ಕರ್ತವ್ಯದಲ್ಲಿ ಯಶಸ್ವಿಯಾದ್ರೆ ಪಾಸ್

ಕೋಲಾರ: ಚುನಾವಣಾ ಕರ್ತವ್ಯದಲ್ಲಿ ಶೇ.99.99 ಗುರಿ ಸಾಧಿಸಿದರೂ ಫೇಲ್ ಆದಂತೆಯೇ. ಒಂದೇ ಒಂದು ತಪ್ಪಿನಿಂದಾಗಿ ಮರುಚುನಾವಣೆ, ಮರು ಎಣಿಕೆ ಪ್ರಮೇಯ ಬರಬಹುದಾದ್ದರಿಂದ ಶೇ.100 ಯಶಸ್ವಿಯಾದರೆ ಮಾತ್ರ ಉತ್ತೀರ್ಣರಾದಂತೆ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಪಂ ಸಿಇಒ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ವೇಳಾಪಟ್ಟಿ ಪ್ರಕಟಿಸಬಹುದು. ಆ ಕ್ಷಣದಿಂದಲೇ ಚುನಾವಣೆ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಲೋಪಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರತರಾಗಬೇಕು. ಸುಳ್ಳು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಚಲನವಲನಗಳ ಮೇಲೆ ನಿಗಾ ಇಡಲಾಗುವುದು ಎಂದು ಎಚ್ಚರಿಸಿದರು.

ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯನಿರ್ವಹಣೆ ಕುರಿತು ಸೆಕ್ಟರ್ ಅಧಿಕಾರಿಗಳು ಫೆ. 20ರಿಂದ 28ರ ಅವಧಿಯಲ್ಲಿ ಯಾವ ದಿನದಂದು ವಾಹನ ವ್ಯವಸ್ಥೆ ಕಲ್ಪಿಸಲಾಗುವುದೋ ಆ ದಿನ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಎಡಿಸಿ ಎಚ್.ಪುಷ್ಪಲತಾ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಮೊದಲ ಬಾರಿಗೆ ಸಿ.ವಿಜಿಲ್ (ಜಾಗೃತ ಮತದಾರ ) ಎಂಬ ಆಪ್ ಸಿದ್ಧಪಡಿಸಿದ್ದು, ಚುನಾವಣಾ ಅಕ್ರಮ ಸಂಬಂಧ ಸಾರ್ವಜನಿಕರು ಸ್ಥಳದಲ್ಲಿದ್ದು (ಲೈವ್) ಫೋಟೋ, ವೀಡಿಯೋ ಅಪ್​ಲೋಡ್ ಮಾಡಿದರೆ ತಕ್ಷಣ ಜಿಲ್ಲಾ ಚುನಾವಣಾ ಶಾಖೆಗೆ ಮಾಹಿತಿ ರವಾನೆಯಾಗುತ್ತದೆ. ಮತಗಟ್ಟೆ ವ್ಯಾಪ್ತಿಯಲ್ಲಿರುವ ಸೆಕ್ಟರ್ ಅಧಿಕಾರಿಗಳಿಗೆ ಸಂದೇಶ ತಲುಪುತ್ತದೆ. ಅಧಿಕಾರಿಗಳು 13 ನಿಮಿಷದೊಳಗೆ ಸ್ಥಳಕ್ಕೆ ತೆರಳಿ ಮಹಜರು ನಡೆಸಬೇಕು ಎಂದರು.

ಆಪ್​ನಲ್ಲಿ ಮಾಹಿತಿದಾರ ಹೆಸರು, ಊರು ಬಹಿರಂಗಪಡಿಸುವುದು ಐಚಿಕ. ಯಾವ ಸ್ಥಳದಲ್ಲಿ ಇದನ್ನು ತೆಗೆಯಲಾಗಿದೆ ಎಂಬುದು ಗೂಗಲ್ ಮ್ಯಾಪ್​ನಿಂದ ತಿಳಿಯಬಹುದು. ಈ ಆಪ್ ಅಕ್ರಮದ ಕುರಿತು ಎಫ್​ಐಆರ್ ದಾಖಲಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ಒದಗಿಸಲು ಸಹಾಯಕ್ಕೆ ಬರುತ್ತದೆ. ಪ್ರಸ್ತುತ ಆಪ್ ಪ್ರಾಯೋಗಿಕವಾಗಿ ಬಿಡಲಾಗಿದ್ದು, ಇನ್ನಷ್ಟು ಸುಧಾರಣೆಗಳೊಂದಿಗೆ ಚುನಾವಣೆ ದಿನ ಪ್ರಕಟವಾದ ನಂತರ ಕಾರ್ಯನಿರ್ವಹಿಸಲಿದೆ ಎಂದರು.

ಸಿ.ವಿಜಿಲ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಎಚ್.ಕೆ. ಶಿವಕುಮಾರ್, ಸ್ವೀಪ್ ಚಟುವಟಿಕೆ ನೋಡಲ್ ಅಧಿಕಾರಿ ಎಂ.ಸೌಮ್ಯಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು. ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಅಗತ್ಯ ಯಂತ್ರಗಳು ಸಿದ್ಧ: ಭಾರತ ಸೇರಿ ಜಗತ್ತಿನ 18 ದೇಶಗಳಲ್ಲಿ ಚುನಾವಣೆಗೆ ಇವಿಎಂ ಬಳಸಲಾಗುತ್ತಿದ್ದು, ಕೆಲ ರಾಷ್ಟ್ರಗಳು ಹಿಂದೆ ಸರಿಯುತ್ತಿವೆ. ಆದರೆ ಭಾರತದ ಇವಿಎಂನಲ್ಲಿ ಬಳಸಿರುವ ತಂತ್ರಜ್ಞಾನವನ್ನು ಟ್ಯಾಂಪರ್ ಮಾಡಲಾಗದು. ಇದು ನಮ್ಮ ದೇಶದ ಹೆಮ್ಮೆ ಹಾಗೂ ಸತ್ಯದ ಸಂಕೇತ. ಕೇಂದ್ರ ಚುನಾವಣಾ ಆಯೋಗ ಇವಿಎಂ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿದೆ. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಅಗತ್ಯವಿರುವ ವಿವಿಪ್ಯಾಟ್ ಯಂತ್ರ ಸಿದ್ಧಪಡಿಸಿಕೊಂಡಿದೆ ಎಂದು ತರಬೇತುದಾರ ಎಚ್.ಕೆ.ತಿಲಗಾರ್ ತಿಳಿಸಿದರು.