ಕೊಡೇಕಲ್: ಗ್ರಾಪಂಗಳಿಗೆ ಮಂಜೂರಾಗಿರುವ ವಸತಿ ಯೋಜನೆಯ ಮನೆಗಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳಲ್ಲಿ ಒಂದಾಗಿರುವ ಬಾಂಡ್(ಕರಾರು ಪತ್ರ)ಗಾಗಿ ಸೋಮವಾರ ಗ್ರಾಮದ ಕೊಡೇಕಲ್ ಬಸವೇಶ್ವರ ಪತ್ತಿನ ಸಹಕಾರ ಸಂಘದ ಎದುರು ನೂಕು ನುಗ್ಗಲು ಉಂಟಾಯಿತು.
ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿನ ಗ್ರಾಪಂಗಳಿಗೆ ವಸತಿ ಯೋಜನೆಯಲ್ಲಿ ಮನೆಗಳು ಮಂಜೂರಾಗಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಯೊಂದಿಗೆ 20 ರೂ. ಬೆಲೆಯ ಬಾಂಡ್(ಕರಾರುಪತ್ರ)ವು ಅಗತ್ಯವಾದ ಕಾರಣ ಸೋಮವಾರ ಬೆಳಗ್ಗೆ ಕೊಡೇಕಲ್, ರಾಜನಕೋಳೂರ, ರಾಯನಪಾಳೆ, ಹಗರಟಗಿ, ಬೂದಿಹಾಳ ಸೇರಿ ಇನ್ನಿತರ ಗ್ರಾಮಗಳ ಜನರು ಬಾಂಡ್ ತೆಗೆದುಕೊಳ್ಳಲು ಸೇರಿದ್ದರು.
ನಿಯಮ ಮರೆತ ಜನ: ಕರೊನಾ ರೂಪಾಂತರಿ ಒಮಿಕ್ರಾನ್ ಈಗಾಗಲೆ ರಾಜ್ಯದಲ್ಲಿ ಹರಡುತ್ತಿದೆ. ಸರ್ಕಾರ ಮಾರ್ಗಸೂಚಿ ಪಾಲನೆ ಮಾಡಲು ಹೇಳಿದೆ. ಆದರೆ ಬಾಂಡ್ ಪಡೆಯಲು ಜನತೆ ನಿಯಮ ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ ಇರುವುದನ್ನು ಕಂಡ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಕೆಂಡದ ಅವರು ಕೆಲ ಹೊತ್ತು ಬಾಗಿಲನ್ನು ಮುಚ್ಚಿ ಮಾಸ್ಕ್ ಧರಿಸುವಂತೆ ಮತ್ತು ಅಂತರ ಕಾಪಾಡುವಂತೆ ಜನರಿಗೆ ಮನವಿ ಮಾಡಿದರು. 20 ರೂ. ಮುಖಬೆಲೆಯ ಬಾಂಡ್ 300 (ಕರಾರು ಪತ್ರಗಳನ್ನು) ಈ ವೇಳೆ ನೀಡಲಾಯಿತು