ಕರೆಂಟ್ ಉತ್ಪಾದನೆ ಕಡುಕಷ್ಟ

ಕಾರವಾರ: ಬಿರು ಬೇಸಿಗೆಯಿಂದ ಅಣೆಕಟ್ಟೆಗಳು ಒಣಗುತ್ತಿವೆ. ಇದರಿಂದ ವಿದ್ಯುತ್ ಉತ್ಪಾದನೆಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಒಟ್ಟು 6 ಅಣೆಕಟ್ಟೆಗಳಿದ್ದು, 5 ವಿದ್ಯುದಾಗಾರಗಳಿವೆ. ಒಟ್ಟಾರೆ 1,510 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಆದರೆ, ಕೆಪಿಸಿ ಈ ಘಟಕಗಳ ಮೇಲೆ ಹೆಚ್ಚಿನ ಒತ್ತಡ ನೀಡದೇ ನೀರನ್ನು ತುರ್ತು ಪರಿಸ್ಥಿತಿಗಾಗಿ ಸಂಗ್ರಹಿಸುತ್ತಿದೆ.

ಸಾಮಾನ್ಯವಾಗಿ ಮಳೆಗಾಲ ದಲ್ಲಿ ಇಲ್ಲಿನ ಜಲವಿದ್ಯು ದಾಗಾರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಆಯಾ ದಿನದ ಬೇಡಿಕೆಗನುಗುಣವಾಗಿ ಬೆಂಗಳೂರಿನ ಲೋಡ್ ಡಿಸ್ಪ್ಯಾಚ್ ಸೆಂಟರ್​ನ ಸೂಚನೆಯಂತೆ ವಿದ್ಯುತ್ ಉತ್ಪಾದಿಸಲಾಗುತ್ತದೆ.

ನೀರು ಸಂಗ್ರಹ: ಕಾಳಿ ಜಲ ವಿದ್ಯುತ್ ಯೋಜನೆಯ ಪ್ರಮುಖ ಜಲಾಶಯ ಸೂಪಾದಲ್ಲಿ ಶುಕ್ರವಾರದ ಮಾಹಿತಿಯಂತೆ 535.8 ಮೀಟರ್ ನೀರು ಸಂಗ್ರಹವಿದೆ. ಒಟ್ಟಾರೆ ಸಾಮರ್ಥ್ಯದ ಕೇವಲ ಶೇ. 35.61ರಷ್ಟು ನೀರು ಸೂಪಾದಲ್ಲಿ ಉಳಿದುಕೊಂಡಿದೆ.

ಗರಿಷ್ಠ 564 ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ ಸೂಪಾದಲ್ಲಿ ನೀರಿನ ಮಟ್ಟ 494 ಮೀಟರ್ ತಲುಪಿದಲ್ಲಿ ಯಾವುದೇ ಉತ್ಪಾದನೆ ಸಾಧ್ಯವಿಲ್ಲ. ಸದ್ಯ ಇರುವ ನೀರನ್ನು ಬಳಸಿ 1,125 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಬಹುದು. ಜಲಾಶಯದ ಬಳಿ 100 ಮೆಗಾವಾಟ್​ನ ವಿದ್ಯುದಾಗಾರವಿದೆ. ಆದರೆ, ಅಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ನೀರು ಹೊರ ಬಿಡದೇ ನೀರನ್ನು ತುರ್ತು ಸಂದರ್ಭಕ್ಕಾಗಿ ಸಂಗ್ರಹಿಸಲಾಗುತ್ತಿದೆ. ಮೇ ತಿಂಗಳಲ್ಲಿ ಒಟ್ಟಾರೆ 68 ಮಿಲಿಯನ್ ಯುನಿಟ್ ಉತ್ಪಾದನೆಯ ಗುರಿ ಇದ್ದು ಕೇವಲ 14.44 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ.

ಉಳಿದೆಡೆಯೂ ಕಡಿಮೆ: 75.5 ಮೀಟರ್ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಕೊಡಸಳ್ಳಿ ಅಣೆಕಟ್ಟೆಯಲ್ಲಿ 69.9 ಮೀಟರ್ ನೀರಿದೆ. ಅಣೆಕಟ್ಟೆಯ ಶೇ.50.53 ರಷ್ಟು ನೀರಿದ್ದು, 62.5 ಮೀಟರ್​ವರೆಗೆ ಮಾತ್ರ ವಿದ್ಯುತ್ ಉತ್ಪಾದನೆ ಮಾಡಬಹುದು. ಕದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ 34.5 ಮೀಟರ್ ನೀರು ಸಂಗ್ರಹಿಸಬಹುದು. ಸದ್ಯ ಸಾಮರ್ಥ್ಯದ ಶೇ. 36.48 ರಷ್ಟು ಮಾತ್ರ ಅಂದರೆ 30.2 ಮೀಟರ್ ನೀರಿದೆ. ನೀರಿನ ಮಟ್ಟ 27 ಮೀಟರ್​ವರೆಗೆ ಇದ್ದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ.