ಚಿತ್ರದುರ್ಗ: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಸುತ್ತಿರುವ ಮರಾಠಿ ಪುಂಡರ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ ವಹಿವಾಟಿಗೂ ಯಾವ ತೊಂದರೆ ಉಂಟಾಗಲಿಲ್ಲ. ಬಸ್, ಲಾರಿ, ಕಾರು, ಆಟೋ, ದ್ವಿಚಕ್ರ ವಾಹನಗಳು ಎಂದಿನಂತೆ ಸಂಚರಿಸಿದವು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಿರ್ಭಯವಾಗಿ ಸಂಚರಿಸಿದರು.
ಬೆಳಗ್ಗೆಯಿಂದಲೇ ನಗರದ ಗಾಂಧಿ, ಒನಕೆ ಓಬವ್ವ, ಎಸ್‌ಬಿಐ ವೃತ್ತ ಸೇರಿ ವಿವಿಧೆಡೆ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇನ್ನೂ ಪ್ರತಿಭಟನಾಕಾರರು ಎಲ್ಲಿಯೂ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಲಿಲ್ಲ.
ಕರವೇ ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಬೆಳಗಾವಿಯಲ್ಲಿ ಮರಾಠರ ಪುಂಡಾಟಿಕೆ ವಿರುದ್ಧ ಧಿಕ್ಕಾರ ಕೂಗಿದರು.
ವೇದಿಕೆ ಅಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠರು ನಡೆಸುತ್ತಿರುವ ದೌರ್ಜನ್ಯ ನಿಲ್ಲಬೇಕು. ರಾಜ್ಯದ ಜನರ ಹಿತಕಾಯಲು ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಮ್ಮ ರಾಜಕಾರಣಿಗಳು ಮತ ಓಲೈಕೆಗಾಗಿ ಮರಾಠರ ಉಪಟಳಕ್ಕೆ ಕಡಿವಾಣ ಹಾಕದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಎಂಇಎಸ್, ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಎಚ್.ತಿಪ್ಪೇಸ್ವಾಮಿ, ಪಿ.ಜಿ.ಗೋವಿಂದರಾಜು, ಹನುಮಂತಪ್ಪ, ಓಬಣ್ಣಗೌಡ ಇತರರಿದ್ದರು.