ಕಲುಷಿತ ನೀರು ತುಂಗಭದ್ರೆ ಪಾಲು

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ತಾಲೂಕಿನ ಕುಮಾರ ಪಟ್ಟಣ ಸಮೀಪದ ನಲವಾಗಲ ಗ್ರಾಮದಲ್ಲಿನ ಕಾರ್ಖಾನೆಯೊಂದರ ಕಲುಷಿತ ನೀರು ತುಂಗಭದ್ರಾ ನದಿ ಸೇರುತ್ತಿದ್ದು, ಜಲಚರಗಳ ಜೀವಕ್ಕೆ ಕಂಟಕವಾಗಿದೆ. ಜನ-ಜಾನುವಾರು ಕುಡಿಯಲು ಅಯೋಗ್ಯವಾಗಿದೆ.

ಹರಿಹರ ಪಾಲಿಫೈಬರ್ಸ್​ಗೆ ಸೇರಿದ, ತುಂಗಭದ್ರಾ ನದಿ ತಟದಲ್ಲಿರುವ ಕಾರ್ಖಾನೆಯ ನಿರುಪಯುಕ್ತ ರಾಸಾಯನಿಕ ಮಿಶ್ರಿತ ನೀರು ನದಿಯ ಪಾಲಾಗುತ್ತಿದೆ. ಇದರಿಂದ ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ನಲವಾಗಲು, ಐರಣಿ, ಹಿರೇಬಿದರಿ, ಸೋಮಲಾಪುರ ಸೇರಿ ಹಲವು ಗ್ರಾಮಗಳ ಜನ- ಜಾನುವಾರು ಕಲುಷಿತಗೊಂಡ ನೀರನ್ನೇ ಬಳಸುವಂತಾಗಿದೆ.

ಅಧಿಕಾರಿಗಳು ಮೌನ: ರಾಸಾಯನಿಕ ಮಿಶ್ರಿತ ನೀರನ್ನು ಜಲಮೂಲಗಳಿಗೆ ಸೇರಿಸುವುದು ಕಾನೂನು ಬಾಹಿರವಾಗಿದ್ದು, ಕಾರ್ಖಾನೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಿಡಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿನ ಕಾರ್ಖಾನೆಯಲ್ಲಿ ನೆಪ ಮಾತ್ರಕ್ಕೆ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಹಗಲು ವೇಳೆ ನದಿಯ ನೀರನ್ನು ಕಾರ್ಖಾನೆಯಲ್ಲಿ ಬಳಸಿ, ಸುಮಾರು 9 ಮಾನವ ನಿರ್ವಿುತ ಕೆರೆಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಇದೆಲ್ಲ ನದಿ ಸೇರುವುದು ರಾತ್ರಿ ವೇಳೆ ಹಾಗೂ ನದಿಯ ನೀರಿನ ಹರಿವು ಹೆಚ್ಚಾದಾಗ ಎಂಬುದು ಗಮನಾರ್ಹ. ಭೌಗೋಳಿಕವಾಗಿ ತಾಲೂಕಿಗೆ ಸೇರಿದ ಪ್ರದೇಶವಾದರೂ, ಆಡಳಿತಾತ್ಮಕವಾಗಿ ದಾವಣಗೆರೆ ಜಿಲ್ಲೆಗೆ ಕಾರ್ಖಾನೆಯು ಸೇರ್ಪಡೆಯಾಗಿದೆ. ಈ ಎಲ್ಲ ವಿಷಯಗಳು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಕ್ಕಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಇರುವುದು ಒಂದೇ ಜಾತಿ ಮೀನು: ಕಾರ್ಖಾನೆಗಿಂತ ಮುಂದಿನ ನದಿ ಪಾತ್ರದಲ್ಲಿ ಕೇವಲ ಬಾಂಬೆ ಕಾಟ್ಲ (ಗ್ರಾಮೀಣ ಭಾಷೆಯಲ್ಲಿ ಜಿಲೇಬಿ) ಎಂದು ಕರೆಯಲ್ಪಡುವ ಮೀನು ಮಾತ್ರ ಜೀವಿಸುತ್ತಿದೆ. ಕಾರ್ಖಾನೆ ನೀರು ನದಿ ಸೇರುವುದಕ್ಕೂ ಮುನ್ನ ಗೌರಿ, ಮರುಗೋಡು ಸೇರಿ ನಾನಾ ಜಾತಿಯ ಮೀನುಗಳು, ಏಡಿ, ಮತ್ತಿತರ ಜಲಚರಗಳು ಜೀವಿಸುತ್ತಿದ್ದವು. ಆದರೆ, ಕಾರ್ಖಾನೆಯ ನೀರು ಹರಿಯುವ ಪ್ರದೇಶದಲ್ಲಿ ಬಾಂಬೆ ಕಾಟ್ಲಾ ಮೀನು ಮಾತ್ರ ಜೀವಿಸುತ್ತಿದೆ. ಇದು ಕೊಳಚೆ ನೀರಿನಲ್ಲಿಯೂ ಬದುಕುವ ಜೀವಿ. ಇದನ್ನು ಕಾರ್ಖಾನೆಯವರೇ ಪರಿಸರ ಇಲಾಖೆಯ ಕಣ್ಣಿಗೆ ಮಣ್ಣೆರಚಲು ನದಿಯಲ್ಲಿ ಬಿಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ ಸ್ಥಳೀಯ ಮೀನುಗಾರರು.

ಕಾರ್ಖಾನೆಯ ಕಲುಷಿತ ನೀರಿನಿಂದಾಗಿ ನದಿಯು ನೈಸರ್ಗಿಕ ಬಣ್ಣ ಕಳೆದುಕೊಂಡು ಕೆಂಪು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಒಟ್ಟಾರೆ ಜನ-ಜಾನುವಾರು ಹಾಗೂ ಜಲಚರಗಳಿಗೆ ಮಾರಕವಾಗಿರುವ ಕಲುಷಿತ ನೀರು ನದಿಗೆ ಸೇರ್ಪಡೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕಾದ ತುರ್ತು ಅಗತ್ಯವಿದೆ.

ಮಾಹಿತಿನೇ ಇಲ್ವಂತೆ !: ಕುಮಾರ ಪಟ್ಟಣ ಸಮೀಪದ ಕಾರ್ಖಾನೆಯು ಭೌಗೋಳಿಕವಾಗಿ ರಾಣೆಬೆನ್ನೂರ ತಾಲೂಕಿಗೆ ಸೇರಿದರೂ, ಆಡಳತಾತ್ಮಕ ನಿರ್ವಹಣೆಗೆ ದಾವಣಗೆರೆಗೆ ಸೇರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎನ್ನುತ್ತಾರೆ ಹಾವೇರಿ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ. ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಕೊಟ್ರೇಶ ಅವರನ್ನು ಸಂರ್ಪಸಿದಾಗಲೂ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಉಳಿದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಕುಮಾರಪಟ್ಟಣ ಸಮೀಪ ಇರುವ ಕಾರ್ಖಾನೆಯ ಕುಲುಷಿತ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಚರಗಳ ಜೀವಕ್ಕೆ ಕುತ್ತು ಬಂದೊದಗಿದೆ. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಬಾಂಬೆ ಕಾಟ್ಲಾ ಎಂಬ ಮೀನನ್ನು ನದಿಗೆ ಬಿಡಲಾಗಿದೆ. ಇದು ಎಂತಹ ಕಲ್ಮಶದಲ್ಲಿಯೂ ಜೀವಿಸುವ ಮೀನಾಗಿದೆ. ಸಂಬಂಧಪಟ್ಟವರು ಈವರೆಗೂ ಮೌನ ವಹಿಸಿರುವುದು ಖಂಡನೀಯ.
| ಕೊಟ್ರೇಶ ಯು. ಕುದರಿಹಾಳ, ಸಾಮಾಜಿಕ ಹೋರಾಟಗಾರ