ಸಿನಿಮಾ

ಕಲಬುರಗಿಯಲ್ಲಿ ರೈಲು ಅಪಘಾತ ಇಬ್ಬರ ಸಾವು : ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ

ಕಲಬುರಗಿ : ಶುಕ್ರವಾರ ಬೆಳಿಗ್ಗೆ ಕಲಬುರಗಿ ರೈಲು ನಿಲ್ದಾಣ ಮಾರ್ಗವಾಗಿ ಮುಂಬೈಗೆ ಸಂಚರಿಸಿದ 11302 ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಿಂದ ಬೇರ್ಪಟ್ಟು ರೈಲ್ವೆ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರಿದ್ದ ಬೋಗಿಯೊಂದಕ್ಕೆ ರೈಲ್ವೆ ಹಳಿ ಸೆಂಟ್ರಿಂಗ್ ಸಿಬ್ಬಂದಿ ಇದ್ದ ಬೋಗಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿದ್ದ ಬೋಗಿಗೆ ಬೆಂಕಿ ಹತ್ತಿಕೊಂಡು 8 ಜನರಿಗೆ ಗಾಯವಾಗಿದ್ದು, ಓರ್ವ ಮಹಿಳೆ ಮತ್ತು ಓರ್ವ ಪುರುಷ ಘಟನೆಯಲ್ಲಿ ದುರ್ಮರಣ ಹೊಂದಿದ್ದಾರೆ.

ರೈಲ್ವೆ ಅಪಘಾತವಾದ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್., ಅಗ್ನಿಶಾಮಕ, ಅಂಬುಲೆನ್ಸ್, ರೈಲ್ವೆ ಸಿಬ್ಬಂದಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಆಯೋಜಿಸಿದ ರೈಲ್ವೆ ಅಪಘಾತದ ಅಣುಕು ಪ್ರದರ್ಶನದ ಭಾಗವಾಗಿ ಸೋಲಾಪೂರ ವಿಭಾಗೀಯ ರೈಲ್ವೆ ಇಲಾಖೆಯಿಂದ ಕಲಬುರಗಿ ರೈಲು ನಿಲ್ಧಾಣ ಆವರಣದಲ್ಲಿ ಸೃಷ್ಠಿಸಿದ ದೃಶ್ಯಾವಳಿ ಇದಾಗಿದೆ. ರೈಲು ಚಾಲಕನ ನಿಷ್ಕಾಳಜಿಯಿಂದಲೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ರೈಲಿಗೆ ಬೆಂಕಿ ಹತ್ತಿದ ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಪಡೆ ಬೆಂಕಿಯನ್ನು ನಿಂದಿಸಿದೆ. ಪರಿಹಾರ ಕಾರ್ಯಕ್ಕೆ ತೆಲಂಗಾಣಾದ ಅಸಿಸ್ಟೆಂಟ್ ಕಮಾಂಡರ್ ದಾಮೋದರ್ ಸಿಂಗ್ ನೇತೃತ್ವದ 20 ಜನ ಸೇನಾ ಸಿಬ್ಬಂದಿಗಳು ಒಳಗೊಂಡ ಎನ್.ಡಿ.ಆರ್.ಎಫ್. ತಂಡ ಧಾವಿಸಿ ರೈಲಿನಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆದರು. ಘಟನಾ ಸ್ಥಳದಲ್ಲಿಯೇ ತಾತ್ಕಲಿಕ ಪರಿಹಾರ ಕೇಂದ್ರ ತೆರೆಯಲಾಗಿತ್ತು. ಅಲ್ಲಿಯೇ ವೈದ್ಯಕೀಯ ತಂಡ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿತು. ನಂತರ ಸಣ್ಣ ಪ್ರಮಾಣ ಗಾಯಗಳಾದ 5 ಜನ ಮತ್ತು ತೀವ್ರ ಗಾಯಕ್ಕೆ ಒಳಗಾದ 8 ಜನ ಪುರುಷ ಗಾಯಾಳುಗಳನ್ನು ಕಲಬುರಗಿ ನಗರದ ವಿವಿಧ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು.

ರಾಜ್ಯದಲ್ಲಿ ಮೊದಲು ಅಣಕು ಪ್ರದರ್ಶನ:

ಸೋಲಾಪೂರ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಅಧಿಕಾರಿ ಶಿವಾಜಿ ಕದಂ ಮಾತನಾಡಿ, ರೈಲ್ವೆ ಅಪಘಾತದ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿ ಸೇರಿದಂತೆ ಪರಿಹಾರ ತಂಡಗಳು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತು ಅರಿವು ಮೂಡಿಸಲು ಈ ಅಣಕು ಪ್ರದರ್ಶನ ಇಂದಿಲ್ಲಿ ಏರ್ಪಡಿಸಿದೆ. ರಾಜ್ಯದಲ್ಲಿ ಇದೇ ಮೊದಲಾಗಿದ್ದು, ಹಿಂದೆ ದೌಂಡ್ ರೈಲು ನಿಲ್ದಾಣದಲ್ಲಿ ಮಾಡಲಾಗಿತ್ತು ಎಂದರು.

ರೈಲ್ವೆ ಪ್ರಯಾಣ ಮಾಡುವಾಗ ಸ್ಫೋಟಕ ವಸ್ತುಗಳಾದ ಸಿಲೆಂಡರ್, ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ, ಪಟಾಕಿ ತೆಗೆದುಕೊಂಡು ಹೋಗಬಾರದು ಧೂಮಪಾನ ಸಹ ಮಾಡಬಾರದು. ಇದರಿಂದ ಅಪಘಾತ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಇನ್ನು ಅಣಕು ಪ್ರದರ್ಶನದ ಯಶಸ್ಸಿಗೆ ಸಹಕರಿಸಿದ ಕಲಬುರಗಿ ಜಿಲ್ಲಾಡಳಿತ, ಎಸ್.ಪಿ., ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಭಾಗಿದಾರರಿಗೆ ಮತ್ತು ಸಾರ್ವಜನಿಕರಿಗೆ ರೈಲ್ವೆ ಇಲಾಖೆಯಿಂದ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಸೋಲಾಪುರ ರೈಲ್ವೆ ವಿಭಾಗದ ಸಹಾಯಕ ವಾಣಿಜ್ಯ ಪ್ರಬಂಧಕಿ ಕಲ್ಪನಾ ಬನ್ಸೋಡೆ, ಮುಖ್ಯ ವೈದ್ಯಕೀಯ ಅಧೀಕ್ಷಕ ರಾಮಕೃಷ್ಣ ಮಾನೆ, ಡಿ.ಎಂ.ಓ. ಡಾ.ರಘುನಂದನ್, ಸರ್ಜನ್ ಡಾ.ರತನ್, ಡಾ.ದೇವಿಲಾಲ್, ಎ.ಡಿ.ಇ.ಎನ್. ಶ್ರವಣ ಲಾಲ್, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್.ಬಿ.ಸಿಂಗ್, ದಿಲಿಪ್ ಥ್ಯಾಡೆ, ಕಲಬುರಗಿ ರೈಲು ನಿಲ್ದಾಣದ ಮ್ಯಾನೇಜರ್ ಎಸ್.ಆರ್.ಮೋನಿ, ಡಿ.ಎಚ್.ಓ. ಡಾ.ರಾಜಶೇಖರ ಮಾಲಿ ಸೇರಿದಂತೆ ರೈಲ್ವೆ ಇಲಾಖೆಯ ಇನ್ನಿತರ ಅಧಿಕಾರಿಗಳು, ಸ್ಥಳೀಯ ಪೊಲೀಸರು ಇದ್ದರು. ಸೋಲಾಪುರ ಮತ್ತು ವಾಡಿಯಿಂದ ವಿಶೇಷ ಪರಿಹಾರ ರೈಲು ಸಹ ರೆಸ್ಕ್ಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

Latest Posts

ಲೈಫ್‌ಸ್ಟೈಲ್