ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಮೊಹಾಲಿ: ಕಳೆದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿರುವ ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯ ತನ್ನ 8ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಎದುರಾಳಿ ಮಹಾರಾಷ್ಟ್ರ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಪ್ರಭುತ್ವ ಮೆರೆದಿದೆ. ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆದ ಪವನ್ ದೇಶಪಾಂಡೆ (70 ರನ್, 139ಎಸೆತ, 11ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಈಗಾಗಲೇ ನಾಕೌಟ್ ಹಂತಕ್ಕೇರಿರುವ ಕರ್ನಾಟಕ ತಂಡ 150 ರನ್ ಮುನ್ನಡೆ ಸಾಧಿಸಿತು.

ಪಿಸಿಬಿ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಿ ಗುಂಪಿನ ಪಂದ್ಯದಲ್ಲಿ 1 ವಿಕೆಟ್ಗೆ 67 ರನ್ಗಳಿಂದ ಗುರುವಾರದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ದಿನದಂತ್ಯಕ್ಕೆ 9 ವಿಕೆಟ್ಗೆ 313 ರನ್ ಪೇರಿಸಿದೆ. ಮಹಾರಾಷ್ಟ್ರ ಮೊದಲ ಇನಿಂಗ್ಸ್ನಲ್ಲಿ 163 ರನ್ ಗಳಿಸಿತ್ತು. ನಾಯಕ ವಿನಯ್ ಕುಮಾರ್ (36ರನ್, 47 ಎಸೆತ, 6 ಬೌಂಡರಿ) ಜತೆಗೆ ಎಸ್.ಅರವಿಂದ್ (1) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಿಂಚಿದ ಪವನ್ ದೇಶಪಾಂಡೆ: ಪ್ರಸಕ್ತ ಋತುವಿನ ಆರಂಭಿಕ ಏಳು ಪಂದ್ಯಗಳಲ್ಲಿ ಬೆಂಚು ಕಾಯಿಸಿದ್ದ ಪವನ್ ದೇಶಪಾಂಡೆ ಸಿಕ್ಕ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಅನುಭವಿ ಮನೀಷ್ ಪಾಂಡೆ ರಾಷ್ಟ್ರೀಯ ತಂಡ ಕೂಡಿಕೊಂಡ ಹಿನ್ನೆಲೆಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪವನ್ ತಮ್ಮ ಆಯ್ಕೆಯನ್ನು ಅರ್ಧಶತಕದ ಮೂಲಕ ಸಮರ್ಥಿಸಿಕೊಂಡರು. ಕೌನೇನ್ ಅಬ್ಬಾಸ್ ಔಟಾದ ಬಳಿಕ ಸಮರ್ಥ್ ಜತೆಗೂಡಿದ ಪವನ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗಮನಸೆಳೆದರು. ವೇಗಿ ಅನುಪಮ್ ಸಂಕ್ಲೇಚ ಎಸೆತದಲ್ಲಿ ಸಮರ್ಥ್ ಬೌಲ್ಡ್ ಆಗಿ ನಿರ್ಗಮಿಸಿದರೆ, ಬಳಿಕ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ (46) ಜತೆಗೂಡಿ 4ನೇ ವಿಕೆಟ್ಗೆ 80ರನ್ ಕೂಡಿಸಿದರು. ಅನುಭವಿ ಆಟಗಾರರ ನಿರ್ಗಮನದ ಬಳಿಕವೂ ಎಚ್ಚರಿಕೆಯ ಆಟ ಪ್ರದರ್ಶಿಸಿದ ಪವನ್, ವಿಕೆಟ್ ಕೀಪರ್ ಸಿಎಂ ಗೌತಮ್ (18) ಜತೆಗೂಡಿ 5ನೇ ವಿಕೆಟ್ಗೆ 54ರನ್ ಕಲೆಹಾಕಿ ಚಿರಾಗ್ ಖುರಾನಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು ಆರ್.ಸಮರ್ಥ್ (64ರನ್, 120ಎಸೆತ, 8ಬೌಂಡರಿ) ಹಾಗೂ ಕೌನೇನ್ ಅಬ್ಬಾಸ್ (41) ಜೋಡಿ ಬುಧವಾರದ ಮೊತ್ತಕ್ಕೆ 34ರನ್ ಪೇರಿಸಿ ಬೇರ್ಪಟ್ಟಿತು. ಒಟ್ಟಾರೆ ಈ ಜೋಡಿ 2ನೇ ವಿಕೆಟ್ಗೆ 101ರನ್ ಕಲೆಹಾಕಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿತು.

ಮಥಾಯಿಸ್ ವಿಫಲ: ಮನೀಷ್ ಪಾಂಡೆ ಬದಲು ಬ್ಯಾಟಿಂಗ್ ಮಾಡುವ ಅವಕಾಶಗಿಟ್ಟಿಸಿದ ಆಲ್ರೌಂಡರ್ ಡೇವಿಡ್ ಮಥಾಯಿಸ್ (6) ವಿಫಲರಾದರು. ಪವನ್ ದೇಶಪಾಂಡೆ ನಿರ್ಗಮನದ ಬೆನ್ನಲ್ಲೇ ಮಥಾಯಿಸ್ ಕೂಡ ಔಟಾದರು. ಮತ್ತೊಂದೆಡೆ, ನಾಯಕ ವಿನಯ್ ಕುಮಾರ್ ಬಾಲಂಗೋಚಿಗಳ ನೆರವಿನಿಂದ ತಂಡದ ಮೊತ್ತವನ್ನು 300ಗಡಿ ದಾಟಿಸಿದರು. ಕೆ.ಗೌತಮ್ (6) ಹಾಗೂ ಅಭಿಮನ್ಯು ಮಿಥುನ್ (5) ವೈಫಲ್ಯ ಅನುಭವಿಸಿದರು.

ಮನೀಷ್ ಬದಲು ಮಥಾಯಿಸ್: ಮನೀಷ್ ಪಾಂಡೆ ರಾಷ್ಟ್ರೀಯ ತಂಡ ಕೂಡಿಕೊಂಡ ಹಿನ್ನೆಲೆಯಲ್ಲಿ ಆಲ್ರೌಂಡರ್ ಡೇವಿಡ್ ಮಥಾಯಿಸ್ ಬ್ಯಾಟಿಂಗ್ ಮಾಡುವ ಅವಕಾಶಗಿಟ್ಟಿಸಿಕೊಂಡರು. ಮಹಾರಾಷ್ಟ್ರ ತಂಡ ಗುರುವಾರ ಮನೀಷ್ ಬದಲಿಗೆ ಬೇರೆ ಆಟಗಾರನನ್ನು ಆಡಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಥಾಯಿಸ್ಗೆ ಈ ಅವಕಾಶ ಲಭಿಸಿತು. ಬುಧವಾರ ಆಡುವ ಹನ್ನೊಂದರ ಬಳಗದಲ್ಲಿದ್ದ ಮನೀಷ್ ಪಾಂಡೆ ರಾಷ್ಟ್ರೀಯ ತಂಡ ಸೇರ್ಪಡೆಗೊಂಡ ಬಳಿಕ ಅವರ ಜಾಗಕ್ಕೆ ಬದಲಿ ಆಟಗಾರನಿಗಾಗಿ ರಾಜ್ಯ ತಂಡ ಪಂದ್ಯದ ರೆಫ್ರಿ ಬಳಿ ಮನವಿ ಸಲ್ಲಿಸಿತ್ತು. ಆದರೆ, ಈ ಮೊದಲು ಕರ್ನಾಟಕದ ಮನವಿಯನ್ನು ಮಹಾರಾಷ್ಟ್ರ ತಂಡದ ನಾಯಕ ನಿರಾಕರಿಸಿದ್ದರು. -ಏಜೆನ್ಸೀಸ್

sports_3_1

ತಮಿಳುನಾಡು ತಿರುಗೇಟು

ಬೆಳಗಾವಿ: ನಾಯಕ ಅಭಿನವ್ ಮುಕುಂದ್ (99ರನ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ತಂಡ ಎ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ತಿರುಗೇಟು ನೀಡಿದೆ. ಕೆಎಸ್ಸಿಎ ಮೈದಾನದಲ್ಲಿ ನಡೆಯತ್ತಿರುವ ಪಂದ್ಯದಲ್ಲಿ 7 ವಿಕೆಟ್ಗೆ 267ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಗುಜರಾತ್ ತಂಡ 307ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ತಮಿಳುನಾಡು ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್ಗೆ 154ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 153ರನ್ ಬಾಕಿ ಇದೆ. ಉಳಿದಂತೆ, ಟೂರ್ನಿಯ ಇತರ ಪಂದ್ಯಗಳಲ್ಲಿ ಬಂಗಾಳದ ಶ್ರೀವಾಸ್ತವ್ ಗೋಸ್ವಾಮಿ (225) ದ್ವಿಶತಕ ಬಾರಿಸಿದರೆ, 8 ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದರೆ, ಐವರು ಬೌಲರ್ಗಳು 5 ವಿಕೆಟ್ ಗೊಂಚಲು ಪಡೆದರು.

 

Leave a Reply

Your email address will not be published. Required fields are marked *