ಅರಕಲಗೂಡು: ಶೈಕ್ಷಣಿಕವಾಗಿ ಉನ್ನತಿ ಸಾಧಿಸಿದ ಸಮಾನ ಮನಸ್ಕ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ನೀವು ಕಲಿತ ಶಾಲೆಯ ಅಭಿವೃದ್ಧಿಗೆ ನೆರವಾಗುವ ಮೂಲಕ ಸಂತಸ ಕಾಣುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಸಲಹೆ ನೀಡಿದರು.
ಪಟ್ಟಣದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿ ಬಳಗ ಸೋಮವಾರ ಹಮ್ಮಿಕೊಂಡಿದ್ದ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ಲಕ್ಷ ರೂ.ವೆಚ್ಚದಲ್ಲಿ ಆಡಿ ಟೋರಿಯಂ ಕೊಠಡಿಯನ್ನು ನವೀಕರಿಸಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ಡಾ.ಎ.ಎಂ.ನಾಗೇಶ್, ಶ್ರೀನಿವಾಸ್, ಮಾನಸಾದೇವಿ ಸೇರಿದಂತೆ ಹಲವರು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ನಿವೃತ್ತ ಉಪನ್ಯಾಸಕ ಬಳ್ಳಾರಿಯ ಎಚ್.ಎಂ.ಚಿದಾನಂದಯ್ಯ, ಬಸವಾಪಟ್ಟಣದ ಟಿ.ವಿ.ಚಂದ್ರಶೇಖರಯ್ಯ, ಬೆಂಗಳೂರಿನ ಎಸ್.ರಾಜಾರಾಮ್, ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಬಿ.ಕೆ. ರಾಮಸ್ವಾಮಿ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗುರುವಂದನೆ ಸಲ್ಲಿಸಲಾಯಿತು.
ಸನ್ಮಾನಿತರಾದ ಗುರುಗಳು ಮಾತನಾಡಿ, 5 ದಶಕಗಳ ಬಳಿಕ ಪುನರ್ಮಿಲನಗೊಂಡು ತಮ್ಮನ್ನು ಕರೆಸಿ ಗೌರವಿಸಿರುವುದು ಸಂತಸ ತಂದಿದೆ. ಶಾಲೆಯ ಅಭಿವೃದ್ಧಿಗೆ ನೆರವಾಗಿರುವ ಮೂಲಕ ಉತ್ತಮ ಕಾರ್ಯ ನಡೆಸಿದ್ದೀರಿ, ಇದು ಹೀಗೇ ಮುಂದುವರಿಯಲಿ ಎಂದು ಹಾರೈಸಿದರು. ಸಾನ್ನಿಧ್ಯ ವಹಿಸಿದ್ದ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಶಿವ ಸುಜ್ಞಾನತೀರ್ಥ ಸ್ವಾಮೀಜಿ ತಾವೂ ಈ ಹಳೆ ವಿದ್ಯಾರ್ಥಿ ತಂಡದೊಂದಿಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದನ್ನು ನೆನಪು ಮಾಡಿಕೊಂಡರು. ಉಪ ಪ್ರಾಂಶುಪಾಲ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ನಿರಂತರವಾಗಿ ಕಾರ್ಯಕ್ರಮ ನಡೆಸುವುದಲ್ಲದೆ ಶಾಲೆಯ ಸಮಗ್ರ ಅಭೀವೃದ್ಧಿಗೆ ನೆರವಾಗುವ ಕುರಿತು ರೂಪು ರೇಷೆಗಳನ್ನು ನಡೆಸುತ್ತಿದ್ದು ಎಲ್ಲ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುವಂತೆ ವಕೀಲ ಜನಾರ್ದನ ಗುಪ್ತ ಕೋರಿದರು.