ಕರ್ನಾಟಕಕ್ಕೆ ಮಯಾಂಕ್ ಬಲ

ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹೋರಾಟಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೇ 2 ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಳ್ಳಲಿರುವ ಉಪಾಂತ್ಯ ಹೋರಾಟದಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಪೂರ್ಣ ಬ್ಯಾಟಿಂಗ್ ಬಲದೊಂದಿಗೆ ಕಣಕ್ಕಿಳಿಯಲಿದೆ.

ಮನೀಷ್ ಪಾಂಡೆ ಸಾರಥ್ಯದ 15 ಸದಸ್ಯರ ತಂಡದಲ್ಲಿ ಮಯಾಂಕ್ ಅವರಿಗೆ ಪವನ್ ದೇಶಪಾಂಡೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಸೀಸ್ ಪ್ರವಾಸದಲ್ಲಿ ಪದಾರ್ಪಣೆ ಟೆಸ್ಟ್​ನಲ್ಲೇ ಮಿಂಚಿದ್ದ ಮಯಾಂಕ್ 2 ಅರ್ಧಶತಕ ಬಾರಿಸಿದ್ದರು. ನಂತರ ಮಯಾಂಕ್ ಸಣ್ಣ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಕ್ವಾರ್ಟರ್​ಫೈನಲ್ ಪಂದ್ಯಕ್ಕೆ ಅವರು ಗೈರಾಗಿದ್ದರು. ಆದರೆ ಈಗ ಫಿಟ್ನೆಸ್ ಸಾಬೀತುಪಡಿಸಲು ಸೆಮಿಫೈನಲ್ ಪಂದ್ಯ ಉತ್ತಮ ವೇದಿಕೆಯಾಗಿದೆ.

ತಂಡ: ಮನೀಷ್ ಪಾಂಡೆ(ನಾಯಕ), ಮಯಾಂಕ್ ಅಗರ್ವಾಲ್, ಆರ್ ಸಮರ್ಥ್, ಡಿ. ನಿಶ್ಚಲ್, ಕರುಣ್ ನಾಯರ್, ಕೆವಿ ಸಿದ್ಧಾರ್ಥ್, ಶರತ್ ಶ್ರೀನಿವಾಸ್(ವಿ.ಕೀ.), ಶರತ್ ಬಿಆರ್(ವಿ.ಕೀ.), ಕೆ ಗೌತಮ್ ಶ್ರೇಯಸ್ ಗೋಪಾಲ್(ಉಪನಾಯಕ), ಜೆ ಸುಚಿತ್, ವಿನಯ್ ಕುಮಾರ್, ಮಿಥುನ್, ರೋನಿತ್ ಮೋರೆ, ಪ್ರಸಿದ್ಧ ಕೃಷ್ಣ.