ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಜಾಧವ್​ ಕಾರು ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು

ಕಲಬುರಗಿ: ಕೆಬಿಎನ್ ದರ್ಗಾ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಕಾರನ್ನು ಮಂಗಳವಾರ ಸಂಜೆ ಅಡ್ಡಗಟ್ಟಿದ ಕಾಂಗ್ರೆಸಿಗರೆಂದು ಹೇಳಿಕೊಂಡ ಕೆಲವರು ದುಂಡಾವರ್ತನೆ ನಡೆಸಿದ್ದಾರೆ.
ಡಾ.ಜಾಧವ್ ಕೆಬಿಎನ್ ಕಾಲೇಜು ಬಳಿ ಮತಗಟ್ಟೆಗೆ ತೆರಳಲು ಕಾರಿನಲ್ಲಿ ಹೋಗುತ್ತಿರುವಾಗ ಕೆಲವರು ತಡೆದು ಮುತ್ತಿಗೆ ಹಾಕಿ ದಾಳಿಗೆ ಪ್ರಯತ್ನಿಸಿದರು ಎನ್ನಲಾಗಿದೆ. ಸೂಕ್ಷ್ಮತೆ ಅರಿತ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು. ಇದು ಕಾಂಗ್ರೆಸಿಗರ ಕುತಂತ್ರ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂಥ ಕೆಲಸ ನಡೆದಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ.
ಸೇಡಂನಲ್ಲೂ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಪರ ಇರುವ ಮುಸ್ಲಿಂ ಕಾರ್ಯಕರ್ತರನ್ನು ಕಾಂಗ್ರೆಸಿಗರು ತಡೆದಿದ್ದಕ್ಕೆ ಜಟಾಪಟಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್ ಮತ್ತು ಬಿಜೆಪಿ ಮುಖಂಡ ಇಕ್ಬಾಲ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಸ್ಥಿತಿ ತಿಳಿಗೊಳಿಸಿದರು.
ಕಲಬುರಗಿ ಎಂಎಸ್ಕೆ ಮಿಲ್ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿಯವರ ನಡುವೆ ಜಟಾಪಟಿ ನಡೆದಿದೆ. ಶಹಾಬಜಾರ್, ಜೇವರ್ಗಿ, ಚಿತ್ತಾಪುರ, ಅಫಜಲಪುರ ತಾಲೂಕಿನ ಕೆಲ ಹಳ್ಳಿ ಮತಗಟ್ಟೆಗಳಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿವೆ. ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಪಂ ಮಾಜಿ ಅಧ್ಯಕ್ಷ ಪಡಶೆಟ್ಟಿ ಎಂಬುವರಿಗೆ ಕಾಂಗ್ರೆಸ್ ಪರವಾಗಿ ಡಿಎಸ್ಎಸ್ ಕಾರ್ಯಕರ್ತರೆಂದು ಹೇಳಿಕೊಂಡ ಕೆಲವರು ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗರ್ಮಾ ಗರಂ ಚರ್ಚೆಗೆ ನಾಂದಿ ಹಾಡಿತು.

Leave a Reply

Your email address will not be published. Required fields are marked *