ಕುಡಚಿ: ಕರೊನಾ ಪರಿಸ್ಥಿತಿ ಪರಿಗಣಿಸಿ ಲಾಕ್‌ಡೌನ್ ಮುಂದುವರಿಸಬೇಕೋ ಅಥವಾ ಅಂತ್ಯಮಾಡಬೇಕೋ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಲಿದ್ದಾರೆ. ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಸೋಮವಾರ ಪಟ್ಟಣದ ಕುಡಚಿ ದರ್ಗಾ ಎಸ್ಟೇಟ್ ಕಮಿಟಿ ನೀಡಿದ 10 ಆಕ್ಸಿಜನ್ ಸಾಂಧ್ರಕ, ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸ್ಪಂದಿಸುತ್ತಿರುವ ದರ್ಗಾ ಎಸ್ಟೇಟ್ ಕಮಿಟಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ.ಬಾಬಾಜಾನ ಚಮ್ಮನ್‌ಶೇಖ್ ಮಾತನಾಡಿದರು. ಕುಡಚಿ ದರ್ಗಾ ಎಸ್ಟೇಟ್ ಕಮಿಟಿ ಅಧ್ಯಕ್ಷ ಹುಸೇನಸಾಹೇಬ್ ಚಮ್ಮನ್‌ಶೇಖ್, ಉಪಾಧ್ಯಕ್ಷ ಮೋಹಿನಸಾಬ್ ವಾಟೆ, ಡಾ.ಬಾಬಾಜಾನ್ ಚಮ್ಮನಶೇಖ್ ಇದ್ದರು.
ಕಾಗವಾಡ ವರದಿ: ಜನರ ಸೇವೆಗೆ ಸದಾ ಮುಂದಾಗುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ನೀಡಲಾಗಿರುವ 5 ಆಕ್ಸಿಜನ್ ಯಂತ್ರಗಳನ್ನು ಸೋಮವಾರ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಮಾತೋಶ್ರೀ ಹೇಮಾವತಿ ಹೆಗ್ಗಡೆಯವರು ಕೋವಿಡ್-19ಪರಿಸ್ಥಿತಿ ಗಮನದಲ್ಲಿರಿಸಿಕೊಂಡು ವಿವಿಧ ಆಸ್ಪತ್ರೆಗಳಿಗೆ ಅಗತ್ಯ ನೆರವು ನೀಡುತ್ತಿರುವುದು ಸಂತಸದ ವಿಚಾರ. ಈ ಸೇವೆ ಮುಂದುವರಿಯಲಿ ಎಂದು ಅವರು ಆಶಿಸಿದರು.
ಇದೇ ಸಮಯದಲ್ಲಿ ಕಾಗವಾಡ ತಾಲೂಕಿನ ಪ್ರತಿ ಗ್ರಾಮಗಳಿಗೆ ಶ್ರೀಮಂತ ಪಾಟೀಲ ಫೌಂಡೇಷನ್ ವತಿಯಿಂದ ಸೋಂಕು ನಿವಾರಕ ದ್ರಾವಣ ವಿತರಿಸಲಾಯಿತು. ತಹಸೀಲ್ದಾರ್ ಪರಿಮಳಾ ದೇಶಪಾಂಡೆ, ಆರೋಗ್ಯ ಅಧಿಕಾರಿ ಪುಷ್ಪಲತಾ ಸುಣ್ಣದಕಲ್ಲ, ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಕೃಷ್ಣ ಟಿ., ಸಿಇಒ ಈರನಗೌಡ ಎಗನಗೌಡರ, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಸಂಜೀವ ಸದಲಗಿ, ಉಪತಹಸೀಲ್ದಾರ್ ಅಣ್ಣಾಸಾಬ ಕೋರೆ, ಎಂ.ಆರ್. ಪಾಟೀಲ, ಬಿ.ಬಿ.ಬೋರಗಲ, ರಾಜು ನಾಯಕ, ಸದಾಶಿವ ಚೌಗಲಾ, ರವಿ ಪಾಟೀಲ, ವಿಠ್ಠಲ ಪವಾರ, ವೈದ್ಯಕೀಯ ಅಧಿಕಾರಿಗಳು ಇದ್ದರು.
ಬೆಳಗಾವಿ ದೊಡ್ಡ ಜಿಲ್ಲೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ನಿತ್ಯ ಹೆಚ್ಚುತ್ತಿದೆ. ಕರೊನಾ ನಿಯಂತ್ರಣಕ್ಕೆ ನಮ್ಮ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಖಾತೆ ವಹಿಸಿಕೊಟ್ಟರೆ ಉತ್ತಮ.
| ಶ್ರೀಮಂತ ಪಾಟೀಲ ಜವಳಿ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವ