ಸಿಂಧನೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡದೆ ಇರುವುದರಿಂದ ರೋಗಿ ಮೃತಪಟ್ಟಿದ್ದು, ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ತಾಲೂಕ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಆರ್‌ಎಚ್ ಕ್ಯಾಂಪ್ 3ರ ನಿವಾಸಿ ಮೌಸಂಬಿ ಮಂಡಲ್ ಹೆರಿಗೆ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಕಳೆದ ಮೂರ‌್ನಾಲ್ಕು ತಿಂಗಳಿಂದ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಕರ್ತವ್ಯಲೋಪ ಎಸಗಿದ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಲಾವಿದರ ಘಟಕ ಅಧ್ಯಕ್ಷ ಆದನಗೌಡ ಜವಳಗೇರಾ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀದೇವಿ, ಮೌನೇಶ ಕೆ., ರಬ್ಬಾನಿ ಜಾಗೀರದಾರ್, ಗದೆಪ್ಪ ಉಪ್ಪಾರ, ಅಬ್ದುಲ್ ನಬಿ, ಪ್ರಶಾಂತ, ಮಂಜುನಾಥ ಪಾಟೀಲ, ಶರಣಪ್ಪ ನಾಯಕ, ರಾಜುನಾಯಕ ಇದ್ದರು.