ಕಲಕೇರಿಗೆ ಉದ್ಯಮ ಜಾಗೃತಿ ಯಾತ್ರೆ

ಧಾರವಾಡ: ಯುವಕರಲ್ಲಿ ಉದ್ಯಮದ ಬಗ್ಗೆ ಆಸಕ್ತಿ ಹುಟ್ಟಿಸಲು ಮುಂಬೈನಿಂದ ಪ್ರಾರಂಭವಾದ ಉದ್ಯಮ ಜಾಗೃತಿ ಯಾತ್ರೆ, ತಾಲೂಕಿನ ಕಲಕೇರಿ ಗ್ರಾಮದ ಸಂಗೀತ ಶಾಲೆಗೆ ಬುಧವಾರ ಆಗಮಿಸಿತ್ತು.

ಪ್ರತಿ ವರ್ಷವೂ ನಡೆಯುವ ಜಾಗೃತಿ ಯಾತ್ರೆಯಲ್ಲಿ ಅಂದಾಜು 50ರಷ್ಟು ಹೊಸ ಉದ್ಯಮಿಗಳು ಹೊರ ಹೊಮ್ಮುತ್ತಿದ್ದು, ಈಗಾಗಲೇ 1000ಕ್ಕೂ ಹೆಚ್ಚು ನವೋದ್ಯಮಿಗಳನ್ನು ರೂಪಿಸಲಾಗಿದೆ. ಡಿ. 24ರಿಂದ ಮುಂಬೈನಿಂದ ಆರಂಭವಾದ ಈ ಬಾರಿಯ ಯಾತ್ರೆ ದೇಶದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಜ. 8ರಂದು ಮುಂಬೈನಲ್ಲಿ ಸಂಪನ್ನಗೊಳ್ಳಲಿದೆ.

ಸಂಗೀತ ಶಾಲೆಗೆ ಭೇಟಿ ನೀಡಿದ ಸದಸ್ಯರು, ಗ್ರಾಮದಲ್ಲಿ ಸೆಲ್ಕೋ ವತಿಯಿಂದ ನಡೆಸಿರುವ ವಿದ್ಯುತ್ತೀಕರಣ ಕುರಿತು ಸಮಗ್ರ ಮಾಹಿತಿ ಪಡೆದರು. ಅಲ್ಲದೆ ಸಂಗೀತ ಕಲಿಯುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ, ಅವರ ಸಂಗೀತ, ತಬಲಾ ವಾದನ, ಇತರ ಸಂಗೀತ ಕಾರ್ಯಕ್ರಮಗಳನ್ನು ಆಲಿಸುವ ಮೂಲಕ ಆಹ್ಲಾದಕರ ವಾತಾವರಣದಲ್ಲಿ ಉದ್ಯಮದಲ್ಲಿನ ಅಭಿವೃದ್ಧಿ ವಿಷಯಗಳ ಕುರಿತು ಸಂವಾದ, ಸಮಾಲೋಚನೆಗಳನ್ನು ನಡೆಸಿದರು.

ಉದ್ಯಮಿಗಳಾಗಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅವಕಾಶಗಳಿಲ್ಲ. ಹೀಗಾಗಿ ಗ್ರಾಮೀಣ ಯುವಕರು ಉದ್ಯಮ ಸ್ಥಾಪನೆಗೆ ಮುಂದಾಗುತ್ತಿಲ್ಲ ಎಂಬ ಅಭಿಪ್ರಾಯಗಳನ್ನು ಸುಳ್ಳಾಗಿಸಲು ಉದ್ಯಮ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಯಲ್ಲಿ ಭಾಗಿಯಾದವರಲ್ಲಿ ಅರ್ಧದಷ್ಟು ಯುವಕರು ಗ್ರಾಮೀಣ ಪ್ರದೇಶದವರು ಎಂಬುದು ಆಶಾದಾಯಕ ಬೆಳವಣಿಗೆ ಎಂದು ಆಯೋಜಕರು ತಿಳಿಸಿದರು.

ಉದ್ಯಮ ಜಾಗೃತಿ ಯಾತ್ರೆಗೆ 15,000ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದ್ದು, ಇದರಲ್ಲಿ 474 ಯುವಕ-ಯುವತಿಯರನ್ನು ಆಯ್ಕೆ ಮಾಡಲಾಗಿದೆ. ದೇಶದ 26 ರಾಜ್ಯಗಳ ಹಾಗೂ 46 ವಿದೇಶಗಳ ಯುವಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟಾರೆ 474 ಸದಸ್ಯರಲ್ಲಿ ಶೇ. 90ರಷ್ಟು ಜನರು ದೇಶಿಯರಾದರೆ, ಶೇ. 10ರಷ್ಟು ವಿದೇಶಿಗರಿದ್ದು, 20-27 ವರ್ಷಗಳ ವಯೋಮಾನದವರಿದ್ದಾರೆ.

ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಅರುಣಾಚಲಪ್ರದೇಶ ಸೇರಿ 23 ರಾಜ್ಯಗಳ ಹಾಗೂ ಫ್ರಾನ್ಸ್, ಚೀನಾ, ದುಬೈ, ಬ್ರೆಜಿಲ್, ಕೆನಡಾ ಸೇರಿ ವಿವಿಧ ದೇಶಗಳ ಯಾತ್ರಾರ್ಥಿಗಳು ‘ಜಾಗೃತಿ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದಾರೆ.

ಪಯಣ ಎಲ್ಲೆಲ್ಲಿ?:

ಡಿ. 24ರಂದು ಮುಂಬೈನಿಂದ ಹೊರಟ ಜಾಗೃತಿ ಯಾತ್ರಾ ರೈಲು, ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮಧುರೈ, ಚೆನ್ನೈ, ವಿಶಾಖಪಟ್ಟಣಂ, ಬೆಹರಾಂಪುರ, ರಾಜಗಿರ್, ದಿಯೋರಿಯಾ, ದೆಹಲಿ, ತಿಲೋನಿಯಾ, ಅಹ್ಮದಾಬಾದ್ ಮೂಲಕ ಮುಂಬೈಗೆ ಮರಳಲಿದೆ. ಒಟ್ಟು 15 ದಿನಗಳ 8,000 ಕಿ.ಮೀ. ಪ್ರಯಾಣ ಇದಾಗಿದ್ದು, 15 ರೋಲ್ ಮಾಡೆಲ್​ಗಳು ಯಾತ್ರಾರ್ಥಿಗಳಿಗೆ ಉದ್ಯಮ ನಿರ್ವಣದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಯಾತ್ರೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಉದ್ಯಮ ಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ಬಗೆ ಕುರಿತು ಸಮಗ್ರ ಮಾಹಿತಿ ದೊರಕಿದೆ. ವಿವಿಧ ಸ್ಥಳಗಳಿಗೆ ಭೇಟಿ ನೀಡುವುದರಿಂದ ಆರ್ಥಿಕ ಬೆಳವಣಿಗೆ ಹಾಗೂ ವ್ಯವಹಾರ ಪ್ರಕ್ರಿಯೆ ತಿಳಿಯಲು ಸಹಕಾರಿ. 

ರೋಹಿತ್, ಬಿಹಾರ

ಈ ಯಾತ್ರೆಯಲ್ಲಿ ಸ್ಟಾರ್ಟ್​ಅಪ್​ನವರು ಸಾಕಷ್ಟು ಜನರಿದ್ದಾರೆ. ದೇಶದ ವಿವಿಧ ಭಾಷೆಗಳನ್ನು ಕಲಿಯಲು ಅವಕಾಶ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮ ಬೆಳವಣಿಗೆ ಜತೆಗೆ ನಾಯಕರನ್ನು ಬೆಳೆಸಲು ಯಾತ್ರೆ ಪೂರಕವಾಗಲಿದೆ. ಬೇರೆ ಬೇರೆ ಭಾಗಗಳ ಉದ್ಯಮಿಗಳೆಲ್ಲರೂ ಒಂದೆಡೆ ಸೇರುವುದರಿಂದ ವಿವಿಧ ಐಡಿಯಾಗಳು ತಿಳಿಯಲಿವೆ.

ಪ್ರಮೋದ ಸತೀಶ, ಬೆಂಗಳೂರು