ಕರ್ತವ್ಯ ನಿರ್ಲಕ್ಷ್ಯ ಅಕ್ಷಮ್ಯ

ರಾಜ್ಯ ಬಜೆಟ್ ಅಧಿವೇಶನ ಇಂದು (ಮಾ. 15) ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯವನ್ನು ಮಂಡಿಸಲಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಿಗೆ ದಕ್ಕುವ ಅನುದಾನಗಳು, ಘೊಷಣೆಯಾಗುವ ಯೋಜನೆಗಳ ಕುರಿತಾದ ಮಾಹಿತಿ ಇದರಲ್ಲಿ ಅಂತರ್ಗತವಾಗಿರುತ್ತದೆಯಾದ್ದರಿಂದ ಸಹಜವಾಗಿಯೇ ಸಾರ್ವಜನಿಕರಲ್ಲಿ ನಿರೀಕ್ಷೆ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭಾಧ್ಯಕ್ಷರು ಮತ್ತೊಂದು ಪ್ರಮುಖ ಸಂಗತಿಯ ಕುರಿತೂ ಮಾಹಿತಿ ನೀಡಿದ್ದಾರೆ. ಅದು ಕಲಾಪಕ್ಕೆ ಶಾಸಕರ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸುವುದರ ಕುರಿತಾದದ್ದು. ದಿನಕ್ಕೆರಡು ಬಾರಿ ಶಾಸಕರ ಹಾಜರಾತಿ ಪಡೆಯುವ ಮತ್ತು ಸದನ ಆರಂಭವಾದ ಒಂದು ಗಂಟೆಯೊಳಗಾಗಿ ಅವರು ಹಾಜರಾತಿ ಪುಸ್ತಕದಲ್ಲಿ ಸಹಿಹಾಕುವುದನ್ನು ಕಡ್ಡಾಯವಾಗಿಸುವ ಚಿಂತನೆ ಅವರದಾಗಿದ್ದು, ಇದು ನಿಜಕ್ಕೂ ಸಕಾರಾತ್ಮಕ ಕ್ರಮವೆಂದೇ ಹೇಳಬೇಕು. ಒಂದು ಗಂಟೆಯ ನಂತರ ಸಹಿಗೆ ಅವಕಾಶವಿರುವುದಿಲ್ಲ ಮತ್ತು ಕಲಾಪದ ಸಂದರ್ಭದಲ್ಲಿ ಎಷ್ಟು ಕಾಲಾವಧಿಯವರೆಗೆ ಶಾಸಕರು, ಸಚಿವರ ಉಪಸ್ಥಿತಿಯಿತ್ತು ಎಂಬ ಮಾಹಿತಿಯೂ ಇದರಿಂದ ಲಭ್ಯವಾಗಲಿದ್ದು, ಈ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ ಎಂಬುದು ಮತ್ತೊಂದು ಗಮನಾರ್ಹ ಅಂಶ.

ವಾಸ್ತವವಾಗಿ ಇಂಥದೊಂದು ಕ್ರಮದ ಅಗತ್ಯವೇ ಇಲ್ಲವೆನ್ನಬೇಕು. ಕಾರಣ ತಂತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲೆಂದು ಕಲಾಪಗಳಿಗೆ ಹಾಜರಾಗಿ, ಪ್ರಶ್ನೋತ್ತರ, ಚರ್ಚೆಗಳಲ್ಲಿ ಭಾಗವಹಿಸಿ ಹೊಣೆಗಾರಿಕೆ ಮೆರೆಯುವವರಿಗೆ ಹೊರಗಿನಿಂದ ಇಂಥ ಕಟ್ಟುನಿಟ್ಟುಗಳನ್ನು ಹೇರುವ ಅಗತ್ಯವೇ ಇರುವುದಿಲ್ಲ. ಆದರೆ ಅಂಥ ಕರ್ತವ್ಯಪ್ರಜ್ಞೆ ಹಲವು ಶಾಸಕರಲ್ಲಿ, ಅಷ್ಟೇಕೆ ಕೆಲ ಸಚಿವರಲ್ಲೂ ಮಾಯವಾಗಿರುವ ಕಾರಣ, ಇಂಥ ಮಾಗೋಪಾಯಕ್ಕೆ ಮೊರೆಹೋಗಬೇಕಿದೆ ಎಂಬುದು ತಥಾಕಥಿತ ಜನಪ್ರತಿನಿಧಿಗಳ ನಿರ್ಲಕ್ಷ್ಯ ವರ್ತನೆಗೆ ಹಿಡಿದ ಕನ್ನಡಿಯೇ ಸರಿ. ಕ್ಷೇತ್ರಾಭಿವೃದ್ಧಿ ಸಂಬಂಧಿತ ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸದೆ, ಕೇವಲ ಹಾಜರಾತಿಗಾಗಿ ಕೆಲಕಾಲ ಸದನದಲ್ಲಿ ‘ದಿನದೂಡುವ’ ಶಾಸ್ತ್ರಮಾಡಿ ಹಾಜರಿ ಪುಸ್ತಕಕ್ಕೆ ಹಾಗೂ ಪ್ರವಾಸಭತ್ಯೆಯ ನಮೂನೆಗೆ ಸಹಿಹಾಕುವ ಜನಸೇವಕರಿಂದ ಶ್ರೀಸಾಮಾನ್ಯರು ಹೆಚ್ಚಿನದನ್ನೇನಾದರೂ ನಿರೀಕ್ಷಿಸಲಾದೀತೇ? ಕಲಾಪದ ಸಂಪೂರ್ಣ ಅವಧಿಯಲ್ಲಿ ಭಾಗಿಯಾಗುವ ಸ್ವಯಂಶಿಸ್ತನ್ನು ಶಾಸಕರು ರೂಢಿಸಿಕೊಳ್ಳುವುದು ಅತಿಮುಖ್ಯ; ಇಂಥದೊಂದು ಕರ್ತವ್ಯಪ್ರಜ್ಞೆಯನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಆಯಾ ಪಕ್ಷಗಳ ಹೊಣೆಗಾರಿಕೆಯೂ ಹೌದು. ಮಸೂದೆ ಅನುಮೋದನೆ ಅಥವಾ ಸಂಖ್ಯಾಬಲದ ಪ್ರದರ್ಶನದಂಥ ನಿರ್ದಿಷ್ಟ ಸಂದರ್ಭಗಳಲ್ಲಷ್ಟೇ ‘ವಿಪ್’ ಜಾರಿಮಾಡುವ ರಾಜಕೀಯ ಪಕ್ಷಗಳು, ಕಡ್ಡಾಯ ಹಾಜರಾತಿಯಂಥ ಮಹತ್ವದ ಅಂಶಕ್ಕೂ ಗಮನ ಕೊಡಬಹುದಲ್ಲವೆ?

ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸದಿದ್ದರೆ ಶಾಸಕರು ಉತ್ತಮ ಸಂಸದೀಯ ಪಟುಗಳಾಗಿ ರೂಪುಗೊಳ್ಳುವುದಾದರೂ ಹೇಗೆ? ‘ವೃತ್ತಿಪರ’ ರಾಜಕಾರಣಿಗಳು ಮಾತ್ರವಲ್ಲದೆ ಸಮಾಜದ ವಿಭಿನ್ನ ಕ್ಷೇತ್ರಗಳಿಗೆ ಸೇರಿದವರೂ ರಾಜಕೀಯರಂಗವನ್ನು ಪ್ರವೇಶಿಸುವಂತಾಗಬೇಕು ಎಂಬ ಆಶಯವೇನೋ ಸ್ವಾಗತಾರ್ಹವೇ; ಆದರೆ ಶಾಸನಸಭೆ ಎಂಬುದು ಇಂಥವರ ಪಾಲಿನ ‘ಪಿಕ್​ನಿಕ್’ ತಾಣವಾಗಬಾರದಲ್ಲವೇ? ಜನಸೇವೆಗೆಂದು ಬಂದವರು ಅದು ಬಯಸುವ ಅನುಕರಣೀಯ ಆದರ್ಶ, ಅಳವಡಿಸಿಕೊಳ್ಳಬೇಕಾದ ಶಿಸ್ತು, ತೋರಬೇಕಾದ ಕರ್ತವ್ಯಬದ್ಧತೆಯನ್ನು ಮರೆತರೆ ಅದು ಚುನಾಯಿಸಿದ ಜನರಿಗಾಗುವ ನಷ್ಟವೇ ಸರಿ. ಪ್ರತಿಬಾರಿ ಕಲಾಪ ನಡೆದಾಗಲೂ ಸರ್ಕಾರಕ್ಕೆ ಆಗುವ ಅಗಾಧ ವೆಚ್ಚವು ಪಾವತಿಯಾಗುವುದು ಶ್ರೀಸಾಮಾನ್ಯನ ಜೇಬಿನಿಂದ ಎಂಬ ಕಟುವಾಸ್ತವವಾದರೂ ಇವರನ್ನು ಎಚ್ಚರಿಸುವಂತಾಗಲಿ. ಬದ್ಧತೆಯಿಲ್ಲದ ಜನಪ್ರತಿನಿಧಿಗಳನ್ನು ಜನರು ಕ್ಷಮಿಸುವುದಿಲ್ಲ ಎಂಬುದನ್ನು ಇಂಥವರು ಮರೆಯದಿರಲಿ.

Leave a Reply

Your email address will not be published. Required fields are marked *