ಕಲಕೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಹಾನಗಲ್ಲ: ಗಣರಾಜ್ಯೋತ್ಸವದ ಅಂಗವಾಗಿ ನಡೆಸಿದ್ದ ಧ್ವಜಾರೋಹಣವನ್ನು ಭಾನುವಾರವೂ ಕೆಳಗಿಳಿಸದೇ ರಾಷ್ಟ್ರಧ್ವಜಕ್ಕೆ ಅವಮಾನ ತೋರಿದ ಘಟನೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶನಿವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ್ದರು. ಆದರೆ, ಸಂಜೆ 5ಕ್ಕೆ ಧ್ವಜ ಅವರೋಹಣ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರ ಸಂಜೆಯವರೆಗೂ ಧ್ವಜ ಕೆಳಗಿಳಿಸದಿದ್ದಾಗ ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಸಭೆ ಸೇರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲು ತೀರ್ವನಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯೋರಿದ್ದಲ್ಲದೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸಂಬಂಧಿಸಿದ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಕುರಿತು ಅಧಿಕಾರಿಗಳಲ್ಲಿ ಭಕ್ತಿ ಭಾವನೆ ಕಡಿಮೆಯಾಗುತ್ತಿದೆ. ಧ್ವಜಾರೋಹಣ ನೆರವೇರಿಸಿದ ಮೇಲೆ ಧ್ವಜ ಇಳಿಸದಿರುವುದು ಸಿಬ್ಬಂದಿಯು ಕರ್ತವ್ಯಕ್ಕೆ ತೋರಿದ ದಿವ್ಯ ನಿರ್ಲಕ್ಷ್ಯಾಗಿದೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸ್ಥಳೀಯವಾಗಿ ಇಲ್ಲದಿರುವುದೇ ಈ ಘಟನೆಗೆ ಕಾರಣವಾಗಿದೆ. ತಪ್ಪಿತಸ್ಥ ಸಿಬ್ಬಂದಿ ಮೇಲೆ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು.
| ಅಜ್ಜಪ್ಪ ಶಿರಳ್ಳಿ, ತಾಪಂ ಸದಸ್ಯ ಕಲಕೇರಿ