ಕಲಬುರಗಿ ಕ್ಷೇತ್ರದಲ್ಲಿ ಶೇ.59.39 ಮತದಾನ

ಕಲಬುರಗಿ: ಸುಡು ಬಿಸಿಲ ಮಧ್ಯೆಯೂ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತವಾಗಿ ಶೇ.57.63 ಮತದಾನವಾಗಿದೆ. ಚಿಕ್ಕ-ಪುಟ್ಟ ಘಟನೆ ಹೊರತುಪಡಿಸಿದರೆ ಮತದಾನಕ್ಕೆ ಯಾವುದೇ ಅಡ್ಡಿ ಆತಂಕ ಎದುರಾಗಲಿಲ್ಲ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ಬಿಂಬಿತವಾಗಿತ್ತು.
ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಡಾ.ಉಮೇಶ ಜಾಧವ್ ಖರ್ಗೆ ಅವರಿಗೆ ಬಿರುಸಿನ ಟಕ್ಕರ್ ನೀಡಿದ್ದರು. ಮತದಾನದ ಬಳಿಕ ಈ ಇಬ್ಬರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ 23ರಂದು ಮತ ಎಣಿಕೆ ಬಳಿಕ ಯಾರಿಗೆ ಜಯದ ಮಾಲೆ ಎಂಬುದು ಸ್ಪಷ್ಟವಾಗಲಿದೆ.
ಲಭ್ಯ ಮಾಹಿತಿ ಪ್ರಕಾರ, ಸಂಜೆ 6ರವರೆಗೆ ಜಿಲ್ಲೆಯಲ್ಲಿ ಶೇ.59.39 ಮತದಾನವಾಗಿದೆ. ಖಡಕ್ ಬಿಸಿಲಿನ ಹಿನ್ನೆಲೆಯಲ್ಲಿ ಬೆಳಗ್ಗೆ 7ಕ್ಕೇ ಮತದಾರರು ಮತ ಚಲಾಯಿಸಲು ತಮ್ಮ ತಮ್ಮ ಮತಗಟ್ಟೆಗಳಿಗೆ ಆಗಮಿಸಿದರು. ಮಧ್ಯಾಹ್ನ 12ರವರೆಗೆ ಹೆಚ್ಚೂ ಕಡಿಮೆ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಸಾಲು ಕಂಡುಬಂದಿತು. ನಂತರ ಬಿಸಿಲಿನ ಪ್ರಖರತೆಗೆ ಹೆದರಿದ ಜನತೆ ಸಂಜೆ 4ರವರೆಗೆ ನಿರೀಕ್ಷಿತ ಮಟ್ಟದಲ್ಲಿ ಮತಗಟ್ಟೆಗಳತ್ತ ಮುಖ ಮಾಡಲಿಲ್ಲ. ಸಂಜೆಯಾಗುತ್ತಲೇ ಮತ್ತೆ ಮತದಾನ ಚುರುಕುಗೊಂಡಿತು.
ಗೆಲುವಿಗಾಗಿ ಇಬ್ಬರೂ ಇನ್ನಿಲ್ಲದ ಕಸರತ್ತು, ಕರಾಮತ್ತು ನಡೆಸಿದ್ದಾರೆ. ಕೊನೇ ಘಳಿಗೆವರೆಗೂ ಜೋರ್ದಾರ್ ಟಕ್ಕರ್ ನಡೆದಿದ್ದರಿಂದ ಮತದಾರ ಪ್ರಭು ಇಬ್ಬರಲ್ಲಿ ಯಾರು ಹಿತವರು ಎನ್ನುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಮತದಾನ ನಂತರವೂ ಹೆಚ್ಚಿನ ಜನ ಇಬ್ಬರಿಗೂ ಫಿಫ್ಟಿ-ಫಿಫ್ಟಿ ಗೆಲುವಿನ ಚಾನ್ಸ್ ಎನ್ನುತ್ತಿದ್ದಾರೆ. ಇದು ಅಭ್ಯರ್ಥಿ ಹಾಗೂ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ತಳಮಳ ಸೃಷ್ಟಿಸಿದೆ. ಫಲಿತಾಂಶ ಬರಲು ಇನ್ನೊಂದು ತಿಂಗಳು (ಮೇ 23) ಬಾಕಿಯಿದ್ದು, ಅಲ್ಲಿವರೆಗೆ ಲೆಕ್ಕಾಚಾರಗಳದ್ದೇ ಕಾರುಬಾರು.
ಮತದಾನ ಶಾಂತ ಮತ್ತು ಸುವ್ಯವಸ್ಥಿತ ನಡೆವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸೂಕ್ಷ್ಮ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿತ್ತು. ಪೊಲೀಸ್ ಬಲದ ಜತೆಗೆ ಅರೆಸೇನಾ ಪಡೆ(ಪ್ಯಾರಾ ಮಿಲಿಟರಿ ಫೋರ್ಸ್​) ಕಂಪನಿಗಳು ಸಹ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದವು.
ಮತದಾನ ಪ್ರಕ್ರಿಯೆ ಸುರಳಿತ ನಡೆಯುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ ನಗರ ಸೇರಿ ವಿವಿಧೆಡೆ ಅನೇಕ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸಂಪೂರ್ಣ ಪರಿಸ್ಥಿತಿ ಅವಲೋಕಿಸುವ ಜತೆಗೆ ಕರ್ತವ್ಯದಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಜತೆಗೂ ನೇರ ಸಂಪರ್ಕ ಮಾಡುತ್ತ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಿದರು.
ವಿಧಾನಸಭೆ ಕ್ಷೇತ್ರವಾರು ಮತದಾನದ ಶೇಕಡಾವಾರು ವಿವರ ಹೀಗಿದೆ. ಕಲಬುರಗಿ ಉತ್ತರ 56.95, ಕಲಬುರಗಿ ದಕ್ಷಿಣ 52.21, ಕಲಬುರಗಿ ಗ್ರಾಮೀಣ 55.89, ಗುರುಮಠಕಲ್ 56.66, ಜೇವರ್ಗಿ 50.85, ಅಫಜಲಪುರ 59.75, ಸೇಡಂ 64.83 ಮತ್ತು ಚಿತ್ತಾಪುರ 59.26 ಮತದಾನವಾಗಿದೆ ಎಂದು ವರದಿಗಳ ತಿಳಿಸಿವೆ.
ಕಳೆದ ಬಾರಿಗೆ ಹೋಲಿಸಿದರೆ ಮತದಾನ ಪ್ರಮಾಣ ಸ್ವಲ್ಪ ಕಮ್ಮಿಯಾಗಿದೆ. ಕಳೆದ ಬಾರಿ ಶೇ.57.9 ಮತದಾನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ನ ಖರ್ಗೆ ಕಲಬುರಗಿ ಬಸವನಗರದಲ್ಲಿ ಮತದಾನ ಮಾತನಾಡಿದರೆ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಕಾಳಗಿ ತಾಲೂಕಿನ ಬೆಡಸೂರು ತಾಂಡಾ, ಜಿಲ್ಲಾ ಉಸ್ತುವಾರಿ ಸಚಿವ ಚಿತ್ತಾಪುರ ತಾಲೂಕು ಗುಂಡಗುರ್ತಿಯಲ್ಲಿ ಮತ ಚಲಾಯಿಸಿದರು.
ಶಾಸಕ ಡಾ.ಅಜಯಸಿಂಗ್ ಜತೆ ಮಾಜಿ ಸಿಎಂ ದಿ.ಎನ್.ಧರ್ಮಸಿಂಗ್ ಪತ್ನಿ ಪ್ರಭಾವತಿ ಸ್ವಗ್ರಾಮ ನೆಲೋಗಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಎಂಎಲ್ಸಿಯೂ ಆಗಿರುವ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಬಿ.ಜಿ.ಪಾಟೀಲ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ್, ಸುಭಾಷ ಗುತ್ತೇದಾರ್, ಕನೀಜ್ ಫಾತಿಮಾ, ಮಾಜಿ ಸಚಿವರಾದ ವೈಜನಾಥ ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ, ಬಾಬುರಾವ್ ಚವ್ಹಾಣ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್, ಜೆಡಿಎಸ್ ಅಧ್ಯಕ್ಷ ಬಸವರಾಜ ತಡಕಲ್, ಶಶೀಲ್ ಜಿ. ನಮೋಶಿ ಸೇರಿ ಗಣ್ಯರು ತಮಗೆ ಸಂಬಂಧಿಸಿದ ಮತಕೇಂದ್ರಗಳಲ್ಲಿ ಹಕ್ಕು ಚಲಾಯಿಸಿದರು.
ಜಿಲ್ಲೆಯ ಕೆಲ ಮತಗಟ್ಟೆಗಳಿಗೆ ತೋರಣ, ಬಲೂನ್ಗಳನ್ನು ಕಟ್ಟಿ ಮತದಾರನ ಗಮನ ಸೆಳೆಯುವಂತೆ ಮಾಡಲಾಗಿತ್ತು. ಮಹಿಳೆಯರಿಗಾಗಿಯೇ ವಿಶೇಷ (ಸಖಿ ಪಿಂಕ್) ಬೂತ್ಗಳನ್ನು ಹಲವೆಡೆ ಮಾಡಲಾಗಿತ್ತು. ಅಂಗವಿಕಲರ ಮತದಾನಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದ್ದರಿಂದ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ಮತಯಂತ್ರ ಕೈಕೊಟ್ಟಿದ್ದರಿಂದ ಕೆಲವು ಕಡೆ ಮತದಾರರು ಮನೆಗಳಿಗೆ ತೆರಳಿ ಮತ್ತೆ ಬೂತ್ಗಳಿಗೆ ಬಂದು ಹಕ್ಕು ಚಲಾಯಿಸಿದರು. ಮತದಾನ ವಿಳಂಬವಾದ ಮತಗಟ್ಟೆಗಳಲ್ಲಿ ಹೆಚ್ಚಿನ ಸಮಯ ನೀಡುವಂತೆ ಮತದಾರರು ಆಗ್ರಹಿಸಿದರು. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಕಾಣದೆ ಅನೇಕ ಮತದಾರರು ಪರದಾಡಿದ ಪ್ರಸಂಗವೂ ನಡೆದಿದೆ.
ಮೊದಲ ಬಾರಿಗೆ ಮತದಾನದ ಹಕ್ಕನ್ನು ಹೊಂದಿದ್ದ ಸಾವಿರಾರು ಯುವಕ, ಯುವತಿಯರು ಮತದಾನವನ್ನು ಹಬ್ಬದಂತೆ ಸಂಭ್ರಮಿಸಿದರು. ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಮಿಂಚಿದರು. ಮೊದಲ ಬಾರಿ ಮತದಾನ ಮಾಡಿದ್ದಕ್ಕೆ ನನಗೆ ಎಲ್ಲಿಲ್ಲದ ಖುಷಿ ತಂದಿದೆ. ನಾನೂ ನನ್ನ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ್ದೇನೆ ಎಂದು ಯುವ ಮತದಾರ ಮಾರುತಿ ಸಂತಸ ಹಂಚಿಕೊಂಡರು.

Leave a Reply

Your email address will not be published. Required fields are marked *