ಕರಾವಳಿ ಪ್ಯಾಕೇಜ್ ಮಲೆನಾಡಿಗೂ ವಿಸ್ತರಣೆ

ಶಿರಸಿ:ಭತ್ತ ಬೆಳೆಗೆ ಪ್ರತಿ ಹೆಕ್ಟೇರ್​ಗೆ 7500 ರೂ. ನೀಡಲಾಗುವ ಕರಾವಳಿ ಪ್ಯಾಕೇಜ್ ಅನ್ನು ಮಲೆನಾಡಿನ ಬೆಳೆಗಾರರಿಗೂ ವಿಸ್ತರಿಸುವ ಪ್ರಸ್ತಾವನೆ ಸಿದ್ಧಪಡಿಸಲಿದ್ದೇವೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಹಾಯಧನದಲ್ಲಿ ನೀಡಲಾಗುವ ಯಂತ್ರೋಪಕರಣಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು. ಮಲೆನಾಡಿನಲ್ಲಿ ಸಣ್ಣ ಹಿಡುವಳಿದಾರ ರೈತರ ಸಂಖ್ಯೆ ಅಧಿಕವಾಗಿದೆ. ಅವರನ್ನೂ ನಾವು ಈ ಯೋಜನೆಗೆ ಪರಿಗಣಿಸಬೇಕಾಗಿದೆ. ಕೃಷಿ ಇಲಾಖೆಗೆ ತಲೆ, ಕಾಲು, ಬಾಲ ಬೇರೆ ಬೇರೆ ಕಡೆ ಎಂಬಂತಹ ಸ್ಥಿತಿ ಇದ್ದು, ಪ್ರತಿಯೊಂದಕ್ಕೂ ಇನ್ನೊಂದು ಇಲಾಖೆಯನ್ನು ಅವಲಂಬಿಸುವಂತಾಗಿದೆ. ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಯೋಗ್ಯ ದರದ ಕುರಿತಂತೆ ಸಹಕಾರಿ ಸಚಿವರ ಜೊತೆ ರ್ಚಚಿಸಲಿದ್ದೇನೆ ಎಂದರು.

ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಜಾನ್ ಡೀರ್ ಕಂಪನಿ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಸಣ್ಣ ಹಿಡುವಳಿದಾರರಿಗೂ ಪ್ರಯೋಜನವಾಗುವ ಮಾದರಿಯ ಸಣ್ಣ ಯಂತ್ರಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ವೈ. ಶ್ರೀನಿವಾಸ ಮಾತನಾಡಿ,‘ರಾಜ್ಯಾದ್ಯಂತ ಸಂಚರಿಸಿ ರೈತರ ಕುಂದು ಕೊರತೆಗಳನ್ನು ಪಟ್ಟಿ ಮಾಡುತ್ತಿದ್ದೇವೆ. ಸೂಕ್ತ ಸಲಹೆಗಳನ್ನು ಳವಿಡಿಸಿಕೊಂಡು ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಿದ್ದೇವೆ’ ಎಂದರು.

ಜಿಲ್ಲಾ ಕೃಷಿಕ ಸಮಾಜದ ಪ್ರಮುಖ ಎಸ್.ಎನ್. ಭಟ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ತಾಲೂಕು ಅಧಿಕಾರಿಗಳಾದ ನಟರಾಜ್, ಶಂಕರ ಹೆಗಡೆ, ಎ.ವಿ. ಪಾಟೀಲ ಇತರರಿದ್ದರು.

ತಾಸಿಗೂ ಅಧಿಕ ಕಾದ ರೈತರು: ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ರೈತರು ಬೆಳಗ್ಗೆ 9 ಗಂಟೆಗೇ ಇಲ್ಲಿದ್ದು ಸಚಿವರನ್ನು ಕಾಯತೊಡಗಿದ್ದರು.

ಆದರೆ, ಕಾರ್ಯಕ್ರಮದ ಪಟ್ಟಿ ಬದಲಾವಣೆಗೊಂಡು ಸೋಂದಾ ಕ್ರಾಸ್ ಬಳಿಯ ಸಂಸ್ಕರಣಾ ಘಟಕ ವೀಕ್ಷಣೆ, ಹುಲೇಕಲ್ ಕೃಷಿ ಹೊಂಡ ವೀಕ್ಷಣೆಗೆ ಸಚಿವರನ್ನು ಕರೆದೊಯ್ಯಲಾಗಿತ್ತು. 11.15ರ ಸುಮಾರಿನಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಚಿವರು ಆಗಮಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಕೆಲ ರೈತರು‘ ನಿಮ್ಮ ನಿರೀಕ್ಷೆಯಲ್ಲಿ ಎರಡು ತಾಸುಗಳ ಕಾಲ ಕಾಯುವಂತಾಯಿತು. ಈ ದಿನಗಳಲ್ಲಿ ನಮಗೆ ಸಮಯ ಅತ್ಯಮೂಲ್ಯವಾಗಿದೆ’ ಎಂದು ಬಹಿರಂಗವಾಗಿ ಆಕ್ಷೇಪಿಸಿದರು.

Leave a Reply

Your email address will not be published. Required fields are marked *