ರಿಪ್ಪನ್ಪೇಟೆ: ದೇಶಾದ್ಯಂತ ಮಹಾಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಹೋರಾತ್ರಿ ಶ್ರಮಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಕೆಲವರಿಗೆ ಈ ಶ್ವಾನ ಮಾದರಿಯಾಗಬೇಕು. ಶ್ವಾನವೊಂದು ಸರತಿ ಸಾಲಿನಲ್ಲಿ ಅಂತರವನ್ನು ಕಾಯ್ದುಕೊಂಡು ಕುಳಿತು ಜಾಗೃತಿ ಮೂಡಿಸಿದ ಫೋಟೋ ಭಾರಿ ವೈರಲ್ ಆಗಿದೆ.
ಹೊಸನಗರ ತಾಲೂಕು ರಿಪ್ಪನ್ಪೇಟೆ ಶ್ರೀ ಸಿದ್ಧಿವಿನಾಯಕ ಮಿಲ್ಕ್ ಪಾರ್ಲರ್ನಲ್ಲಿ ಶುಕ್ರವಾರ ಬೆಳಗ್ಗೆ ಹಾಲಿನ ವಹಿವಾಟು ನಡೆದಿತ್ತು. ಪಾರ್ಲರ್ ಮಾಲೀಕ ಹರೀಶ್ ಕರೊನಾ ವೈರಸ್ ಸೋಂಕು ತಡೆಗಟ್ಟುವ ಉದ್ದೇಶದಿಂದ ಒಂದು ಮೀಟರ್ ಅಂತರದಲ್ಲಿ ಗೆರೆಗಳನ್ನು ಹಾಕಿ ಗ್ರಾಹಕರಿಗೆ ಸರತಿ ಸಾಲಿನಲ್ಲಿ ನಿಂತು ಖರೀದಿಸುವಂತೆ ಸ್ಥಳ ನಿಗದಿ ಮಾಡಿದ್ದರು. ಗ್ರಾಹಕರು ಸಹಿತ ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ನಿಂತು ಒಬ್ಬರಾದ ನಂತರ ಒಬ್ಬರಂತೆ ಹಾಲು ಹಾಗೂ ಇತರೆ ಉತ್ಪನ್ನ ಖರೀದಿಸುತ್ತಿದ್ದರು.
ಪ್ರತಿದಿನ ಪಾರ್ಲರ್ ಬಳಿಯೇ ಸುಳಿಯುತ್ತಿದ್ದ ಬೀದಿ ನಾಯಿಯೊಂದು ಇದನ್ನು ಗಮನಿಸಿದೆ. ನಂತರ ಮಾಲೀಕ ಪ್ರತಿದಿನ ಬೆಳಗ್ಗೆ ಹಾಕುತ್ತಿದ್ದ ಬಿಸ್ಕತ್ತನ್ನು ಪಡೆಯಲು ತಾನೂ ಸರತಿ ಸಾಲಿಗೆ ಗೆರೆ ಹಾಕಿದ್ದ ಸ್ಥಳದಲ್ಲಿ ಕಾದು ಕೂತಿತ್ತು. ಇದನ್ನು ನೋಡಿದ ಅಂಗಡಿ ಮಾಲೀಕ ಮೊದಲು ಸರತಿ ಸಾಲಿನಲ್ಲಿ ನಿಂತ ಗ್ರಾಹಕರಿಗೆ ಅಪೇಕ್ಷಿತ ವಸ್ತುಗಳನ್ನು ಮಾರಾಟ ಮಾಡಿದ ನಂತರ ಎಂದಿನಂತೆ ನಾಯಿಗೆ ಬಿಸ್ಕತ್ ಹಾಕಿದ. ಅಲ್ಲಿಯವರೆಗೂ ತಾಳ್ಮೆಯಿಂದ ಕುಳಿತಿದ್ದ ಶ್ವಾನ ತನ್ನ ಪಾಲಿನ ಆಹಾರ ಪಡೆದುಕೊಂಡು ಇತರರಿಗೆ ಜಾಗ ಮಾಡಿಕೊಟ್ಟು ಅಲ್ಲಿಂದ ಸಾಗಿತು.
ನಾಯಿಯ ಹಿಂಬದಿ ಸಾಲಿನಲ್ಲಿ ನಿಂತ ಹಿರಿಯ ಆರೋಗ್ಯ ಸಹಾಯಕ ಆಶ್ಚರ್ಯ ವ್ಯಕ್ತಪಡಿಸಿ ಇದರ ಬುದ್ಧಿಯೇ ಎಲ್ಲರಿಗೂ ಬಂದು ನಿಯಮ ಪಾಲನೆ ಮಾಡಿದರೆ ಇಂತಹ ಸೋಂಕನ್ನು ತಡೆಗಟ್ಟಲು ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.