ಕರ್ಣಾಟಕ ಬ್ಯಾಂಕ್​ಗೆ 477 ಕೋಟಿ ರೂ. ನಿವ್ವಳ ಲಾಭ

ಮಂಗಳೂರು: ಕರ್ಣಾಟಕ ಬ್ಯಾಂಕ್ 2018-19ರ ಸಾಲಿನ ವಿತ್ತೀಯ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 477.24 ಕೋಟಿ ರೂ. ನಿವ್ವಳ ಲಾಭ ಘೊಷಿಸಿದೆ. 2016-17ರಲ್ಲಿ 452.26 ಕೋಟಿ ರೂ. ಹಿಂದಿನ ಅತ್ಯಂತ ಗರಿಷ್ಠ ನಿವ್ವಳ ಲಾಭವಾಗಿತ್ತು.

ನಾಲ್ಕನೆಯ ತ್ರೈಮಾಸಿಕ ಅಂತ್ಯಕ್ಕೆ (ಮಾರ್ಚ್ 2019) ನಿವ್ವಳ ಲಾಭ ಏರಿಕೆ ಕಂಡಿದ್ದು, 61.73 ಕೋಟಿ ರೂ. ತಲುಪಿದೆ. 2017-18ರ ನಾಲ್ಕನೇ ತ್ರೖೆಮಾಸಿಕದಲ್ಲಿ 11 ಕೋ. ರೂ. ನಿವ್ವಳ ಲಾಭವಾಗಿತ್ತು. ಶೇ.461.18 ವೃದ್ಧಿಯ ಏರಿಕೆ ಈ ಸಾರ್ವಕಾಲಿಕ ನಿವ್ವಳ ಲಾಭಕ್ಕೆ ಕಾರಣವಾಗಿದೆ.

ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕ್ ಹಣಕಾಸು ವರದಿ ಅಂಗೀಕಾರಗೊಂಡಿದ್ದು, ಷೇರುದಾರರಿಗೆ ಶೇ.35 ಡಿವಿಡೆಂಡ್ ನೀಡುವ ಅನುಮೋದನೆ ಪ್ರಸ್ತಾಪಿಸಲಾಗಿದೆ. ಬ್ಯಾಂಕ್ ಒಟ್ಟು ವ್ಯವಹಾರ ಮಾ.31ಕ್ಕೆ 1,23,280 ಕೋಟಿ ರೂ. ತಲುಪಿದ್ದು, ವಾರ್ಷಿಕ ಶೇ.11.95 ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷಾಂತ್ಯಕ್ಕೆ 62,871 ಕೋಟಿ ರೂ. ಇದ್ದ ಠೇವಣಿ ಶೇ.8.88 ಏರಿಕೆ ಕಂಡು, ವಿತ್ತೀಯ ವರ್ಷ 2018-19ರ ವರ್ಷಾಂತ್ಯಕ್ಕೆ 68,452 ಕೋ.ರೂ. ತಲುಪಿದೆ. ಬ್ಯಾಂಕಿನ ಮುಂಗಡಗಳು ಕಳೆದ ವರ್ಷದ 47,252 ಕೋಟಿ ರೂ.ನಿಂದ 54,828 ಕೋಟಿ ರೂ.ಗೆ ವೃದ್ಧಿಸಿ ಶೇ.16.03 ದರದಲ್ಲಿ ಅಭಿವೃದ್ಧಿ ಕಂಡಿದೆ. ಉಳಿತಾಯ ಹಾಗೂ ಚಾಲ್ತಿ ಖಾತೆಯ ಠೇವಣಿ ಮಾರ್ಚ್ 31ಕ್ಕೆ ಬ್ಯಾಂಕ್​ನ ಒಟ್ಟು ಠೇವಣಿ ಶೇ.28.06 ಇದೆ. ಕಳೆದ ವರ್ಷಾಂತ್ಯಕ್ಕೆ ಇದು ಶೇ.27.98 ಇತ್ತು. ಕಳೆದ ವರ್ಷಾಂತ್ಯಕ್ಕೆ ಶೇ.4.92 ಇದ್ದ ಸ್ಥೂಲ ಅನುತ್ಪಾದಕ ಸೊತ್ತುಗಳು (ಜಿಎನ್​ಪಿಎ ) ಈ ವರ್ಷಾಂತ್ಯಕ್ಕೆ ಶೇ.4.41ಕ್ಕೆ ಇಳಿಕೆ ಕಂಡಿವೆ. ನಿವ್ವಳ ಅನುತ್ಪಾದಕ ಸ್ವತ್ತುಗಳೂ (ಎನ್​ಎನ್​ಪಿಎ) ನಿಯಂತ್ರಣದಲ್ಲಿದ್ದು ಶೇ.2.95 ಇವೆ. ಕಳೆದ ವರ್ಷಾಂತ್ಯಕ್ಕೆ ಶೇ.2.96 ಇದ್ದವು.

ಆದ್ಯತಾ ರಂಗಕ್ಕೆ ನೀಡಿದ ಮುಂಗಡ ಬ್ಯಾಂಕ್​ನ ಒಟ್ಟು ಮುಂಗಡದ ಶೇ.44.17 ಇದೆ. ಇದು ಆರ್​ಬಿಐನ ನಿರ್ದೇಶಿತ ಗುರಿ ಕನಿಷ್ಠ ಶೇ.40ಕ್ಕಿಂತ ಅಧಿಕವಾಗಿದೆ. ಬಂಡವಾಳ ಪರ್ಯಾಪ್ತತಾ ಅನುಪಾತ (ಕ್ಯಾಪಿಟಲ್ ಅಡಿಕ್ವಸಿ ರೇಶ್ಯೊ) (ಬೆಸಿಲ್3 ಅನ್ವಯ) ಶೇ.13.17 ಮಟ್ಟ ತಲುಪಿ ಏರಿಕೆ ಕಂಡಿದೆ. ಕಳೆದ ವರ್ಷಾಂತ್ಯಕ್ಕೆ ಶೇ.12.04 ಇತ್ತು. ಇದು ಆರ್​ಬಿಐನ ಶೇ.9 ಕನಿಷ್ಠ ಬಂಡವಾಳ ಪರ್ಯಾಪ್ತತಾ ಅನುಪಾತಕ್ಕಿಂತ ಹೆಚ್ಚಾಗಿದೆ.

ಬ್ಯಾಂಕ್ ಸಾರ್ವಕಾಲಿಕ ದಾಖಲೆಯ ವಾರ್ಷಿಕ ನಿವ್ವಳ ಲಾಭ ಘೊಷಿಸಿದೆ. ಬ್ಯಾಂಕ್​ನ ಇತಿಹಾಸದಲ್ಲಿ ಅಪೂರ್ವ ದಾಖಲೆಯಾಗಿದ್ದು, ನಿರಂತರ ಹಾಗೂ ಸ್ಥಿರತೆ ಒಳಗೊಂಡ ಸಾಧನೆಯೇ ಇದಕ್ಕೆ ಕಾರಣ. ಮುಂಗಡ ವಿಭಾಗ, ಐಟಿ ವಿಭಾಗ ಹಾಗೂ ಮಾನವ ಸಂಪನ್ಮೂಲಗಳನ್ನು ಕೇಂದ್ರವಾಗಿರಿಸಿಕೊಂಡು ಮುನ್ನಡೆಯುತ್ತಿರುವ ಕೆಬಿಎಲ್ ವಿಕಾಸ್ ಎನ್ನುವ ಪರಿವರ್ತನಾ ಜೈತ್ರಯಾತ್ರೆಯೂ ತನ್ನ ಪ್ರಥಮ ಸಾರ್ಥಕ ಸಂವತ್ಸರ ಪೂರ್ಣಗೊಳಿಸಿ ಫಲ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ತನ್ನೆಲ್ಲ ಭಾಗಿದಾರರ ಆಶೋತ್ತರಗಳಿಗೆ ಅನುಗುಣವಾಗಿ ಸ್ಪಂದಿಸಿ ಹೂಡಿಕೆಗಳ ಸಂವರ್ಧನೆಗೆ ಹೆಚ್ಚಿನ ಗಮನ ನೀಡಲಿದೆ.

| ಮಹಾಬಲೇಶ್ವರ ಎಂ.ಎಸ್., ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

Leave a Reply

Your email address will not be published. Required fields are marked *