ಕಲರ್ಸ್ ಸೂಪರ್​ನಲ್ಲಿ ಜೂನ್ ತಿಂಗಳ ಧಮಾಕಾ

ಶುರುವಾಗಲಿವೆ ಎಂಟು ವಿಭಿನ್ನ ಕಾರ್ಯಕ್ರಮಗಳು

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಡಿಫರೆಂಟ್ ಕಾರ್ಯಕ್ರಮಗಳ ಮೂಲಕ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಮನೆಮಾತಾಗಿದೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ‘ಕಲರ್ಸ್ ಸೂಪರ್’ ಕೂಡ ಪ್ರಸಾರ ಆರಂಭಿಸಿ, ನೋಡುಗರ ಮನೆ-ಮನಗಳಿಗೆ ಹತ್ತಿರವಾಗಿದೆ. ಇದೀಗ ವೀಕ್ಷಕರಿಗೆ ಬಂಪರ್ ಕೊಡುಗೆಯೊಂದನ್ನು ‘ಕಲರ್ಸ್ ಸೂಪರ್’ ನೀಡಿದೆ. ಏನದು? ‘ಜೂನ್ ತಿಂಗಳು ಸೂಪರ್ ತಿಂಗಳು’ ಎಂಬ ಪರಿಕಲ್ಪನೆಯಡಿಯಲ್ಲಿ ಒಂದೇ ತಿಂಗಳಲ್ಲಿ ಎಂಟು ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವುದಕ್ಕೆ ಸಜ್ಜಾಗಿದೆ. ವಿಶೇಷವೆಂದರೆ, ಟಿ.ಎನ್. ಸೀತಾರಾಮ್ ಸಿಹಿ-ಕಹಿ ಚಂದ್ರು ಅವರಂತಹ ಹಿರಿಯ ನಿರ್ದೇಶಕರು ಕಿರುತೆರೆಗೆ ಮರಳುತ್ತಿದ್ದಾರೆ. ಗುರುಕಿರಣ್, ಸಾಧು ಕೋಕಿಲ, ರಚಿತಾ ರಾಮ್ ರಿಯಾಲಿಟಿ ಶೋ ಜಡ್ಜ್ ಗಳಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ‘ಬಿಗ್​ಬಾಸ್ ಸೀಸನ್ 5ರ ಮೂಲಕ ಕಲರ್ಸ್ ಸೂಪರ್ ವಾಹಿನಿಯು ಕನ್ನಡಿಗರ ಮನೆಮಾತಾಗಿದೆ. ಇದೀಗ ಪ್ರಸಾರಗೊಳ್ಳಲು ಸಜ್ಜಾಗಿರುವ ಎಂಟು ಕಾರ್ಯಕ್ರಮಗಳು ಕೂಡ ವಿಭಿನ್ನ ಶೈಲಿ ಹಾಗೂ ವಿಶಿಷ್ಟ ನಿರೂಪಣೆಯನ್ನು ಹೊಂದಿವೆ’ ಎನ್ನುತ್ತಾರೆ. ಈ ತಿಂಗಳಲ್ಲಿ ಸಿಗಲಿರುವ ರಂಗುರಂಗಿನ ಮನರಂಜನೆ ಬಗ್ಗೆ ಇಲ್ಲಿದೆ ಮಾಹಿತಿ…

32 ಜನರ ಮನೆಯೇ ಮಂತ್ರಾಲಯ

ಕೃಷ್ಣವೇಣಿ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಅವಳೀಗ 32 ಜನ ಇರುವ ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಹೋಗುತ್ತಿದ್ದಾಳೆ. ಅಲ್ಲಿ ಅವಳು ಏನೆಲ್ಲ ಸವಾಲುಗಳನ್ನು ಎದುರಿಸಲಿದ್ದಾಳೆ ಎಂಬುದೇ ‘ಮನೆಯೇ ಮಂತ್ರಾಲಯ’ದ ಕಥೆ.

ಭಕ್ತಿಪ್ರಧಾನ ವೀಣಾಪಾಣಿ

ಸುಜಯ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಇವಳೇ ವೀಣಾಪಾಣಿ’ ಒಂದು ಭಕ್ತಿ ಪ್ರಧಾನ ಧಾರಾವಾಹಿ. ಶಾರದಾಂಬೆಯ ಭಕ್ತೆಯೊಬ್ಬಳ ಬದುಕಿನಲ್ಲಿ ನಡೆಯುವ ಘಟನಾವಳಿಗಳೇ ಈ ಧಾರಾವಾಹಿ ಪ್ರಮುಖಾಂಶಗಳು. ಸುಮಾರು ಒಂದು ವರ್ಷ ಕಷ್ಟಪಟ್ಟು ಈ ಧಾರಾವಾಹಿಗೆ ಕಥೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು.

ಮಜಾ ಭಾರತದಲ್ಲಿ ರಚಿತಾ, ಗುರು

ಕಲರ್ಸ್ ಸೂಪರ್​ನ ಕಾಮಿಡಿ ರಿಯಾಲಿಟಿ ಶೋ ‘ಮಜಾ ಭಾರತ’ದಲ್ಲಿ ನಟಿ ರಚಿತಾ ರಾಮ್ ಸಂಗೀತ ನಿರ್ದೇಶಕ ಗುರುಕಿರಣ್ ಎಂಟ್ರಿಯಾಗಿದೆ. ನಿರಂಜನ್ ದೇಶಪಾಂಡೆ ಇದರ ನಿರೂಪಕರು. ‘ಬಿಗ್ ಬಾಸ್’ ಖ್ಯಾತಿಯ ದಿವಾಕರ್ ಕೂಡ ಇರಲಿದ್ದಾರೆ. ಅವರ ಜವಾಬ್ದಾರಿ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಮಗಳು ಜಾನಕಿ ಜತೆಗೆ ಟಿಎನ್ನೆಸ್

ಕಿರುತೆರೆಯಲ್ಲಿ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರದು ದೊಡ್ಡ ಹೆಸರು. ಸಣ್ಣ ಗ್ಯಾಪ್ ನಂತರ ಅವರೀಗ ‘ಮಗಳು ಜಾನಕಿ’ಯೊಂದಿಗೆ ಮರಳಿದ್ದಾರೆ. ಅಪ್ಪ-ಮಗಳ ಬಾಂಧವ್ಯದ ಕಥೆ ಇದಾಗಿದ್ದು, ಮತ್ತೊಂದು ಯಶಸ್ವಿ ಧಾರಾವಾಹಿ ನೀಡುವ ತವಕದಲ್ಲಿದ್ದಾರೆ ಟಿಎನ್ನೆಸ್.

ಶ್ರಾವಣಿಯ ಮಾಂಗಲ್ಯಂ ತಂತುನಾನೇನ

ಎಲ್ಲ ವಿಚಾರಗಳಲ್ಲೂ ಅದೃಷ್ಟ ಇರುವ ಶ್ರಾವಣಿಗೆ ಮದುವೆ ವಿಷಯದಲ್ಲಿ ಮಾತ್ರ ಅದೃಷ್ಟ ಇರುವುದಿಲ್ಲ. ಎಷ್ಟೇ ಹುಡುಕಿದರೂ, ಒಳ್ಳೆಯ ಗಂಡು ಸಿಗುತ್ತಿರುವುದಿಲ್ಲ. ಇದನ್ನೇ ಪ್ರಮುಖ ಎಳೆಯಾಗಿಟ್ಟುಕೊಂಡು ಸಿದ್ಧಗೊಂಡಿದೆ ‘ಮಾಂಗಲ್ಯಂ ತಂತುನಾನೇನ’.

ಪಾಂಡು-ಶ್ರೀಮತಿ ಪ್ರಹಸನ

15 ವರ್ಷಗಳ ಹಿಂದೆ ಕಿರುತೆರೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಧಾರಾವಾಹಿ ‘ಪಾ.ಪ. ಪಾಂಡು’. ಇದೀಗ ಅದೇ ಬಳಗ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ. ಸಿಹಿ ಕಹಿ ಚಂದ್ರು ‘…ಪಾಂಡು’ ಕುಟುಂಬಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಪಾಂಡುಗೆ ಪುಂಡ ಎಂಬ ಮಗನಿದ್ದಾನೆ. ಅವನಿಗೀಗ ಮದುವೆಯಾಗಿದ್ದು, ಚಾರು ಎಂಬ ಸೊಸೆ ಪಾಂಡು ಮನೆ ಸೇರಿಕೊಂಡಿದ್ದಾಳೆ.

ರಾಜ-ರಾಣಿಯ ಪ್ರೇಮ್ ಕಹಾನಿ

ಏನೇ ಕೆಲಸ ಮಾಡಿದರೂ, ಏನಾದರೊಂದು ಎಡವಟ್ಟು ಮಾಡಿಕೊಳ್ಳುವ ‘ಚುಕ್ಕಿ’ ಒಂದುಕಡೆಯಾದರೆ, ಅವಳ ಅಕ್ಕನಿಗೆ ಮದುವೆ ಫಿಕ್ಸ್ ಆಗಿದೆ. ಆ ಮದುವೆಯಲ್ಲಿ ರಾಣಿ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಾಳಾ? ಅಲ್ಲಿಂದ ರಾಣಿ ಬದುಕಲ್ಲಿ ಏನೆಲ್ಲ ಆಗಲಿದೆ ಎಂಬುದೇ ‘ರಾಜ ರಾಣಿ’ ಕಥೆ.

ಕೋಗಿಲೆ ಹುಡುಕಾಟದಲ್ಲಿ ಸಾಧು-ಚಂದನ್

ಸಾಧು ಕೋಕಿಲ ನಟನೆಯಲ್ಲಿ ಎಷ್ಟು ಪ್ರಖ್ಯಾತರೋ, ಸಂಗೀತ ನಿರ್ದೇಶನದಲ್ಲೂ ಅಷ್ಟೇ ಜನಪ್ರಿಯರು. ಇದೀಗ ಅವರು ಮೊದಲ ಬಾರಿಗೆ ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಇದರ ಜತೆಗೆ ‘ಬಿಗ್ ಬಾಸ್’ ವಿನ್ನರ್ ಚಂದನ್ ಶೆಟ್ಟಿ, ಅರ್ಚನಾ ಉಡುಪ ಕೂಡ ಇರಲಿದ್ದಾರೆ.

Leave a Reply

Your email address will not be published. Required fields are marked *