ಕಲ್ಯಾಣಿ ಸ್ವಚ್ಛಗೊಳಿಸಿದ ಅಧಿಕಾರಿಗಳು

ಚಿಕ್ಕಬಳ್ಳಾಪುರ: ಕಚೇರಿಗಳಲ್ಲಿ ಕಡತಗಳನ್ನು ತಿರುವಿ ಹಾಕಿ, ಜನರ ಅಹವಾಲು ಆಲಿಸುತ್ತಿದ್ದ ವಿವಿಧ ಇಲಾಖೆ ಅಧಿಕಾರಿಗಳು ಬುಧವಾರ ಪೊರಕೆ, ಸಲಿಕೆ, ಬಾಂಡ್ಲಿ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದು ಗಮನಸೆಳೆಯಿತು.

ನಗರದ ಬಸಪ್ಪನ ಛತ್ರದ ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಸ್ವತಃ ಜಿಲ್ಲಾಧಿಕಾರಿ ಪಿ.ಅನಿರುದ್ ಶ್ರವಣ್, ನಗರಾಭಿವೃದ್ಧಿ ಯೋಜನಾಧಿಕಾರಿ ನಟರಾಜ್, ಪೌರಾಯುಕ್ತ ಉಮಾಕಾಂತ್ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಎನ್​ಸಿಸಿ, ಎನ್​ಎಸ್​ಎಸ್, ಸ್ಕೌಟ್ಸ್ ಆಂಡ್ ಗೈಡ್ಸ್ ಸೇರಿ ಸುಮಾರು 100 ಕ್ಕೂ ಹೆಚ್ಚು ಸ್ವಯಂಸೇವಕರು ಹಲವು ವರ್ಷಗಳಿಂದ ಕಲ್ಯಾಣಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಲ್ಲು ಮಣ್ಣು, ಪೇಪರ್ಸ್, ಬಾಟಲಿ ಸೇರಿ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಜಿಲ್ಲಾಧಿಕಾರಿ ಪಿ.ಅನಿರುದ್ ಶ್ರವಣ್ ಮಾತನಾಡಿ, ನೀರು ಸಂಗ್ರಹ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆರೆ, ಕಾಲುವೆಗಳನ್ನು ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಇದನ್ನರಿತು ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಆಯಾ ವ್ಯಾಪ್ತಿಯಲ್ಲಿರುವ ಕಲ್ಯಾಣಿಗಳನ್ನು ಗುರುತಿಸಿ ಪುನಶ್ಚೇತನಕ್ಕೆ ಮುಂದಾಗಲು ಈಗಾಗಲೇ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಲ್ಲಿ ಪೂರ್ಣ ಪ್ರಮಾಣದ ಗುರಿ ಸಾಧನೆಯು ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದರು. ಉಪನ್ಯಾಸಕ ಸತೀಶ್ ಮತ್ತಿತರರು ಇದ್ದರು.