ಕರಡಿ ದಾಳಿಗೆ ರೈತ ಬಲಿ

ಪಾವಗಡ: ಮಾನವ ಮತ್ತು ವನ್ಯ ಜೀವಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿದ್ದು ಸಾಸಲುಕುಂಟೆ ಗ್ರಾಮದಲ್ಲಿ ಶುಕ್ರವಾರ ಕರಡಿ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದಾರೆ. ಅವರನ್ನು ಕಾಪಾಡಲು ಬಂದ 11 ಮಂದಿಯನ್ನೂ ಕರಡಿ ಗಾಯಗೊಳಿಸಿದೆ. ಜೀವ ಭಯದಿಂದ ಆತ್ಮರಕ್ಷಣೆಗಾಗಿ ಗ್ರಾಮಸ್ಥರು ಬಡಿಗೆ, ದೊಣ್ಣೆಯಿಂದ ಹಲ್ಲೆ ಮಾಡಿ ಕರಡಿಯನ್ನು ಸಾಯಿಸಿದ್ದಾರೆ.

ಗ್ರಾಮದ ವೀರಾಂಜನೇಯ (45) ಮೃತ ರೈತ. ಅವರಿಗೆ ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಗುರುವಾರ ರಾತ್ರಿ ವೀರಾಂಜನೇಯ ಹಾಗೂ ಪತ್ನಿ ಅನ್ನಪೂರ್ಣಾ ಕಾವಲು ಕಾಯುತ್ತಿದ್ದರು. ಬೆಳಗಾಗುತ್ತಿದ್ದಂತೆ ಪತ್ನಿಯನ್ನು ಗ್ರಾಮಕ್ಕೆ ಕಳುಹಿಸಿದ ವೀರಾಂಜನೇಯ ನೀರು ಎತ್ತಲು ಹೋದಾಗ ಇದ್ದಕ್ಕಿದ್ದಂತೆ ಕರಡಿ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಮರ ಹತ್ತಿದರೂ ಬಿಡದ ಕರಡಿ ಮುಖ, ಎದೆಗೆ ಕಚ್ಚಿ ಕೊಂದಿದ್ದಲ್ಲದೆ ಸುಮಾರು 1 ಕಿ.ಮೀ. ದೂರದವರೆಗೂ ಶವವನ್ನು ಎಳೆದೊಯ್ದಿದೆ. ಸುದ್ದಿ ತಿಳಿದ ಗ್ರಾಮಸ್ಥರು ಕರಡಿಯಿಂದ ವೀರಾಂಜನೇಯರನ್ನು ಬಿಡಿಸಲು ಹೋದಾಗ ಅವರ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ.

ತೀವ್ರ ಗಾಯಗೊಂಡ ಶಿವಾರೆಡ್ಡಿ (66), ಗೋಪಾಲ್ ರೆಡ್ಡಿ (36)ಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ನರಸಿಂಹರೆಡ್ಡಿ (45), ಶಿವಪ್ಪ (30), ಯರ್ರಪ್ಪ (45), ಈರಪ್ಪ (45), ರಾಮಲಿಂಗ (40), ಮೋಹನ್​ರಾಜ್ (40), ಶಿವಲಿಂಗಪ್ಪ (35), ಶಶಾಂಕ್ ರೆಡ್ಡಿ (35) ಮತ್ತು ಮೂರ್ತಿ (35) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಮಲಿಂಗೇಗೌಡ, ಎಸಿಎಫ್, ನಾಗರಾಜು, ಪಾವಗಡ ವಲಯ ಅರಣ್ಯಾಧಿಕಾರಿ ಸುರೇಶ್, ತಾಪಂ ಸದಸ್ಯ ಸಣ್ಣಾರೆಡ್ಡಿ ಭೇಟಿ ನೀಡಿದ್ದರು.

ಬರಿಗೈಲಿ ಬಂದಿದ್ದ ಸಿಬ್ಬಂದಿ!: ಪಕ್ಕದ ಹೊಲಕ್ಕೆ ಹಾಕಿದ ಮುಳ್ಳಿನ ತಂತಿಯಲ್ಲಿ ಸಿಕ್ಕಿಕೊಂಡಿದ್ದ ಕರಡಿ ರೈತನನ್ನು ಕಂಡೊಡನೆ ತಪ್ಪಿಸಿಕೊಂಡು ಬಂದು ದಾಳಿ ಮಾಡಿದೆ. ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದ್ದು, 10 ಗಂಟೆವರೆಗೆ ಶವವನ್ನು ಎಳೆದು ತಿರುಗುತ್ತಿತ್ತು. ಈ ವೇಳೆ ಸುತ್ತಮತ್ತ ತೋಟದಲ್ಲಿದ್ದ ಜನ ಬೆದರಿಸಿದರೂ ಕರಡಿ ಶವ ಬಿಟ್ಟು ಹೋಗಿಲ್ಲ. ಬಳಿಕ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆಯನ್ನೂ ತಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಈ ನರಭಕ್ಷಕ ಕರಡಿಯಿಂದ ಬಚಾವಾಗಲು ಬಡಿಗೆ, ದೊಣ್ಣೆಯಿಂದ ಕರಡಿಯನ್ನು ಬಡಿದು ಸಾಯಿಸಿದ್ದಾರೆ.

ಸಚಿವ ಭೇಟಿ…: ಕಾರ್ವಿುಕ ಸಚಿವ ವೆಂಕಟರವಣಪ್ಪ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್ ಇದ್ದರು. ಅರಣ್ಯ ಇಲಾಖೆಯಿಂದ ಮೃತನ ಪತ್ನಿಗೆ 2 ಲಕ್ಷ ರೂ. ಸಹಾಯಧನ, ಗಾಯಾಳುಗಳಿಗೆ ತಲಾ 20 ಸಾವಿರ ರೂ. ವಿತರಿಸಲಾಗಿದೆ.