ಕರಾವಳಿ ಉತ್ಸವಕ್ಕೆ ಕ್ಷಣಗಣನೆ

ಕಾರವಾರ: ನಗರದ ಕಡಲ ತಡಿಯಲ್ಲಿ ಮೂರು ದಿನಗಳ ಸಂಭ್ರಮದ ಕರಾವಳಿ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡಿ. 8ರಿಂದ 10ರವರೆಗೆ ಉತ್ಸವ ನಡೆಯಲಿದ್ದು, ಜಿಲ್ಲಾಡಳಿತ ಬರದ ಸಿದ್ಧತೆ ನಡೆಸಿದೆ. ಆಮಂತ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಗೊಂಡಿದೆ.

ಟ್ಯಾಗೋರ್ ಕಡಲ ತೀರದ ಪ್ರಧಾನ ವೇದಿಕೆಯನ್ನು ಈ ಬಾರಿ ರಾಕ್ ಗಾರ್ಡನ್ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ವೇದಿಕೆಯ ಪ್ರವೇಶ ದ್ವಾರದಲ್ಲಿ ಬೃಹತ್ ಶಿವನ ಮೂರ್ತಿ ಸ್ಥಾಪಿಸಲಾಗಿದೆ. 2 ಸಾವಿರ ಆಸನಗಳನ್ನು ವಿವಿಐಪಿಗಳಿಗಾಗಿ, 3 ಸಾವಿರ ಆಸನಗಳನ್ನು ಕುಟುಂಬದವರಿಗಾಗಿ ಹಾಗೂ ಉಳಿದ 5 ಸಾವಿರ ಆಸನಗಳನ್ನು ಸಾರ್ವಜನಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾಕಷ್ಟು ಎಲ್​ಇಡಿ ಟಿವಿ ವ್ಯವಸ್ಥೆ ಮಾಡಲಾಗಿದೆ.

ಹಸೆ ಚಿತ್ತಾರ:

ಸಾಗರದ ಬಂದಗದ್ದೆ ರಾಧಾಕೃಷ್ಣ ನೇತೃತ್ವದ ತಂಡವು ವಿದ್ಯಾರ್ಥಿಗಳಿಗೆ ಹಸೆ ಹಾಗೂ ವರ್ಲಿ ಚಿತ್ರಗಳನ್ನು ಬಿಡಿಸುವ ತರಬೇತಿ ನೀಡಿತು. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿಯ ಕಾಂಪೌಂಡ್ ಮೇಲೆ ಅಂದವಾದ ಚಿತ್ತಾರಗಳನ್ನು ಬಿಡಿಸಲಾಗಿದೆ.ದೇಶಪಾಂಡೆ ಉದ್ಘಾಟನೆ: ಉತ್ಸವಕ್ಕೆ ಡಿ. 8 ರಂದು ಸಂಜೆ 7.30ಕ್ಕೆ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಪಾಲ್ಗೊಳ್ಳುವರು. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಜಿಲ್ಲಾ ರಂಗಮಂದಿರದಲ್ಲಿ ಡಿ.8ರಂದು ಬೆಳಗ್ಗೆ 10 ಗಂಟೆಯಿಂದ ಕಿನ್ನರ ಬ್ರಹ್ಮದೇವ ಗುಮಟೆಪಾಂಗ್ ತಂಡದಿಂದ ವಾದ್ಯ ಸಂಗೀತ, ಫಸ್ಟ್ ಸ್ಟೆಪ್ ಡಾನ್ಸ್ ತಂಡದಿಂದ ನೃತ್ಯ, ಸಪ್ತಸ್ವರ ಸೇವಾ ಸಮಿತಿಯಿಂದ ಯಕ್ಷಗಾನ, ಯಲ್ಲಾಪುರದ ಕೃಪಾ ಹೆಗಡೆ ತಂಡದಿಂದ ಭರತನಾಟ್ಯ, ವೈಷ್ಣವಿರಾವ್ ತಂಡದಿಂದ ಕುಚಿಪುಡಿ, ಮೀನಾಕ್ಷಿ ಪಾಟೀಲ್ ತಂಡದಿಂದ ಸುಗಮ ಸಂಗೀತ, ಕುಮಟಾ ಧನಶ್ರೀ ಪೈ ತಂಡದಿಂದ ವೀರಗಾಸೆ, ಶ್ರೀರಸ್ತು ನೃತ್ಯ ಶಾಲೆಯಿಂದ ಭರತನಾಟ್ಯ, ಹಳಿಯಾಳ ಹೊಂಗಿರಣ ತಂಡದಿಂದ ಗೊಂಬೆಯಾಟ ನಡೆಯಲಿದೆ. ಮಯೂರವರ್ಮ ವೇದಿಕೆಯಲ್ಲಿ ಸಂಜೆ 5.30ರಿಂದ ಅಂಧ ಕಲಾವಿದ ಅನಿಲ ನಾಯ್ಕ ತಂಡದಿಂದ, ಮಂಜುಳಾ ಹುಣ್ಸಗೇರಿ ತಂಡದಿಂದ ಸಂಗೀತ ಕಾರ್ಯಕ್ರಮ, ಶಿರಸಿ ಸ್ಮಾರ್ಟ್ ಗ್ರುಪ್​ನಿಂದ, ಹೊನ್ನಾವರ ಇನ್ಪಿನಿಟಿ ಗ್ರುಪ್​ನಿಂದ ನೃತ್ಯ. ನಾಗೇಂದ್ರ ಕುಮಟಾ ತಂಡದಿಂದ ಭಾವಗೀತೆಗಳು, ಬೆಂಗಳೂರಿನ ಸಂಧ್ಯಾ ಹಾಗೂ ಗ್ರುಪ್​ನಿಂದ ಮೋಹಿನಿಅಟ್ಟಂ, ಪ್ರಭಾತ ಕಲಾವಿದರಿಂದ ಕರುನಾಡ ವೈಭವ, ಓಷನ್ ಹಾರ್ಟ್ ಬ್ರೇಕರ್ಸ್ ತಂಡದಿಂದ, ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಮಾಧವ ಎಸ್.ನಾಯ್ಕ ಅವರ ನೃತ್ಯ ಕಾರ್ಯಕ್ರಮ. ರಾತ್ರಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಅಭಿಜಿತ್ ಸಾವಂತ ತಂಡದಿಂದ ರಸಮಂಜರಿ ನಡೆಯಲಿದೆ.

ಡಿ.9ರಂದು ರಂಗಮಂದಿರದಲ್ಲಿ ಸಿದ್ದಾಪುರದ ಮಹಾಗಣಪತಿ ಡೊಳ್ಳಿನ ಸಂಘದಿಂದ ಡೊಳ್ಳು ಕುಣಿತ. ಕಾರವಾರ ಸ್ವರ ಗಂಧರ್ವ ಸಂಗೀತ ಶಾಲೆಯ ಸಂಗೀತ, ಅಂಕೋಲಾ ಎನ್.ಜಿ.ವಾರಿಧಿ ತಂಡದಿಂದ ಜಾನಪದ ನೃತ್ಯ, ಡಾ.ಹುಲಿಕಲ್ ನಟರಾಜ್ ಅವರಿಂದ ಪವಾಡ ಮತ್ತು ವೈಜ್ಞಾನಿಕ ಸತ್ಯ ಕಾರ್ಯಕ್ರಮ. ಮುಂಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಜಾನಪದ ನೃತ್ಯ, ಹೊನ್ನಾವರದ ಭುವನೇಶ್ವರಿ ನುಡಿಯಿಂದ ಸಂಗೀತ ಕಾರ್ಯಕ್ರಮ, ಶಿರಸಿ ಮಂಜುನಾಥ ಶೆಟ್ಟಿ ಅವರಿಂದ ಮಿಮಿಕ್ರಿ, ಆಶಾನಿಕೇತನ ಮಕ್ಕಳಿಂದ ನೃತ್ಯ, ಬೆಳಗಾವಿಯ ಸಿದ್ದು ಮುಟೆ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಯೂರವರ್ಮ ವೇದಿಕೆಯಲ್ಲಿ ಸಂಜೆ 5.30 ರಿಂದ ಜುಲಿಯಾನಾ ಫರ್ನಾಂಡಿಸ್ ತಂಡದಿಂದ ಡುಮಾಮಿ ನೃತ್ಯ, ಹಳಿಯಾಳ ಶ್ರೀದುರ್ಗಾ ನೃತ್ಯ ತಂಡದಿಂದ ನೃತ್ಯ, ಶಿರಸಿ ಲಕ್ಷ್ಮೀ ಹೆಗಡೆ ಅವರ ಹಿಂದುಸ್ತಾನಿ ಸಂಗೀತ, ಕುಮಟಾ ರೋಟರಿ ನಾದಶ್ರೀ ತಂಡದ ಸಂಗೀತ, ರಿದಂ ಹಾರ್ಟ್ ಗ್ರುಪ್​ನಿಂದ ನೃತ್ಯ ಕಾರ್ಯಕ್ರಮ, ಜಿಲ್ಲಾ ಪೊಲೀಸ್ ಬ್ಯಾಂಡ್ ಪ್ರದರ್ಶನ, ಹುಬ್ಬಳ್ಳಿ ಸುಜಾತಾ ರಾಜಗೋಪಾಲ ತಂಡದಿಂದ ಭರತನಾಟ್ಯ, ಸಂಕೇತ ಗಾಂವಕರ್ ಅವರಿಂದ ಪಾಶ್ಚಾತ್ಯ ನೃತ್ಯ, ಅಪೇಕ್ಷಾ ಸುರೇಶ್ ಅವರಿಂದ ನೃತ್ಯ ಕಾರ್ಯಕ್ರಮ, ಡಾ.ರಾಜ್ ಕನ್ನಡಾಭಿಮಾನಿ ಸಂಘದಿಂದ ಜಾನಪದ ಸಂಗೀತ, ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ನೃತ್ಯ, ಮುಂಬೈನ ಎಂಜೆ5 ತಂಡದಿಂದ ಫ್ಯೂಜನ್ ಡಾನ್ಸ್, ಸ್ಯಾಂಡಲ್​ವುಡ್ ಗಾಯಕ ರಘು ದೀಕ್ಷಿತ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ. ಡಿಸೆಂಬರ್ 10 ರಂದು ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10 ರಿಂದ ಭಟ್ಕಳ ಥಾಮಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಜಾನಪದ ನೃತ್ಯ, ಅನುರಾಧಾ ಹೆಗಡೆ ತಂಡದಿಂದ ಭರತನಾಟ್ಯ, ಮಾಲತಿ ಹೊಳ್ಳ ಅವರ ಭಾಷಣ, ಪ್ರತಿಭಾ ಹೆಗಡೆ ಬೆಂಗಳೂರು ಅವರ ಸಂಗೀತ ಕಾರ್ಯಕ್ರಮ, ಕರಾವಳಿ ಡಾನ್ಸ್ ಗ್ರುಪ್​ನಿಂದ ನೃತ್ಯ ಕಾರ್ಯಕ್ರಮ, ಯಲ್ಲಾಪುರದ ಶ್ರೀಗುರು ಕಲಾವಿದರ ವೇದಿಕೆಯಿಂದ ಜಾನಪದ ಸಂಗೀತ ಕಾರ್ಯಕ್ರಮ.

ಮಯೂರವರ್ಮ ವೇದಿಕೆಯಲ್ಲಿ ಸಂಜೆ.5.30 ರಿಂದ ಸ್ವರ ಸಂಗೀತ ಮೆಲೋಡಿಸ್ ತಂಡದಿಂದ ಆರ್ಕೆಸ್ಟ್ರಾ, ಅಂಕೋಲಾ ಫೈರ್ ಇಂಡಿಯಾ ಡಾನ್ಸ್ ಗ್ರುಪ್, ಕಾರವಾರದ ಪ್ರಿಯದರ್ಶಿನಿ ತಂಡ, ಕೋಸ್ಟಲ್ ರಾಕರ್ಸ್ ತಂಡದಿಂದ ನೃತ್ಯ. ಡಾ. ಭರತ್, ಸೃಜನ್ ಕಾಮತ್, ಪೂರ್ವಿ ಕಾಮತ್ ತಂಡದಿಂದ ಸಂಗೀತ ಕಾರ್ಯಕ್ರಮ, ಗುಡ್ಡಪ್ಪ ಜೋಗಿ ತಂಡದಿಂದ ಜಾನಪದ ಗಾಯನ, ಶ್ರೀರಕ್ಷಾ ತಂಡದಿಂದ ಸಂಗೀತ ಕಾರ್ಯಕ್ರಮ. ನೇವಿ ಬ್ಯಾಂಡ್ ಪ್ರದರ್ಶನ. ಧಾರವಾಡದ ಡಾ. ಜಯದೇವಿ ಜಂಗಮಶೆಟ್ಟಿ ತಂಡದಿಂದ ವಚನ ಸೂಫಿ ಗಾಯನ, ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ನೃತ್ಯ, ಚಿತ್ರ ನಟ ವಿಕ್ರಮ ಸೂರಿ ತಂಡದಿಂದ ನೃತ್ಯ. ಬಾಲಿವುಡ್ ಹಿನ್ನೆಲೆ ಗಾಯಕಿ ನೀತಿ ಮೋಹನ ತಂಡದಿಂದ ಹಿನ್ನೆಲೆ ಗಾಯನ ಪ್ರದರ್ಶನಗೊಳ್ಳಲಿದೆ.

ಹೆಲಿಕಾಪ್ಟರ್ ಸ್ಥಳ ಬದಲು

ಕರಾವಳಿ ಉತ್ಸವದ ಅಂಗವಾಗಿ ಹುಬ್ಬಳ್ಳಿ ಹೆಲಿ ಟೂರಿಸಂ ನಡೆಸುತ್ತಿರುವ ಹೆಲಿಕಾಪ್ಟರ್ ರೈಡ್​ನ ಸ್ಥಳ ಬದಲಾಯಿಸಲಾಗಿದೆ. ಮೊದಲು ಶಿವಾಜಿ ಕಾಲೇಜ್ ಮೈದಾನದಿಂದ ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಬಾಂಡಿಶಿಟ್ಟಾದಲ್ಲಿ ಹೆಸ್ಕಾಂ ಕಚೇರಿ ಎದುರಿನ ಖಾಲಿ ಸ್ಥಳದಲ್ಲಿ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಭದ್ರತೆಯ ಪರಿಶೀಲನೆ ನಡೆಸಿದ್ದಾರೆ.