ಕಾರ್ಕಳ: ತಾಲೂಕಾದ್ಯಂತ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಬಹುತೇಕ ಕಡೆಗಳಲ್ಲಿ ಗುಡ್ಡ ಕುಸಿತ ಹಾಗೂ ಮನೆ ಹಾನಿಯಾಗಿದೆ.ನಂದಳಿಕೆ ಗ್ರಾಮದ ಕಕ್ಕೆಪದವು ನಿವಾಸಿ ಶುಭಾ ಆಚಾರ್ಯ ಎಂಬುವರ ಮನೆ ಒಂದು ಬದಿಯಲ್ಲಿ ಧರೆ ಕುಸಿಯುತ್ತಿದ್ದು ಅಪಾಯದ ಹಂತದಲ್ಲಿದೆ. ಮಿಯ್ಯರು ಗ್ರಾಮದ ರಾಮರ ಗುತ್ತು ನಾರಾಯಣ ಸೇರ್ವೆಗಾರ್ ಎಂಬುವರ ಭತ್ತದ ಗದ್ದೆಗೆ ನೆರೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಎರ್ಲಪಾಡಿ ಗ್ರಾಮದ ಬದ್ರುದ್ದೀನ್ ಮನೆಯ ಒಂದು ಭಾಗ ಬಿದ್ದು ಹಾನಿಯಾಗಿದೆ. ಸಾಣೂರು ಗ್ರಾಮದ ಕಡಬೆಟ್ಟು ರಸ್ತೆ ಅತಿಯಾದ ಮಳೆಯಿಂದ ಕುಸಿದಿದೆ. ವಾಹನ ಸಂಚಾರ ಕಷ್ಟಕರವಾಗಿದ್ದು ವಾಹನ ಸಂಚಾರ ನಿಷೇಧಿಸಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಹೆರ್ಮುಂಡೆ ಗ್ರಾಮದ ರುಕ್ಕು ಗೌಡ ಎಂಬುವರ ಮನೆ ಗೋಡೆ ಮಳೆಯಿಂದ ಭಾಗಶಃ ಬಿದ್ದು ಹಾನಿಯಾಗಿದೆ. ಬೈಲೂರು ಗ್ರಾಮದ ಬೆದ್ರಬೆಟ್ಟು ಕಿರು ಸೇತುವೆ ಬಿರುಕು ಬಿಟ್ಟಿದ್ದು ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ನರಸಪ್ಪ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕ ಸುಚಿತ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.