ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಉತ್ಸವ

| ಪ್ರಶಾಂತ ರಿಪ್ಪನ್​ಪೇಟೆ

ಸುಧಾರಣೆ, ಸಾಹಿತ್ಯ, ಸಂಘಟನೆ ಹಾಗೂ ಧರ್ಮಜಾಗೃತಿಗೆ ಶಿವಶರಣರ ಕೊಡುಗೆ ಅಪಾರ. ಕಲ್ಯಾಣ ಕರ್ನಾಟಕ ಬಸವಾದಿ ಶಿವಶರಣರಿಂದ ಪವಿತ್ರವಾದ ನೆಲ. ಈ ನೆಲದ ಧಾರ್ವಿುಕ ಇತಿಹಾಸವನ್ನು ಶ್ರೀಮಂತಗೊಳಿಸಿದ ಮಹಾನ್ ತಪಸ್ವಿ ಹಾರಕೂಡ ಹಿರೇಮಠದ ಶ್ರೀ ಚನ್ನಬಸವ ಸ್ವಾಮಿಗಳು. ಅವರು ಗಡಿನಾಡು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿರುವ ಹಾರಕೂಡ ಸಂಸ್ಥಾನ ಹಿರೇಮಠದ ಆರನೆಯ ಪೀಠಾಧಿಪತಿಯಾಗಿದ್ದವರು. ಪ್ರಸ್ತುತ ಪೀಠಾಧೀಶರಾದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳ 67ನೆಯ ಜಾತ್ರಾಮಹೋತ್ಸವವು ಇಂದಿನಿಂದ ಐದು ದಿನ (ಡಿ. 10-14) ನಡೆಯಲಿದೆ.

ಗಡಿಭಾಗದ ಸಾಂಸ್ಕೃತಿಕ ಉತ್ಸವ: ಮಠದ ಜಾತ್ರಾ ಮಹೋತ್ಸವವು ಕೇವಲ ಧಾರ್ವಿುಕ ಕಾರ್ಯಕ್ರಮವಾಗಿರದೆ ಸಾಂಸ್ಕೃತಿಕ ಉತ್ಸವವೆಂಬ ಹಿರಿಮೆಯನ್ನೂ ಹೊಂದಿದೆ. ಶ್ರೀ ಚನ್ನಬಸವ ಶಿವಯೋಗಿಗಳು ಲಿಂಗಾಂಗ ಸಾಮರಸ್ಯ ಹೊಂದಿದ ಪರ್ವಕಾಲದಲ್ಲಿ ಜಾತ್ರೆಯನ್ನು ನಡೆಸುವುದು ಪರಂಪರೆ. ಪ್ರತಿ ಪುಷ್ಯ ಶುದ್ಧ ಪಂಚಮಿಯಂದು ರಥೋತ್ಸವ ನಡೆಯುತ್ತದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಚನ್ನಬಸವ ಶಿವಯೋಗಿಗಳ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ ಪಲ್ಲಕ್ಕಿ ಉತ್ಸವ, ಸಂಜೆ ಮಹಾ ರಥೋತ್ಸವ ನಡೆಯಲಿದೆ. 11ರಂದು ರಾಜ್ಯಮಟ್ಟದ ಕುಸ್ತಿಸ್ಪರ್ಧೆ ಏರ್ಪಡಿಸಿದ್ದು, ರಾಜ್ಯ, ಹೊರರಾಜ್ಯದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. 12ರಂದು ಪಶುಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿದಿನ ಶಿವಾನುಭವ ಚಿಂತನ ಸಮಾರಂಭ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಚನ ಸಾಹಿತ್ಯಕ್ಕೆ ಮಠದ ಕೊಡುಗೆ: ಹಾರಕೂಡ ಮಠದ ಸದ್ಯದ ಪೀಠಾಧಿಪತಿಗಳಾಗಿರುವ ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಸ್ವತಃ ವಿದ್ವಾಂಸರಾಗಿ, ಸಾಹಿತಿಗಳಾಗಿ ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಶ್ರೀಮಠದ ಜಾತ್ರೆ ಹಾಗೂ ಇನ್ನಿತರ ವಾರ್ಷಿಕ ಕಾರ್ಯಕ್ರಮಗಳಲ್ಲಿ ನಾನಾ ಕ್ಷೇತ್ರಗಳ ಗಣ್ಯರಿಗೆ ವಿಶೇಷ ಪುರಸ್ಕಾರ ನೀಡುವ ಶ್ರೀಗಳು; ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಒಂದು ಲಕ್ಷ ರೂ. ನಗದನ್ನು ಒಳಗೊಂಡಿರುವ ‘ಶ್ರೀ ಚನ್ನ ರೇಣುಕ ಬಸವ’ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಹಾರಕೂಡ ಮಠವು ಇದುವರೆಗೆ ಸರ್ಕಾರ ಪ್ರಕಟಿಸಿರುವ ಸುಮಾರು 22 ಸಾವಿರ ವಚನಗಳನ್ನು ಇದೇ ಮೊದಲ ಬಾರಿಗೆ ತತ್ವಾಧಾರಿತವಾಗಿ ವಿಂಗಡಿಸಿ ಪ್ರಕಟಿಸಿದೆ. ಹಿರಿಯ ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಅವರ ಸಂಪಾದಕತ್ವದಲ್ಲಿ 40 ಲಕ್ಷ ರೂಪಾಯಿ ವ್ಯಯಿಸಿ 15 ಸಂಪುಟಗಳನ್ನು ಹೊರತಂದಿದೆ.

ಶ್ರೀ ಚನ್ನಬಸವ ಶಿವಯೋಗಿಗಳು

ಅಸ್ಪೃ್ಯತೆಯ ನಿವಾರಣೆಗಾಗಿ ಶತಮಾನಗಳ ಹಿಂದೆಯೇ ದಿಟ್ಟ ಹೆಜ್ಜೆಗಳನ್ನಿಟ್ಟ ಶತಾಯುಷಿ ಶ್ರೀ ಚನ್ನಬಸವ ಶಿವಯೋಗಿಗಳು ಸಮಾಜದಿಂದ ದೂರವಿಡಲ್ಪಟ್ಟವರ ಮನೆಗೂ ಹೋಗಿ ಆಶೀರ್ವಾದ ಮಾಡಿದ್ದರು. ಶ್ರೀಗಳ ದೂರದೃಷ್ಟಿಯ ಈ ಚಿಂತನೆಯನ್ನು ಇಂದಿಗೂ ಶ್ರೀಮಠ ಮುನ್ನಡೆಸಿಕೊಂಡು ಹೋಗುತ್ತಿದೆ. ಮಠದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರá-ವುದು ವಿಶೇಷ.