ಕರ್ನಾಟಕದ ದಾಳಿಗೆ ಮಹಾ ಕುಸಿತ

ಮೊಹಾಲಿ: ನಾಕೌಟ್ ಹಂತಕ್ಕೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಇರಾದೆ ಯೊಂದಿಗೆ ಕಣಕ್ಕಿಳಿದಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಭರ್ಜರಿ ಆರಂಭ ಕಂಡಿದೆ. ನಾಯಕ ವಿನಯ್ ಕುಮಾರ್(46ಕ್ಕೆ 5) ಮಾರಕ ದಾಳಿಯ ನೆರವಿನಿಂದ ರಾಜ್ಯ ತಂಡ ಬಿ ಗುಂಪಿನ ಹಣಾಹಣಿಯಲ್ಲಿ ಮಹಾರಾಷ್ಟ್ರವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದೆ. ಪ್ರತಿಯಾಗಿ ಜಾಗರೂಕತೆಯ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸುವತ್ತ ಹೆಜ್ಜೆಯಿಟ್ಟಿದೆ.

ಸೌರಾಷ್ಟ್ರ ವಿರುದ್ಧ ಸೋಲಿನ ಹಿನ್ನಡೆ ಯೊಂದಿಗೆ ಬುಧವಾರ ಕಣಕ್ಕಿಳಿದ ಕರ್ನಾಟಕ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿಸ್ತಿನ ದಾಳಿ ನಡೆಸಿದ ವಿನಯ್, ಮಹಾರಾಷ್ಟ್ರ ತಂಡವನ್ನು 163 ರನ್ಗೆ ಕಟ್ಟಿಹಾಕಲು ನೆರವಾದರು. ಪ್ರತಿಯಾಗಿ ತಾಳ್ಮೆಯ ಹೆಜ್ಜೆಯಿಟ್ಟಿರುವ ಕರ್ನಾಟಕ ದಿನದಂತ್ಯಕ್ಕೆ 1 ವಿಕೆಟ್ಗೆ 67 ರನ್ ಗಳಿಸಿದ್ದು, ಮೇಲುಗೈ ಸಾಧಿಸಲು ಇನ್ನು 96 ರನ್ ಗಳಿಸಬೇಕಿದೆ.

ಕಳೆದ ವರ್ಷ ಕಡೇ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ ಸೋತು ನಾಕೌಟ್ ಅವಕಾಶ ವಂಚಿತರಾಗಿದ್ದ ವಿನಯ್ ಪಡೆ ಸೇಡುತೀರಿಸಿಕೊಳ್ಳುವ ದಿಟ್ಟ ನಿರ್ಧಾರದೊಂದಿಗೆ ದಾಳಿ ಆರಂಭಿಸಿತು. ಆರಂಭಿಕ ಜೋಡಿಯಾದ ನಾಯಕ ಸ್ವಪ್ನಿಲ್ ಗುಗಲೆ (25) ಮತ್ತು ರೋಹಿತ್ ಮೊಟ್ವಾನಿ(32) ಮೊದಲ ವಿಕೆಟ್ಗೆ 42 ರನ್ ಸೇರಿಸಿ ಜಾಗರೂಕತೆಯ ಇನಿಂಗ್ಸ್ ಆರಂಭಿಸಿತು. ಆದರೆ ಪಂದ್ಯದ 13ನೇ ಓವರ್ನೊಂದಿಗೆ ದಾಳಿ ಮಾಡಿದ ಆಲ್ರೌಂಡರ್ ಬಿನ್ನಿ ಮಹಾರಾಷ್ಟ್ರದ ವಿಕೆಟ್ ಕಬಳಿಸಲು ಚಾಲನೆ ನೀಡಿದರು. ಬಿನ್ನಿ ದಾಳಿಗೆ ಗುಗಲೆ ವಿಕೆಟ್ ಕೀಪರ್ ಗೌತಮ್ೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಬಳಿಕ ಕಣಕ್ಕಿಳಿದ ವಿನಯ್ ಮಹಾರಾಷ್ಟ್ರಕ್ಕೆ ಆಘಾತ ನೀಡಿದರು. ಒಂದು ಹಂತದದಲ್ಲಿ ನಷ್ಟವಿಲ್ಲದೆ 42 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಮಹಾರಾಷ್ಟ್ರ 97

ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತು. ನೌಷಾದ್ ಶೇಖ್(3) ಮತ್ತು ಅನುಭವಿ ಬ್ಯಾಟ್ಸ್ಮನ್ ಕೇದಾರ್ ಜಾಧವ್ರನ್ನು(8) ವಿನಯ್ ತಂಡದ ಮೊತ್ತ 56

ರೊಳಗೆ ಪೆವಿಲಿಯನ್ ಸೇರಿಸಿದರು. ಬೆನ್ನಲ್ಲೆ ಪ್ರಮುಖ ಬ್ಯಾಟ್ಸ್ಮನ್ ಅಂಕಿತ್ ಬಾವ್ನೆ(0)ಎದುರಿಸಿದ ಮೊದಲ ಎಸೆತದಲ್ಲೇ ವೇಗಿ ಅರವಿಂದ್ ಓವರ್ನಲ್ಲಿ ನಿರ್ಗ ಮನ ಕಂಡಿದ್ದು, ಮಹಾರಾಷ್ಟ್ರಕ್ಕೆ ಭಾರಿ ಹೊಡೆತ ನೀಡಿತು. ಅಂತಿಮವಾಗಿ ಕೆಳಕ್ರಮಾಂಕದ ಅಲ್ಪಕಾಣಿಕೆಯಿಂದ 150ರ ಗಡಿ ದಾಟಿತು. -ಏಜೆನ್ಸೀಸ್

ಸಮರ್ಥ್-ಅಬ್ಬಾಸ್ ಉತ್ತಮ ಆರಂಭ

ಬೌಲಿಂಗ್ ಮೇಲುಗೈ ಸಾಧಿಸಿದ ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಮೊದಲ ವಿಕೆಟ್ಗೆ ಜಾಗರೂಕತೆಯ ಇನಿಂಗ್ಸ್ ಕಟ್ಟಲು ವಿಫಲವಾಯಿತು. ಪದಾರ್ಪಣೆಯ ಪಂದ್ಯವಾಡಿದ ಅರ್ಜುನ್ ಹೊಯ್ಸಳ(0) ಪಂದ್ಯದ ಮೊದಲ ಓವರ್ನಲ್ಲೆ ಔಟಾಗಿ ನಿರಾಸೆ ಮೂಡಿಸಿದರು. ವೇಗಿ ಸಂಕ್ಲೇಚ ಓವರ್ನಲ್ಲಿ ಕ್ಲೀನ್ಬೌಲ್ಡ್ ಆದರು. ನಂತರ ಜತೆಯಾದ ಆರ್ ಸಮರ್ಥ್(33*ರನ್, 57ಎಸೆತ, 5ಬೌಂಡರಿ) ಮತ್ತು ಕೌನೇನ್ ಅಬ್ಬಾಸ್(30* ರನ್, 52ಎಸೆತ, 5ಬೌಂಡರಿ) ದಿನದಂತ್ಯದ ವೇಳೆಗೆ ತಾಳ್ಮೆಯ ಇನಿಂಗ್ಸ್ ಕಟ್ಟಿದರು. ಮುರಿಯದ ಮೂರನೇ ವಿಕೆಟ್ಗೆ ಈ ಜೋಡಿ 67ರನ್ ಜತೆಯಾಟವಾಡಿದೆ.

ಒಂದೇ ದಿನ 18 ವಿಕೆಟ್ ಪತನ!

ಟೂರ್ನಿಯ ಬಿ ಗುಂಪಿನ ಸೌರಾಷ್ಟ್ರ ಮತ್ತು ದೆಹಲಿ ತಂಡಗಳ ನಡುವಿನ ಪಂದ್ಯದ ಮೊದಲ ದಿನ ಬೌಲರ್ಗಳ ಆರ್ಭಟದಿಂದ ಬರೋಬ್ಬರಿ 18 ವಿಕೆಟ್ ಉರುಳಿತು. ಕಳೆದ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲಿನ ಆಘಾತ ನೀಡಿದ್ದ ಸೌರಾಷ್ಟ್ರ ವಡೋದರದ ರಿಲಾಯನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಸುಮಿತ್ ನರ್ವಾಲ್(27ಕೆ್ಕ 4) ಮತ್ತು ಪ್ರದೀಪ್ ಸಂಗ್ವಾನ್(25ಕ್ಕೆ 4) ಸಂಘಟಿತ ದಾಳಿಗೆ ಕೇವಲ 92ರನ್ಗೆ ಆಲೌಟಾಯಿತು. ಪ್ರತಿಯಾಗಿ ಬಿರುಸಿನ ಆಟವಾಡಿದ ದೆಹಲಿ ಸರಾಸರಿ 5ರ ಆಸುಪಾಸಿನಂತೆ ವೇಗವಾಗಿ ರನ್ ಗಳಿಸಿದರೂ ದಿನದಂತ್ಯದ ವೇಳೆಗೆ 194 ರನ್ಗೆ 8 ವಿಕೆಟ್ ಕಳೆದುಕೊಂಡು, 102ರನ್ ಮುನ್ನಡೆ ಸಾಧಿಸಿದೆ.

ಅಮನ್, ಸಗುಣ್ ಶತಕ: ಇತರ ಪಂದ್ಯಗಳಲ್ಲಿ ಮೊದಲ ದಿನ 2 ಶತಕಗಳು ಮೂಡಿಬಂದಿದೆ. ಚತ್ತೀಸ್ಗಢದ ಅಮನ್ದೀಪ್ ಖಾರೆ(106) ಸಿ ಗುಂಪಿನಲ್ಲಿ ಜಮ್ಮು -ಕಾಶ್ಮೀರ ತಂಡದ ವಿರುದ್ಧ ಶತಕ, ಗೋವಾ ತಂಡದ ಸಗುಣ್ ಕಾಮತ್(104) ಹಿಮಾಚಲಪ್ರದೇಶ ತಂಡದ ವಿರುದ್ಧ ಶತಕ ಬಾರಿಸಿದರು.

ಹೊಯ್ಸಳ, ಪವನ್ ಪದಾರ್ಪಣೆ

ಕರ್ನಾಟಕ ತಂಡ ಈ ಬಾರಿ 4 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಅರ್ಜುನ್ ಹೊಯ್ಸಳ ಮತ್ತು ಪವನ್ ದೇಶಪಾಂಡೆ ರಣಜಿ ಪದರ್ಪಾಣೆ ಮಾಡಿದರೆ, ಅಭಿಮನ್ಯು ಮಿಥುನ್ ಮತ್ತು ಎಸ್. ಅರವಿಂದ್ ತಂಡಕ್ಕೆ ವಾಪಸಾದರು. ಅನುಭವಿ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ನಾಕೌಟ್ ಹಂತಕ್ಕೆ ಮುನ್ನ ವಿಶ್ರಾಂತಿ ಪಡೆದಿದ್ದರೆ, ಮಯಾಂಕ್ ಅಗರ್ವಾಲ್ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದರು. ಸ್ಪಿನ್ನರ್ಗಳಾದ ಶ್ರೇಯಸ್ ಗೋಪಾಲ್ ಮತ್ತು ಅಬ್ರಾರ್ ಕಾಜಿ ಆಡುವ ಬಳಗದಿಂದ ಹೊರಬಿದ್ದರು.

ಮನೀಷ್ ಬದಲಿಗೆ ಮಹಾರಾಷ್ಟ್ರ ನಕಾರ!

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮನೀಷ್ ಪಾಂಡೆ ಬದಲು ಆ ಸ್ಥಾನದಲ್ಲಿ ಬೇರೆ ಬ್ಯಾಟ್ಸ್ಮನ್ಅನ್ನು ಆಡಿಸುವ ಕರ್ನಾಟಕ ತಂಡದ ಪ್ರಸ್ತಾಪಕ್ಕೆ ಮಹಾರಾಷ್ಟ್ರ ತಂಡ ನಿರಾಕರಿಸಿದೆ. ಇದರಿಂದಾಗಿ ಕರ್ನಾಟಕ 10 ಮಂದಿ ಬ್ಯಾಟ್ಸ್ಮನ್ಗಳೊಂದಿಗೆ ಪಂದ್ಯ ಆಡಬೇಕಿದೆ. ಟೀಮ್ ಇಂಡಿಯಾಗೆ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ತಂಡ ತೊರೆದ ಮನೀಷ್ಗೆ ಕೆಟ್ಟ ವಾತಾವರಣದ ಕಾರಣ ಚಂಡೀಗಢದಿಂದ ದೆಹಲಿಗೆ ವಿಮಾನ ಸಿಕ್ಕಿರಲಿಲ್ಲ. ರಸ್ತೆ ಮಾರ್ಗವಾಗಿ ದೆಹಲಿಗೆ ತೆರಳಿರುವ ಮನೀಷ್, ಮಧ್ಯರಾತ್ರಿಯ ವೇಳೆಗೆ ಮುಂಬೈನಲ್ಲಿರುವ ತಂಡ ಕೂಡಿಕೊಳ್ಳಲಿದ್ದಾರೆ. ಈ ನಡುವೆ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್, ಮ್ಯಾಚ್ ರೆಫ್ರಿ ಪ್ರಣಬ್ ರಾಯ್ಗೆ ಮನೀಷ್ಗೆ ಬದಲಿ ಆಟಗಾರರನ್ನು ಆಡಿಸಲು ಅನುಮತಿ ನೀಡುವಂತೆ ಕೇಳಿದ್ದರು. ಬಳಿಕ ಪ್ರಣಬ್ ಬಿಸಿಸಿಐನ ಕ್ರಿಕೆಟ್ ವ್ಯವಹಾರಗಳ ವ್ಯವಸ್ಥಾಪಕ ಎಂವಿ ಶ್ರೀಧರ್ಗೆ ಪರಿಸ್ಥಿತಿ ತಿಳಿಸಿದರು. ಆಗ ಶ್ರೀಧರ್, ಮಹಾರಾಷ್ಟ್ರ ತಂಡದ ನಾಯಕ ಸ್ವಪ್ನಿಲ್ ಗುಗಲೆ ಒಪ್ಪಿದರೆ ಕರ್ನಾಟಕ ಬದಲಿ ಆಟಗಾರರನನ್ನು ಆಡಿಸಬಹುದು ಎಂದಿದ್ದರು. ಆದರೆ, ಮಹಾರಾಷ್ಟ್ರ ತಂಡದ ನಾಯಕ ಕರ್ನಾಟಕದ ಮನವಿಯನ್ನು ವಿನಮ್ರವಾಗಿ ನಿರಾಕರಿಸಿದರು.

ಮನೀಷ್ ಪಾಂಡೆ ಮುಂಬೈ ಟೆಸ್ಟ್ಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೇ ಇದ್ದಲ್ಲಿ ಹಾಗೂ ಟೀಮ್ ಇಂಡಿಯಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದಲ್ಲಿ ರಣಜಿ ತಂಡವನ್ನು ಕೂಡಿಕೊಂಡು ಬ್ಯಾಟಿಂಗ್ ಮಾಡಬಹುದು.

| ಪ್ರಣಬ್ ರಾಯ್ ಮ್ಯಾಚ್ ರೆಫ್ರಿ

ಜಯಲಲಿತಾಗೆ ಶ್ರದ್ಧಾಂಜಲಿ

ಬೆಳಗಾವಿಯಲ್ಲಿ ರಣಜಿ ಪಂದ್ಯ ಆರಂಭಕ್ಕೂ ಮುನ್ನ ತಮಿಳುನಾಡು ಸಿಎಂ ಜಯಲಲಿತಾ ನಿಧನಕ್ಕೆ ಉಭಯ ತಂಡಗಳ ಆಟಗಾರರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ತಮಿಳುನಾಡು ತಂಡ ಜೆರ್ಸಿಗೆ ಕಪ್ಪು ಪಟ್ಟಿ ಧರಿಸಿ ಆಡಿತು.

ಪ್ರಿಯಾಂಕ್ ಪಾಂಚಾಲ್ ಹ್ಯಾಟ್ರಿಕ್ ಶತಕ ಸಾಧನೆ

ಬೆಳಗಾವಿ: ಗುಜರಾತ್ ಆರಂಭಿಕ ಪ್ರಿಯಾಂಕ್ ಪಾಂಚಾಲ್ (113 ರನ್, 180 ಎಸೆತ, 17 ಬೌಂಡರಿ) ತಮಿಳುನಾಡು ವಿರುದ್ಧ ಶತಕ ಸಿಡಿಸುವ ಮೂಲಕ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕದ ಸಾಧನೆ ಮಾಡಿದರು. ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ಗೆದ್ದು ಬ್ಯಾಟಿಂಗ್ ಆಯ್ದ ಗುಜರಾತ್ ಮೊದಲ ದಿನದಂತ್ಯಕ್ಕೆ 7 ವಿಕೆಟ್ಗೆ 267 ರನ್ ಪೇರಿಸಿದೆ. ಹುಬ್ಬಳ್ಳಿಯಲ್ಲಿ ಮುಂಬೈ ವಿರುದ್ಧ ದ್ವಿಶತಕ ಮತ್ತು ಬೆಳಗಾವಿಯ ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಅಜೇಯ ತ್ರಿಶತಕ ಸಿಡಿಸಿದ್ದ 26 ವರ್ಷದ ಪಾಂಚಾಲ್ ಹ್ಯಾಟ್ರಿಕ್ ಶತಕ ಸಾಧನೆ ಬಳಿಕ ಬಾಬಾ ಅಪರಾಜಿತ್ಗೆ (29ಕ್ಕೆ 2) ವಿಕೆಟ್ ಒಪ್ಪಿಸಿದರು. ಗುಜರಾತ್ ಪ್ರಥಮ ಇನಿಂಗ್ಸ್: 86 ಓವರ್ಗಳಲ್ಲಿ 7 ವಿಕೆಟ್ಗೆ 267 (ಗೋಯೆಲ್ 23, ಪಾಂಚಾಲ್ 113, ರಾವಲ್ 35, ಅಕ್ಷರ್ 28, ನಟರಾಜನ್ 62ಕ್ಕೆ 2, ಬಾಬಾ 29ಕ್ಕೆ 2).

ಮಹಾರಾಷ್ಟ್ರ ಪ್ರಥಮ ಇನಿಂಗ್ಸ್:

56 ಓವರ್ಗಳಲ್ಲಿ 163

ಗುಗಲೆ ಸಿ ಗೌತಮ್ ಬಿ ಬಿನ್ನಿ 25

ಮೋಟ್ವಾನಿ ಸಿ ಪವನ್ ಬಿ ಬಿನ್ನಿ 32

ನೌಷಾದ್ ಶೇಕ್ ಬಿ ವಿನಯ್ 3

ಕೇದಾರ್ ಜಾಧವ್ ಬಿ ವಿನಯ್ 8

ಅಂಕಿತ್ ಬಾವ್ನೆ ಸಿ ಪವನ್ ಬಿ ಅರವಿಂದ್ 0

ಖುರಾನ ಸಿ ಕೌನೇನ್ ಬಿ ವಿನಯ್ 16

ತ್ರಿಪಾಠಿ ಸಿ ಕೌನೇನ್ ಬಿ ಅರವಿಂದ್ 8

ಸಂಕ್ಲೇಚ ಎಲ್ಬಿಡಬ್ಲ್ಯು ಬಿ ವಿನಯ್ 13

ಸಯ್ಯದ್ ಸಿ ಬಿನ್ನಿ ಬಿ ಪವನ್ 12

ನಿಕಿತ್ ಧುಮಲ್ ಔಟಾಗದೆ 5

ಪ್ರದೀಪ್ ದಾಧೆ ಸಿ ಗೌತಮ್ ಬಿ ವಿನಯ್ 16

ಇತರೆ: 25, ವಿಕೆಟ್ ಪತನ: 1-42, 2-45, 3-56, 4-59, 5-82, 6-97, 7-113, 8-142, 9-142. ಬೌಲಿಂಗ್: ವಿನಯ್ ಕುಮಾರ್ 17-6-46-5, ಎಸ್. ಅರವಿಂದ್ 14.4-4-32-2, ಮಿಥುನ್ 0.2-0-0-0, ಸ್ಟುವರ್ಟ್ ಬಿನ್ನಿ 15-0-40-2, ಕೆ. ಗೌತಮ್ 7-2-11-0, ಪವನ್ ದೇಶಪಾಂಡೆ 2-0-10-1.

ಕರ್ನಾಟಕ ಪ್ರಥಮ ಇನಿಂಗ್ಸ್:

19 ಓವರ್ಗಳಲ್ಲಿ 1 ವಿಕೆಟ್ಗೆ 67

ಅರ್ಜುನ್ ಹೊಯ್ಸಳ ಬಿ ಸಂಕ್ಲೇಚ 0

ಆರ್. ಸಮರ್ಥ್ ಬ್ಯಾಟಿಂಗ್ 33

ಕೌನೇನ್ ಅಬ್ಬಾಸ್ ಬ್ಯಾಟಿಂಗ್ 30

ಇತರೆ: 4, ವಿಕೆಟ್ ಪತನ: 1-0. ಬೌಲಿಂಗ್: ಅನುಪಮ್ ಸಂಕ್ಲೇಚ 7-1-24-1, ಧುಮಲ್ 5-2-15-0, ಪ್ರದೀಪ್ ದಾಧೆ 5-1-13-0, ಮೊಹ್ಸಿನ್ ಸಯ್ಯದ್ 2-0-11-0.

Leave a Reply

Your email address will not be published. Required fields are marked *