ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಿಗಲಿ

ಲಕ್ಷ್ಮೇಶ್ವರ: ಕಲೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬಿಂಬಿಸುವ ಸಾಧನ. ಸಮಾಜದ ವಿವಿಧ ಸ್ತರಗಳಲ್ಲಿನ ಸಮಸ್ಯೆಗಳ ಅನಾವರಣ ಮತ್ತು ಜಾಗೃತಿ ಮೂಡಿಸುವ ಕಾರ್ಯ ಕಲೆ, ಕಲಾವಿದರು ಮಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ, ಆಸ್ವಾಧಿಸುವ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ಪಟ್ಟಣದ ಪುರಸಭೆಯ ಕಲಾ ಮಹಾವಿದ್ಯಾಲಯದಲ್ಲಿ ಗೊಜನೂರಿನ ‘ಓ..ಕೀರ್ತಿ’ ಪ್ರತಿಷ್ಠಾನದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ವ್ಯಂಗ್ಯ ಚಿತ್ರಕಾರ ನಾಮದೇವ ಕಾಗದಗಾರ ಅವರ ಸಾಮಾಜಿಕ ಜಾಗೃತಿ ವ್ಯಂಗ್ಯ ಚಿತ್ರಗಳ ಪ್ರದರ್ಶನ ಹಾಗೂ ಸ್ಥಳೀಯ ಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನಕ್ಕೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಡಾ.ರಾಜಶೇಖರ ದಾನರೆಡ್ಡಿ, ಸಾಹಿತಿ ಸಿ.ಜಿ. ಹಿರೇಮಠ ಮಾತನಾಡಿ, ವ್ಯಂಗ್ಯ ಚಿತ್ರ ಕಲಾವಿದರು ರಾಜಕೀಯ ವಿಡಂಬನಾತ್ಮಕ ಚಿತ್ರಗಳನ್ನು ಬರೆದು ರಾಜಕಾರಣಿಗಳನ್ನು ಎಚ್ಚರಿಸುವ ಕಾರ್ಯವನ್ನು ಚಿತ್ರಗಳ ಮೂಲಕ ಮಾಡಬಲ್ಲರು. ಆದ್ದರಿಂದ ಕಲಾವಿದರ ಚಿತ್ರದಲ್ಲಿನ ಸಂದೇಶಗಳನ್ನು ಅರಿತುಕೊಳ್ಳಬೇಕು ಎಂದರು.

ಪ್ರತಿಷ್ಠಾನ ಅಧ್ಯಕ್ಷ ಬಿ.ಎನ್. ಸಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯಂಗ್ಯ ಚಿತ್ರಕಾರ ನಾಮದೇವ ಕಾಗದಗಾರ, ಪ್ರಾಚಾರ್ಯ ಎಚ್.ಎನ್. ಕೆರೂರ, ಪಿ.ಬಿ. ಕರಾಟೆ, ಕರಿಯಪ್ಪ ಶಿರಹಟ್ಟಿ, ಅಮರಪ್ಪ ಗುಡಗುಂಟಿ, ಶ್ರೀಕಾಂತ ಗೊಂದಿ, ಇತರರು ಇದ್ದರು. ಪಿ.ಪಿ. ಛಲವಾದಿ, ಎಂ.ಬಿ. ಪಾಟೀಲ ಹಾಗೂ ಕರಿಯಪ್ಪ ಸಂಶಿ ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯ ಕಲಾವಿದರಾದ ಪ್ರವೀಣ ಗಾಯಕರ, ರಾಜೇಶ ಉಮಚಗಿ, ವೀರಪ್ಪ ತಾಳದವರ, ಪ್ರವೀಣ ಲಚ್ಯಾಣ, ಅಶೋಕ ಹಾಲಣ್ಣವರ, ರಾಜು ಸೂರಣಗಿ, ಸಂತೋಷ ಕ್ಯಾದಿಗೇರಿ, ಸುರೇಶ ಬೆಟಗೇರಿ, ವಿಜಯ ಹುಲಬಜಾರ, ನಕುಲ ಕುಂಚೂರು, ಮಹೇಶ ದೊಡ್ಡಮನಿ, ವಿ.ಡಿ. ಹುಲಬಜಾರ ಅವರ ಚಿತ್ರಕಲಾಕೃತಿಗಳ ಪ್ರದರ್ಶನ ಜರುಗಿತು.