ಬೆಳಗಾವಿ: ಕೊಲ್ಲಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ಹತ್ತು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಠರಾವು ಪಾಸ್ ಮಾಡಿರುವುದು ಮಹಾರಾಷ್ಟ್ರ ಸರ್ಕಾರವನ್ನು ಕಂಗಾಲಾಗಿಸುವಂತೆ ಮಾಡಿದೆ.
ಶೇ. 90 ಮರಾಠಿ ಭಾಷಿಕರೇ ಇರುವ ಗ್ರಾಮದ ಜನರು ಕೈ ಎತ್ತುವ ಮೂಲಕ ಈ ಇಂಗಿತ ವ್ಯಕ್ತಪಡಿಸಿರುವುದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಕರ್ನಾಟಕದ 850 ಹಳ್ಳಿಗಳು ನಮಗೆ ಸೇರಬೇಕೆಂದು ಆಗಾಗ ತಗಾದೆ ತೆಗೆಯುತ್ತಿದ್ದ ಮಹಾರಾಷ್ಟ್ರಕ್ಕೆ ತನ್ನ ರಾಜ್ಯದ ಹಳ್ಳಿಗಳನ್ನೇ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
ಕರ್ನಾಟಕದ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿ ಮರಾಠಿಗರು ಈ ರ್ನಿಣಯ ಮಾಡಿವೆ. ಮಳೆಗಾಲ ಇದ್ದರೂ ಕಾಗಲ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಹೀಗಿದ್ದರೂ ದೂಧಗಂಗಾ ನದಿಯಿಂದ ಇಂಚಲಕರಂಜಿಗೆ ನೀರು ಪೂರೈಸುತ್ತಿರುವ ಮಹಾಸರ್ಕಾರದ ನೀತಿಗೆ ಕಾಗಲ್ ತಾಲೂಕಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಹಾಸರ್ಕಾರದ ಯಾವುದೇ ಸೌಲಭ್ಯ, ಆಶ್ವಾಸನೆ ನಮಗೆ ಬೇಕಿಲ್ಲ. ಇತರ ಹಳ್ಳಿಗಳ ಜನರಿಗಾದರೂ ಸಕಲ ಸೌಲಭ್ಯ ಕೊಟ್ಟು ಚೆನ್ನಾಗಿ ನೋಡಿಕೊಳ್ಳಿ ಎಂದೂ ಬುದ್ಧಿ ಹೇಳಿದ್ದಾರೆ.
2ನೇ ಬಾರಿ ಮುಖಭಂಗ:
ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದ ಮಹಾಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಹಿಂದೆಯೂ ಜತ್ತ ತಾಲೂಕಿನ 42 ಹಳ್ಳಿಗಳು ಕರ್ನಾಟಕಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದವು. ಪರಿಣಾಮ ಗಡಿಯಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ 1900 ಕೋಟಿ ರೂ. ಅನುದಾನದ ಪ್ಯಾಕೇಜ್ ಕೊಡುವುದಾಗಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭರವಸೆ ನೀಡಿದ್ದರು. ಆದರೆ ಇನ್ನೂವರೆಗೂ ಬಿಡುಗಡೆಗೊಂಡಿಲ್ಲ. ಇದೀಗ ಕಾಗಲ್ ತಾಲೂಕಿನ ಹತ್ತು ಗ್ರಾಮಗಳು ರಾಜ್ಯ ಸೇರಲು ಉತ್ಸುಕವಾಗಿರುವುದು ಶಿಂಧೆ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.