ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ವಿಧಿಸಿರುವ ನಿಷೇಧಾಜ್ಞೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದಲ್ಲಿ ಸೋಂಕು ನಿಯಂತ್ರಿಸಲು ತಹಸೀಲ್ದಾರ್, ತಾಪಂ ಇಒಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳನ್ನೊಳಗೊಂಡ ರಚಿಸಲಾದ ಸಮಿತಿ ವಾರಕ್ಕೆ ಎರಡು ಬಾರಿ ಸಭೆ ಜರುಗಿಸಿ ಸಭೆಯ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದರು.
ಸಾರ್ವಜನಿಕರು ಭೇಟಿ ನೀಡುವಂತಹ ಕಚೇರಿಗಳನ್ನು ರಜಾ ದಿನಗಳಲ್ಲಿ ಸ್ಯಾನಿಟೈಸ್ ಮಾಡಬೇಕು. ಕ್ವಾರಂಟೈನ್ ಹಾಗೂ ಚಿಕಿತ್ಸೆಗಾಗಿ ಗುರುತಿಸಲಾದ ಹಾಸ್ಟೆಲ್ಗಳಲ್ಲಿ ಊಟ, ನೀರು ಹಾಗೂ ಹಾಸಿಗೆಯ ಕೊರತೆಯಾಗದಂತೆ ನಿಗಾವಹಿಸಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಹಾಸಿಗೆಯನ್ನು ಇತರೆ ಹಾಸ್ಟೆಲ್ಗಳಿಂದ ಪಡೆದುಕೊಳ್ಳಬೇಕು. ಕೋವಿಡ್-19 ಚಿಕಿತ್ಸೆಗಾಗಿ ಕನಿಷ್ಠ 100 ಹಾಸಿಗೆ ಸೌಲಭ್ಯವುಳ್ಳ ಹಾಸ್ಟೆಲ್ಗಳನ್ನು ಗುರುತಿಸಬೇಕು ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ರಚಿಸಲಾದ ವಾರ್ಡ್ವಾರು ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿಗಾ ವಹಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಪಟ್ಟಣ ಪಂಚಾಯಿತಿಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ವಾರದ ಸಂತೆಗಳು ನಡೆಯಲು ಅನುಮತಿ ನೀಡಬಾರದು ಎಂದರು.
ನಿಯಂತ್ರಿತ ಪ್ರದೇಶಗಳಿಗೆ ನಿಯೋಜಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ನೆರೆ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಅಗತ್ಯದ ಮುಂಜಾಗ್ರತೆ ಕ್ರಮಗಳ ಕುರಿತು ಸಭೆ ಜರುಗಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ಡಾ.ಆನಂದ ಮಾತನಾಡಿ, ತಾಲೂಕುಗಳಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಾಲೂಕು ವೈದ್ಯಾಧಿಕಾರಿಗಳು ಪರೀಕ್ಷಿಸಿ ಚಿಕಿತ್ಸೆ ಒದಗಿಸಬೇಕು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮಾತನಾಡಿ, ನಿಷೇಧಾಜ್ಞೆ ಕುರಿತು ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರೀಗಿಡದ ಇತರರಿದ್ದರು.
ಜನರು ಸಹಕರಿಸದಿದ್ದರೆ ಪರಿಸ್ಥಿತಿ ಗಂಭೀರ
ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಯಲು ಜಿಲ್ಲೆಯಲ್ಲಿ ಜು. 27ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ತರಲು ಜನರು ಸಹಕಾರ ನೀಡದಿದ್ದಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಒಂದು ಹಂತದವರೆಗೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿತ್ತು. ಕೆಲವರು ನಿರ್ಲಕ್ಷ್ಯ ತೋರಿದ್ದರಿಂದ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಗಿದೆ. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವುದು, ಗುಂಪುಗೂಡಿ ಓಡಾಡುವುದು, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದಿರುವುದು, ಪರಸ್ಪರ ಅಂತರ ಕಾಪಾಡಿಕೊಳ್ಳದಿರುವುದು, ವೈಯಕ್ತಿಕ ಶುಚಿತ್ವ ಅನುಸರಿಸದಿರುವುದರಿಂದ ಕರೊನಾ ಸೋಂಕಿಗೆ ಒಳಗಾಗಬೇಕಾಗಿದೆ’ ಎಂದರು.
ಜಿಲ್ಲೆಯ ಪ್ರತಿಯೊಬ್ಬರೂ ಜು. 27ರ ವರೆಗೆ ನಿಷೇಧಾಜ್ಞೆ ಮತ್ತು ನಿರ್ಬಂಧಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಕೋರಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.