ಕರ್ತವ್ಯನಿರತ ಜೆಸ್ಕಾಂ ಸಿಬ್ಬಂದಿ ಸಾವು

ಬೀದರ್: ಜಿಲ್ಲೆಯಲ್ಲಿ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಲೈನ್ಮೆನ್(ಮಾರ್ಗದಾಳು) ಬಲಿಯಾಗುವ ಸರಣಿ ಮುಂದುವರಿದಿದೆ. ಬುಧವಾರ ಸಂಜೆ ಬೀದರ್​ನ ಗುಂಪಾ ಹತ್ತಿರದ ಶಿವಾಜಿ ನಗರದಲ್ಲಿ ಕರ್ತವ್ಯನಿರತ ಲೈನ್ಮೆನ್ ಸಂತೋಷ ರೆಡ್ಡಿ(40) ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಮೂವರು ಲೈನ್ಮೆನ್ ವಿದ್ಯುತ್ ಶಾಕ್ಗೆ ಪ್ರಾಣ ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಈ ಸರಣಿ ಅವಘಡಗಳಿಂದಾಗಿ ಕಂಬಕ್ಕೆ ಹತ್ತಿ ಕೆಲಸ ಮಾಡುವುದಕ್ಕೆ ಈಗ ಲೈನ್ಮೆನ್ಗಳೇ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಮೂರೂ ಘಟನೆಗಳಲ್ಲಿ ಲೈನ್ಮೆನ್ಗಳ ಸಾವಿಗೆ ಜೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷೃತೆಯೇ ಕಾರಣ ಎನ್ನಲಾಗಿದೆ.
ಶಿವಾಜಿ ನಗರದಲ್ಲಿ ವಿದ್ಯುತ್ ಸಂಪರ್ಕದ ಕೆಲಸದಲ್ಲಿ ಸಂತೋಷರೆಡ್ಡಿ ನಿರತರಾಗಿದ್ದರು. ಈ ವೇಳೆ ಇವರು ದುರಸ್ತಿ ಮಾಡುತ್ತಿರುವ ತಂತಿಯಲ್ಲಿ ಆಕಸ್ಮಿಕ ವಿದ್ಯುತ್ ಪ್ರವಹಿಸಿದೆ. ಇದರಿಂದ ಶಾಕ್ಗೆ ಒಳಗಾದ ಸಂತೋಷರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಬ ಹತ್ತಿ ಕೆಲಸ ಮಾಡುವ ವೇಳೆ ಈ ಮಾರ್ಗದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ಆದರೆ ಕಾರ್ಯನಿರ್ವಹಿಸುವ ವೇಳೆ ಅದ್ಹೇಗೆ ವಿದ್ಯುತ್ ಬಂತು ಎಂಬುದು ಪ್ರಶ್ನಾರ್ಹ ಎನಿಸಿದೆ.
ಸಂತೋಷರೆಡ್ಡಿ ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮದವರು. ಸುದ್ದಿ ತಿಳಿಯುತ್ತಲೇ ಜೆಸ್ಕಾಂ ನೌಕರ ಸಂಘ ಮಾಜಿ ಮುಖಂಡ ಕಾಶೀನಾಥ ಬೆಲ್ದಾಳೆ, ಜೆಸ್ಕಾಂ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಸೇರಿ ವಿದ್ಯುತ್ ನೌಕರರ ಪ್ರಮುಖರು ಆಸ್ಪತ್ರೆಗೆ ಭೇಟ ನೀಡಿದರು. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರ್ವಹಣೆಗೆ ಕಂಬವೇರಿದಾಗ ವಿದ್ಯುತ್ ಪ್ರವಹಿಸಿ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ಲೈನ್ಮೆನ್ ಮೃತಪಟ್ಟಿದ್ದಾರೆ. ಕಳೆದ ವಾರ ಧನ್ನೂರ್ ಠಾಣೆ ವ್ಯಾಪ್ತಿಯ ಬ್ಯಾಲಹಳ್ಳಿ ಹತ್ತಿರ ರಾಯಚೂರು ಮೂಲದ ಲೈನ್ಮೆನ್ ಲಿಂಗರಾಜ(23) ಬಲಿಯಾಗಿದ್ದರು. ಇದಕ್ಕೂ ಮುನ್ನ ಸಿದ್ದೇಶ್ವರ ಹತ್ತಿರದ ಘಟನೆಯಲ್ಲಿ ಲೈನ್ಮೆನ್ ಮೃತಪಟ್ಟಿದ್ದರು. ಜೆಸ್ಕಾಂನವರ ನಿರ್ಲಕ್ಷೃವೇ ಈ ಸರಣಿ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿವೆ.

Leave a Reply

Your email address will not be published. Required fields are marked *