ಕರಾವಳಿಗರ ಕತಾರ್ ಉದ್ಯೋಗಕ್ಕೂ ಕುತ್ತು?

ಮಂಗಳೂರು/ಉಡುಪಿ: ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಯೆಮನ್, ಲಿಬಿಯಾ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳು ಕತಾರ್​ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಪರಿಣಾಮ ಕತಾರ್​ನಲ್ಲಿ ಉದ್ಯೋಗ, ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಕರ್ನಾಟಕದ ಮಂದಿ ಆತಂಕದಲ್ಲಿದ್ದಾರೆ.

ಸಮೃದ್ಧ ತೈಲೋತ್ಪನ್ನ ದಾಸ್ತಾನು ಇರುವ ಶ್ರೀಮಂತ ದೇಶ ಕತಾರ್​ಗೆ ಶೇ.70ರಿಂದ 80ರಷ್ಟು ಆಹಾರ ಉತ್ಪನ್ನಗಳು ದುಬೈ ಹಾಗೂ ಸೌದಿ ಅರೇಬಿಯಾ ಮೂಲಕವೇ ತಲುಪುತ್ತವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಂಬಂಧ ಕಡಿತಗೊಳಿಸಿರುವ ರಾಷ್ಟ್ರಗಳು ವಾಯು, ಜಲ ಹಾಗೂ ಭೂಮಾರ್ಗ ಮೂಲಕ ನಡೆಸುವ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿವೆ.

ಕತಾರ್​ನಲ್ಲಿ ಉಡುಪಿ, ದ.ಕ. ಜಿಲ್ಲೆಯ ಸಾವಿರಾರು ಮಂದಿ ಉನ್ನತ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಸಮಸ್ಯೆಗಳೇನು ಸೃಷ್ಟಿಯಾಗಿಲ್ಲ ಎಂದು ಕತಾರ್​ನಲ್ಲಿರುವ ಕರಾವಳಿಯವರು ಹೇಳುತ್ತಾರಾದರೂ, ಮುಂದೇನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ರಾಜತಾಂತ್ರಿಕ ಬಿಕ್ಕಟ್ಟು ಶೀಘ್ರ ಬಗೆಹರಿಯುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಕರಾವಳಿ ಸಹಿತ ರಾಜ್ಯದ ಸಾವಿರಾರು ಕುಟುಂಬಗಳು ಆಶ್ರಯಿಸಿರುವ ಉದ್ಯೋಗಕ್ಕೂ ಕುತ್ತು ಬರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಈಗ ಹೇಗಿದೆ ಪರಿಸ್ಥಿತಿ?

ಮುಂದಿನ ದಿನಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎನ್ನುವ ಆತಂಕದಲ್ಲಿ ಜನರು ಮಾಲ್​ಗಳಿಗೆ ತೆರಳಿ ಆಹಾರ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ರಂಜಾನ್ ಉಪವಾಸ ಸಮಯದಲ್ಲೂ ಸೂಪರ್ ಮಾರ್ಕೆಟ್, ಮಾಲ್​ಗಳಲ್ಲಿ ಜನ ಕ್ಯೂ ನಿಂತು ಆಹಾರ ಸಾಮಗ್ರಿ ಖರೀದಿಸುತ್ತಿದ್ದಾರೆ. ‘‘ಯಾವಾಗ ಆಹಾರ ಸಮಸ್ಯೆ ಕಾಡುತ್ತದೆಯೇ ಎನ್ನುವ ಆತಂಕ ಜನರಲ್ಲಿ ಹೆಚ್ಚಿದೆ’’ ಎನ್ನುತ್ತಾರೆ ಕತಾರ್​ನ ಕಂಪನಿಯೊಂದರಲ್ಲಿ ತಂತ್ರಜ್ಞರಾಗಿರುವ ಧರ್ಮಸ್ಥಳ ಸಮೀಪದ ಅರಸಿನಮಕ್ಕಿಯ ಗುರುರಾಜ್. ‘‘ಕತಾರ್​ನ ಮಾರುಕಟ್ಟೆಗಳಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಮಾರುಕಟ್ಟೆಯಲ್ಲಿ ಅಗತ್ಯ ಆಹಾರ ಸಾಮಗ್ರಿ ದೊರೆಯುತ್ತಿದೆೆ’’ ಎಂದು ಕತಾರ್ ರಾಜಧಾನಿ ದೋಹಾದಲ್ಲಿ ಉದ್ಯೋಗಿಯಾಗಿರುವ ಸಂತೋಷ್ ಕುಮಾರ್ ಇರಾ ದೂರವಾಣಿ ಮೂಲಕ ತಿಳಿಸಿದ್ದಾರೆ.

ಉದ್ಯೋಗ ಕಡಿತ ಭೀತಿ: ಬಿಕ್ಕಟ್ಟು ಹೆಚ್ಚು ಸಮಯ ಮುಂದುವರಿಯದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಕತಾರ್ ಮೇಲೆ ಕೆಲ ಕೊಲ್ಲಿ ರಾಷ್ಟ್ರಗಳು ನಿರ್ಬಂಧ ಹೇರಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿರುವುದು ಕೆಲವರಲ್ಲಿ ಆತಂಕ ಸೃಷ್ಟಿಸಿದೆ. ಕತಾರ್​ನ ಅನೇಕ ಕಂಪನಿಗಳಿಗೆ ವಿದೇಶಗಳಿಂದ ಕಚ್ಚಾವಸ್ತುಗಳು ಪೂರೈಕೆಯಾಗುತ್ತವೆ. ಬಿಕ್ಕಟ್ಟು ಮುಂದುವರಿದರೆ ಕಂಪನಿಗಳ ನಿರ್ವಹಣೆ ಕಷ್ಟವಾಗಬಹುದು. ಆಗ ಸಹಜವಾಗಿಯೇ ಕತಾರ್​ನಲ್ಲಿ ನೆಲೆಸಿರುವ ಭಾರತೀಯರು ಸಹಿತ ವಿದೇಶಿಯರ ನೌಕರಿಗೂ ಗಂಡಾಂತರ ಎದುರಾಗಬಹುದು ಎಂದು ದೋಹಾದಲ್ಲಿ ವಿನ್ಯಾಸಗಾರರಾಗಿರುವ ನವೀನ್ ಬಂಟ್ವಾಳ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಸಮಸ್ಯೆಗಳಿಲ್ಲ: ಸೌದಿಯ ಹಲವು ರಾಷ್ಟ್ರಗಳು ಕತಾರ್​ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಪರಿಣಾಮ ಸದ್ಯಕ್ಕೆ ಉದ್ಯೋಗ ಕಡಿತವಾಗದು. ಭಾರತೀಯ ಮೂಲದ ಉದ್ಯೋಗಿಗಳಿಗೂ ಸದ್ಯ ಕೆಲಸ ಕಳೆದುಕೊಳ್ಳುವ ಭೀತಿ ಇಲ್ಲ ಎಂದು ಕತಾರ್ ತುಳುಕೂಟದ ಅಧ್ಯಕ್ಷ ವಿಟ್ಲ ಮುಡಂಬೈಲ್​ನ ಉದ್ಯಮಿ ರವಿ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ. ವಿಟ್ಲ ಮುಡಂಬೈಲ್​ನ ರವಿ ಶೆಟ್ಟಿ ಅವರು ಕುಟುಂಬ ಸಮೇತ ಕತಾರ್​ನಲ್ಲಿ 20 ವರ್ಷದಿಂದ ನೆಲೆಸಿದ್ದಾರೆ. ಇಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಗುತ್ತಿಗೆ ಉದ್ಯಮ ನಡೆಸುತ್ತಿರುವ ಅವರ ಬಳಿ 400ಕ್ಕೂ ಅಧಿಕ ಉದ್ಯೋಗಿಗಳಿದ್ದು, ಶೇ.60ರಷ್ಟು ಉಡುಪಿ, ಮಂಗಳೂರು ಸೇರಿದಂತೆ ದೇಶದ ಇತರೆ ಭಾಗದ ಯುವಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾಯುಮಾರ್ಗ ನಿರ್ಬಂಧ ಅಷ್ಟು ಪರಿಣಾಮ ಬೀರದು: ಸುತ್ತಲಿನ ಕೆಲವು ರಾಷ್ಟ್ರಗಳು ವಾಯುಮಾರ್ಗ ನಿರ್ಬಂಧಿಸಿದರೂ ಅದರ ಪರಿಣಾಮ ಅಷ್ಟಾಗಿ ತಟ್ಟದು. ಕಾರಣ, ಇದುವರೆಗೆ ಸೌದಿ, ಯುಎಇ ವಾಯುಪ್ರದೇಶದ ಮೂಲಕ ಕತಾರ್​ಗೆ ವಿಮಾನಗಳು ಹಾರಾಟ ನಡೆಸುತ್ತಿದ್ದವು. ನಿರ್ಬಂಧ ಹಿನ್ನೆಲೆಯಲ್ಲಿ ಮುಂದೆ ಇರಾನ್ ಮೂಲಕ ಪ್ರಯಾಣಿಸಲು ಅವಕಾಶವಿದೆ. ಸದ್ಯ ಮಂಗಳೂರಿನಿಂದ ಕತಾರ್​ಗೆ ವಾರಕ್ಕೆ ಮೂರು ವಿಮಾನಗಳು ಹಾರಾಟ ನಡೆಸುತ್ತಿವೆ. ಈಗಿನ ಪ್ರಯಾಣದ ಅವಧಿ ನಾಲ್ಕೂವರೆ ಗಂಟೆ, ಮುಂದೆ ಐದು ಗಂಟೆ ಬೇಕಾಗಬಹುದು ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

30 ಸಾವಿರ ಕನ್ನಡಿಗರು: ಕತಾರ್​ನಲ್ಲಿ 7 ಲಕ್ಷ ಭಾರತೀಯರಿದ್ದು, ಈ ಪೈಕಿ ಮೂರು ಲಕ್ಷದಷ್ಟು ಜನ ಕೇರಳೀಯರು. ಕರ್ನಾಟಕದ 30 ಸಾವಿರ ಜನರಿದ್ದು, ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಸಹಿತ ಕರ್ನಾಟಕದ ಕರಾವಳಿಯ 15 ಸಾವಿರ ಮಂದಿ ಇದ್ದಾರೆ.

 

ಕತಾರ್​ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಬಹುದು. ಕಬ್ಬಿಣ ಸೇರಿದಂತೆ ಬಹá-ತೇಕ ಕಟ್ಟಡ ಸಾಮಗ್ರಿಗಳು, ಸೌದಿಯಿಂದ ಆಮದಾಗುತ್ತದೆ. ಕಟ್ಟಡ ಕಾಮಗಾರಿಗಳು ನಿಂತರೆ, ಕಾರ್ವಿುಕ ವರ್ಗ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಭಾರತೀಯರಿಗೆ ಸಮಸ್ಯೆಯಾಗಬಹುದು. ಕತಾರ್ ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ.

| ರವಿ ಶೆಟ್ಟಿ ಉದ್ಯಮಿ, ಕತಾರ್ ತುಳುಕೂಟ ಅಧ್ಯಕ್ಷ

 

ತರಕಾರಿ ಹಾಗೂ ಹಾಲು ಪೂರೈಕೆಯಲ್ಲಿ ಆರಂಭದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿತ್ತು. ಭಾರತ ಸಹಿತ ಇತರ ರಾಷ್ಟ್ರಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪ್ರಯತ್ನ ಕತಾರ್​ನಲ್ಲಿ ನಡೆಯುತ್ತಿದೆ.

| ನಿತೇಶ್ ದೊಡ್ಡಣಗುಡ್ಡೆ ಕತಾರ್​ನ ಪತ್ರಕರ್ತ,ಸಂಯೋಜಕ, ತುಳುಕೂಟ, ಕತಾರ್

 

Leave a Reply

Your email address will not be published. Required fields are marked *