ಕಮ್ಯುನಿಸ್ಟ್ ಕಣ್ಣಿನ ಇತಿಹಾಸ ಅಪಾಯಕರ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವುದು ರಾಮಮಂದಿರ ಎಂಬುದು ಉತ್ಖನನದಿಂದ ಗೊತ್ತಾಗಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನವದೆಹಲಿಯ ಆಗಾಖಾನ್ ಸಾಂಸ್ಕೃತಿಕ ಟ್ರಸ್ಟ್ ಪ್ರಾಜೆಕ್ಟ್ ಆರ್ಖಿಯೋಲೋಜಿಕಲ್ ನಿರ್ದೇಶಕ ಕೆ.ಕೆ.ಮುಹಮ್ಮದ್ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ಕಲಾ ಕಾಲೇಜು ಸಹಯೋಗದಡಿ ಪೂಜ್ಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಮಾರಕಗಳ ಸಂರಕ್ಷಣೆಯತ್ತ ಸಮಗ್ರ ದೃಷ್ಟಿಕೋನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ರಾಜಕೀಯ ಕಾರಣಗಳಿಗಾಗಿ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ರಾಮಮಂದಿರ ಸ್ಥಳದಲ್ಲಿ ಬಾಬ್ರಿ ಮಸೀದಿಯ ಯಾವುದೇ ಕುರುಹು ಸಿಕ್ಕಿಲ್ಲ. ಮಂದಿರದ ಕುರುಹುಗಳು ಸಿಕ್ಕಿವೆ. ಇವು ಉತ್ಖನನದಲ್ಲಿ ಸಿಕ್ಕಿಲ್ಲ, ಎಲ್ಲಿಂದಲೋ ತಂದು ಹಾಕಲಾಗಿದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದರು. ಅವರ ಸಮಕ್ಷಮದಲ್ಲೇ ಉತ್ಖನನ ಮಾಡಿದಾಗ ಮೊದಲಿಗಿಂತ ಹೆಚ್ಚು ದೇವಸ್ಥಾನದ ಭಾಗಗಳು ಸಿಕ್ಕಿವೆ ಎಂದು ತಿಳಿಸಿದರು.

ಪ್ರಾಚೀನ ಪರಂಪರೆ ಸ್ಮಾರಕಗಳ ಕುರಿತು ಪೂರ್ವಗ್ರಹಪೀಡಿತರಾಗಿ ವ್ಯಾಖ್ಯಾನಿಸುವ ಕಮ್ಯುನಿಸ್ಟ್ ದೃಷ್ಟಿಕೋನದ ಇತಿಹಾಸದಿಂದ ದೇಶದ ನಿಜವಾದ ಅಂತಃಸತ್ವದ ಅರಿವು ಉಂಟಾಗುವುದಿಲ್ಲ. ಇತಿಹಾಸ ಕಟ್ಟುವುದು ನಿಂತಾಗ ಆರ್ಖಿಯಾಲೊಜಿ ಶುರುವಾಗುತ್ತದೆ. ಉಹಾಪೋಹದ ಇತಿಹಾಸ ರಚಿಸಿ ದಿಕ್ಕು ತಪ್ಪಿಸುವ ಬದಲು ಉತ್ಖನನ ಮಾಡಿ, ಸಾಕಾ್ಷೃಧಾರಗಳೊಂದಿಗೆ ಹೊರತೆಗೆದಾಗ ನಿಜವಾದ ಇತಿಹಾಸ ಗೊತ್ತಾಗುತ್ತದೆ ಎಂದು ಪ್ರತಿಪಾದಿಸಿದರು.

ಮಹ್ಮದ್ ಘಜನಿ, ಮಹ್ಮದ್ ಗೋರಿ ಆಡಳಿತಾವಧಿಯಲ್ಲಿ ಧ್ವಂಸಗೊಂಡ ನೂರಾರು ದೇವಸ್ಥಾನಗಳ ಸ್ಥಿತಿಯನ್ನು ಉತ್ಖನನ ಮಾಡಿದಾಗ ಅರಿವಿಗೆ ಬಂದಿದ್ದರೂ, ಇವುಗಳನ್ನು ಧ್ವಂಸಗೊಳಿಸಲಿಲ್ಲ. ಬದಲಿಗೆ ಕಾಲಾಂತರದಲ್ಲಿ ಹಾಳಾದವು ಎಂದು ಹೇಳುವ ಇತಿಹಾಸಕಾರರಿಂದ ಸತ್ಯಹೊರಬರಲು ಸಾಧ್ಯವಿಲ್ಲ ಎಂದರು.

ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲೇ 200ಕ್ಕೂ ಅಧಿಕ ದೇವಸ್ಥಾನಗಳನ್ನು ಹಾಳುಗೆಡವಿದ್ದರು. ಹಾಳಾದ ದೇಗುಲಗಳನ್ನೇ ಚಂಬಲ್ ಕಣಿವೆ ಡಕಾಯಿತರು ಆಶ್ರಯ ತಾಣ ಮಾಡಿಕೊಂಡಿದ್ದರು. ಡಕಾಯಿತರು ಇದ್ದುದರಿಂದ ಹೆಚ್ಚಿನ ಹಾನಿ ಮಾಡಲು ಯಾರಿಗೂ ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಒಬ್ಬ ಮಾಜಿ ಡಕಾಯಿತನಿಂದಾಗಿ ಈ ಹಾಳುಗೆಡವಿದ ದೇವಸ್ಥಾನಗಳ ಮಾಹಿತಿ ಸಿಕ್ಕಿತು. ಹೀಗಾಗಿ ಅಲ್ಲಿ ಉತ್ಖನನ ನಡೆಸಿದಾಗ 200ಕ್ಕೂ ಅಧಿಕ ದೇಗುಲಗಳು ನೆಲಸಮಗೊಂಡಿದ್ದನ್ನು ಪತ್ತೆ ಹಚ್ಚಲಾಯಿತು. ಅವುಗಳಲ್ಲಿ 50 ದೇವಸ್ಥಾನಗಳ ಮರು ನಿರ್ಮಾಣ ಮಾಡಲಾಯಿತು ಎಂದರು.

ಶರಣಬಸವ ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಭಾರತೀಯ ಇತಿಹಾಸ ಸಂಕಲನ ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಶ್ರೀನಿವಾಸರಾವ್ ಮುಖ್ಯ ಅತಿಥಿಯಾಗಿದ್ದರು. ಶರಣಬಸವೇಶ್ವರ ಕಲಾ ಕಾಲೇಜಿನ ಪ್ರಾಚಾರ್ಯ ಎನ್.ಎಸ್.ಪಾಟೀಲ್, ಪ್ರೊ.ಜಗದೇವಿ ಕಲಶೆಟ್ಟಿ, ಡಾ.ಸುರೇಶ ನಂದಗಾಂವ, ಡಾ.ಶಾಂತಾ ನಿಷ್ಠಿ, ಪ್ರೊ.ರೇಣುಕಾ ಕೆ., ಡಾ.ಶಿವರಾಜ ಶಾಸ್ತ್ರಿ, ಡೊಣ್ಣೇಗೌಡರ, ಡಾ.ಶ್ರೀಶೈಲ ಬಿರಾದಾರ ಇತರರಿದ್ದರು.

ಗುಡಿ ಜನರ ಜೀವನಾಡಿ

ಗುಡಿಗಳು ಜನರ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತವೆ ಎಂದು ಮೈಸೂರಿನ ಭಾರತೀಯ ಇತಿಹಾಸ ಸಂಕಲನ ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಶ್ರೀನಿವಾಸರಾವ್ ಹೇಳಿದರು. ದೇವಸ್ಥಾನಗಳಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವೇಧ ಪುರುಷಾರ್ಥಗಳನ್ನು ಕಾಣಬಹುದು. ವೈಯಕ್ತಿಕ ಪ್ರಾರ್ಥನೆಯಿಂದ ಆತ್ಮ ಗಟ್ಟಿಯಾಗುತ್ತದೆ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜ ಗಟ್ಟಿಯಾಗುತ್ತದೆ. ಆಗಮ ಶೈಲಿಯ, ವೇದೋಕ್ತ ಮತ್ತು ತಾಂತ್ರಿಕ ಶೈಲಿಯ ದೇವಸ್ಥಾನಗಳಿಗೆ ತಮ್ಮದೇ ಆದ ಮಹತ್ವವಿದೆ. ಆಕಾರದಿಂದ ನಿರಾಕಾರದತ್ತ ಹೋಗುವುದನ್ನು ದೇವಾಲಯ ಕಟ್ಟಡ ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜಗತ್ತಿನ ವಿಶಾಲತೆ ಮತ್ತು ಮಾನವರ ಮೂರ್ಖತನ ಎಷ್ಟಿತ್ತು ಎಂಬುದನ್ನು ಅರಿತುಕೊಳ್ಳಲು ಇತಿಹಾಸ ಅಧ್ಯಯನದ ಅಗತ್ಯವಿದೆ. ಧರ್ಮ ಮತ್ತು ದೇವರು ವೈಯಕ್ತಿಕ. ಮುಂದಿನ ದಶಕಗಳಲ್ಲಿ ಧರ್ಮದ ಸ್ಥಾನವನ್ನು ವಿಜ್ಞಾನ ಆವರಿಸಲಿದೆ. ಜೈವಿಕ ಕ್ರಿಯೆಯೊಂದೇ ಶಾಶ್ವತ ಎಂಬುದು ಅರಿವಿಗೆ ಬರಲಿದೆ. ಬೌದ್ಧಿಕ ಅರ್ಹತೆಯೊಂದೇ ಮಾನವರನ್ನು ಬದುಕಿಸಬಲ್ಲದು.
| ಡಾ.ನಿರಂಜನ ನಿಷ್ಠಿ ಕುಲಪತಿ, ಶರಣಬಸವ ವಿವಿ ಕಲಬುರಗಿ