ಕರ್ನಾಟಕ ಆರೋಗ್ಯಸೇವೆ ದೇಶಕ್ಕೆ ಮಾದರಿ

ಕೋಲಾರ: ಆರೋಗ್ಯ ಸೇವೆ ಮತ್ತು ಹೆಲ್ತ್ ಟೂರಿಸಂನಲ್ಲಿ ರಾಜ್ಯ ಮಾದರಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರ ಹೊರವಲಯದ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಸುಸಜ್ಜಿತ ಐಸಿಯು ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುತ್ತಿರುವುದರಿಂದ ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉತ್ತಮ ಸೇವೆ ನೀಡುವಂತಾಗಿದೆ ಎಂದರು.

ದೇಶದಲ್ಲಿ ಪ್ರಸ್ತುತ 590 ವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕವೊಂದರಲ್ಲೇ 57 ಕಾಲೇಜುಗಳಿವೆ. ದೇಶದಲ್ಲಿ ಹೊರಹೊಮ್ಮುತ್ತಿರುವ ವೈದ್ಯರಲ್ಲಿ ಶೇ.10 ವೈದ್ಯರು ನಮ್ಮ ರಾಜ್ಯದವರೇ ಎಂದು ನುಡಿದರು.

ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಮಾನವ ಸಂಪನ್ಮೂಲ ವಿಚಾರದಲ್ಲೂ ಮುನ್ನಡೆ ಸಾಧಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಆರ್.ಎಲ್.ಜಾಲಪ್ಪ ಅವರ 94ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಐಸಿಯು, ಡಯಾಲಿಸಿಸ್ ಹಾಗೂ ಎಂಡೋಸ್ಕೋಪಿಕ್ ಘಟಕ ಉದ್ಘಾಟನೆಯಾಗಿರುವುದು ಸಂತಸದ ವಿಷಯ. ಸರ್ಕಾರ ಮಾಡಬೇಕಾದ ಕೆಲಸವನ್ನು ಜಾಲಪ್ಪ ತಂಡದೊಂದಿಗೆ ಮಾಡಿದ್ದಾರೆ ಎಂದು ಪ್ರಸಂಶಿಸಿದರು.

ಪ್ರಸ್ತುತ ನೂತನ ವೈದ್ಯಕೀಯ ಕಾಲೇಜು ಆರಂಭಿಸುವುದು ಸುಲಭದ ಮಾತಲ್ಲ. ಎಂಸಿಐ (ಮೆಡಿಕಲ್ ಕೌನ್ಸೆಲ್ ಆಫ್ ಇಂಡಿಯಾ) ಮಾರ್ಗಸೂಚಿಗಳು ಅತ್ಯಂತ ಕಠಿಣವಾಗಿವೆ. ಕನಿಷ್ಠ 10 ಎಕರೆ ಜಮೀನು ಇಲ್ಲದಿದ್ದರೆ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅನುಮತಿ ಸಿಗುವುದಿಲ್ಲ. ಆದರೆ ಆರ್.ಎಲ್. ಜಾಲಪ್ಪ 85 ಎಕರೆಯಲ್ಲಿ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ದಾಖಲೆ ನಿರ್ವಿುಸಿದ್ದಾರೆ ಎಂದರು.

ಎಂಸಿಐ ಮಾರ್ಗಸೂಚಿಗಳು ಕಠಿಣವಾಗಿರುವುದರಿಂದ ಎದೆಗುಂದಬೇಕಾಗಿಲ್ಲ. ರಾಜ್ಯ ಸರ್ಕಾರ ಮತ್ತು ವೈಯಕ್ತಿಕವಾಗಿ ನಾನು ಈ ಸಂಸ್ಥೆಯೊಂದಿಗೆ ಸದಾ ಕಾಲ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಹೊಸದಾಗಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕನಿಷ್ಠ 200ರಿಂದ 500 ಕೋಟಿ ರೂ. ಬೇಕಿದೆ. ಕೇಂದ್ರ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಧಿಸಿರುವ ನಿರ್ಬಂಧ ಕಠಿಣವಾಗಿರುವುದರಿಂದ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಿರ್ಬಂಧನೆ ಸಡಿಲಗೊಳಿಸಬೇಕು ಎಂದರು.

ಶಾಸಕ ಕೆ. ಶ್ರೀನಿವಾಸಗೌಡ, ಸಂಸ್ಥೆ ಸಂಸ್ಥಾಪಕ ಆರ್.ಎಲ್. ಜಾಲಪ್ಪ, ಕಾರ್ಯದರ್ಶಿ ಜಿ.ಎಚ್. ನಾಗರಾಜ್, ಉಲಪತಿ ಡಾ. ಎಸ್. ಕುಮಾರ್, ಕುಲಸಚಿವ ಎ.ಎನ್.ಎಂ.ಕುಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಲಕ್ಷ್ಮಯ್ಯ, ಪ್ರಾಂಶುಪಾಲ ಡಾ.ಹರೇಂದ್ರಕುಮಾರ್, ಮುಖ್ಯ ಅತಿಥಿಗಳಾದ ಡಾ. ಸುನೀಲ್ ಕಾರಂತ್, ಡಾ. ಉಮೇಶ್ ಜಾರಿಹಾಳ್, ಡಾ.ಎಂ.ಎಲ್. ನರೇಂದ್ರಕುಮಾರ್, ಡಾ. ಜೂಡಿಯಸ್ ಪುನನ್, ಡಾ. ಸುಂದರ್, ಸಂಸ್ಥೆಯ ಆರ್ಥಿಕ ವಿಭಾಗದ ನಿರ್ದೇಶಕ ಜಾಲಪ್ಪ ಪುತ್ರ ಜೆ.ರಾಜೇಂದ್ರ ಇದ್ದರು.