ಕರುಳು ಮಿಡಿದ ಕಳ್ಳ!

‘ಉಂಡೂ ಹೋದ ಕೊಂಡೂ ಹೋದ’ ಎಂಬ ಗಾದೆ ಯಾರಿಗೆ ತಾನೇ ಗೊತ್ತಿಲ್ಲ? ಅವಕಾಶ ಸಿಕ್ಕಿದರೆ ಸಾಕು, ಗುಡಿಸಿ ಗುಂಡಾಂತರ ಮಾಡಿಬಿಡುವಂಥ ಕಳ್ಳರ ಕತೆಯನ್ನೂ ನೀವು ಬಲ್ಲಿರಿ. ಆದರೆ ಕಳ್ಳತನ ಮಾಡಿದ ನಂತರ ಕ್ಷಮಾಪಣೆ ಪತ್ರ ಬರೆದ ಕಳ್ಳರನ್ನೇನಾದರೂ ನೀವು ಕಂಡಿದ್ದೀರಾ? ಇಲ್ಲಿದೆ ನೋಡಿ ಅದಕ್ಕೆ ಸ್ಯಾಂಪಲ್. ಇದು ವರದಿಯಾಗಿರುವುದು ಬ್ರಿಟನ್​ನಿಂದ. ವಿದ್ಯಾರ್ಥಿಗಳು ನೆಲೆಸಿದ್ದ ಫ್ಲ್ಯಾಟ್ ಒಂದಕ್ಕೆ ನುಗ್ಗಿದ ಕಳ್ಳನೊಬ್ಬ ಅವರಲ್ಲೊಬ್ಬರ ಲ್ಯಾಪ್​ಟಾಪ್ ಅನ್ನು ಎಗರಿಸಿಕೊಂಡು ಪರಾರಿಯಾದ. ತರುವಾಯದಲ್ಲಿ ಆ ವಿದ್ಯಾರ್ಥಿಗೊಂದು ಇ-ಮೇಲ್ ಬಂತು. ಅದನ್ನು ಕಳಿಸಿದ್ದಾತ ಆ ಕಳ್ಳನೇ. ಅದರ ಒಕ್ಕಣೆ ಹೀಗಿತ್ತು- ‘ನಿನ್ನ ಲ್ಯಾಪ್​ಟಾಪ್ ಅನ್ನು ನಾನು ಕದಿಯಬೇಕಾಗಿ ಬಂದಿದ್ದಕ್ಕೆ ವ್ಯಥೆಯಾಗುತ್ತಿದೆ; ಆದ್ರೇನು ಮಾಡಲಿ, ನಾನು ತುಂಬ ಬಡವ, ಖರ್ಚಿಗೆ ಹಣ ಬೇಕಿತ್ತು. ಆದರೆ ನಿನ್ನ ಫೋನು ಮತ್ತು ಪರ್ಸನ್ನು ಕದಿಯದೆ ಅಲ್ಲೇ ಇಟ್ಟು ಬಂದಿದ್ದೇನೆ. ನೀನು ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ಅಂದ್ಕೊಂಡಿದ್ದೀನಿ..’.

ಇಷ್ಟಕ್ಕೇ ಸುಮ್ಮನಾಗದ ಕಳ್ಳ, ಸದರಿ ಲ್ಯಾಪ್​ಟಾಪ್​ನಲ್ಲಿರಬಹುದಾದ ಅಸೈನ್​ವೆುಂಟ್​ಗಳು ಅಥವಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಬರಹಗಳನ್ನು ಆ ವಿದ್ಯಾರ್ಥಿಗೆ ಫಾರ್ವರ್ಡ್ ಮಾಡುವುದಾಗಿಯೂ ತಿಳಿಸಿದ್ದಾನಂತೆ! ಅಬ್ಬಾ! ಎಂತೆಂಥಾ ಜನರಿದ್ದಾರಲ್ವಾ ಈ ಪ್ರಪಂಚದಲ್ಲಿ?