ಕರುಣ್ ಶತಕಕ್ಕೆ ಮಣಿದ ತಮಿಳುನಾಡು

ವಿಜಯನಗರಂ: ಟೂರ್ನಿ ಇತಿಹಾಸ ದಲ್ಲಿಯೇ 4ನೇ ಅತಿ ವೇಗದ ಶತಕ ದಾಖಲಿ ಸಿದ ಕರುಣ್ ನಾಯರ್ (111 ರನ್, 52 ಎಸೆತ, 8 ಬೌಂಡರಿ, 8 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಹಾಗೂ ಪ್ರವೀಣ್ ದುಬೇ (19 ಕ್ಕೆ 4) ಮಿಂಚಿನ ದಾಳಿಯ ನೆರವಿನಿಂದ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ದಕ್ಷಿಣ ವಲಯದಲ್ಲಿ ಸತತ 2ನೇ ಜಯ ದಾಖಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 78ರನ್​ಗಳಿಂದ ತಮಿಳುನಾಡು ತಂಡವನ್ನು ಸೋಲಿಸಿತು. ಈ ಗೆಲುವಿನಿಂದ ಲೀಗ್ ಹಂತದಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಜಯ ಹಾಗೂ 1 ಸೋಲು ಕಂಡಿರುವ ಕರ್ನಾಟಕ ತಂಡ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಸತತ 2ನೇ ಬಾರಿಗೆ ದಕ್ಷಿಣ ವಲಯ ಚಾಂಪಿಯನ್ ಆಗುವ ಸನಿಹದಲ್ಲಿದೆ. ಜತೆಗೆ ಅಖಿಲ ಭಾರತ ಮಟ್ಟದ ನಾಕೌಟ್ ಟೂರ್ನಿಗೆ ರಾಜ್ಯ ತಂಡದ ಪ್ರವೇಶ ಬಹುತೇಕ ಖಚಿತಗೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ, ಆರಂಭಿಕ ವೈಫಲದ ನಡುವೆಯೂ ಕರುಣ್ ನಾಯರ್ ಏಕಾಂಗಿ ಹೋರಾಟದ ಫಲವಾಗಿ 9 ವಿಕೆಟ್​ಗೆ 179 ರನ್​ಗಳಿಸಿತು. ಪ್ರತಿಯಾಗಿ ತಮಿಳುನಾಡು ತಂಡ, ಕೆ.ಗೌತಮ್ (14ಕ್ಕೆ 2) ಹಾಗೂ ಪ್ರವೀಣ್ ದುಬೇ ಮಾರಕ ದಾಳಿಗೆ ನಲುಗಿ 16.3 ಓವರ್​ಗಳಲ್ಲಿ 101 ರನ್​ಗಳಿಸಲಷ್ಟೆ ಶಕ್ತವಾಯಿತು. ಕರ್ನಾಟಕ ತಂಡ ಭಾನುವಾರ ಅಂತಿಮ ಲೀಗ್ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದೆ.

ಕರ್ನಾಟಕ: 9 ವಿಕೆಟ್​ಗೆ 179 (ಕರುಣ್ ನಾಯರ್ 111, ಸಮರ್ಥ್ 19, ಮಯಾಂಕ್ 13, ಪಾಂಡೆ 7, ಡೇವಿಡ್​ಸನ್ 30ಕ್ಕೆ 5), ತಮಿಳುನಾಡು: 16.3 ಓವರ್​ಗಳಲ್ಲಿ 101 (ವಾಷಿಂಗ್ಟನ್ ಸುಂದರ್ 34, ವಿಜಯ್ ಶಂಕರ್ 20, ಸಂಜಯ್ 19, ಪ್ರವೀಣ್ ದುಬೇ 19ಕ್ಕೆ 4, ಕೆ.ಗೌತಮ್ 14ಕ್ಕೆ 2, ಎಸ್.ಅರವಿಂದ್ 4ಕ್ಕೆ 1, ಸ್ಟುವರ್ಟ್ ಬಿನ್ನಿ 18ಕ್ಕೆ 1). -ಏಜೆನ್ಸೀಸ್

ಕರುಣ್ ನಾಯರ್ 48 ಎಸೆತಗಳಲ್ಲಿ ಟೂರ್ನಿಯಲ್ಲಿ 4ನೇ ಅತಿವೇಗದ ಶತಕ ಬಾರಿಸಿದರು. 43 ಎಸೆತಗಳಲ್ಲಿ ಮನ್​ಪ್ರೀತ್ ಜುನೇಜಾ ಶತಕ ಗಳಿಸಿರುವುದು ಟೂರ್ನಿಯ ದಾಖಲೆ. ರೋಹಿತ್ ಶರ್ಮ (45ಎಸೆತ) ಹಾಗೂ ದೀಪಕ್ ಹೂಡಾ (46) ನಂತರದ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಪರ ಅತಿ ಹೆಚ್ಚು ರನ್​ಗಳಿಸಿದವರ ಪೈಕಿ ಮಯಾಂಕ್ ಅಗರ್ವಾಲ್ ದಾಖಲೆಯನ್ನು ಕರುಣ್ ಸರಿಗಟ್ಟಿದ್ದರು.

Leave a Reply

Your email address will not be published. Required fields are marked *