಿದ್ದಾರೆ. ಯಾಸಿನ್ ಮುಯ್ಯಿ ಹಣ ತೆಗೆದುಕೊಂಡು ಕವರ್ ಗಳನ್ನು ಸುಟ್ಟು ಹಾಕಿರುವುದು ಗೊತ್ತಾಗಿದೆ. ಯಾಸಿನ್ ನನ್ನು ಬಂಧಿಸಲಾಗಿದೆ. ಪಟ್ಟಣ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.