ಕಮಲ ಹೊರಲು ಸಿದ್ಧವಾದ ಆಟೋ!

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಕೆಪಿಜೆಪಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಗೆ ಬೆಂಬಲ ಸೂಚಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರಿಗೆ ಎನ್ನುವ ಕುತೂಹಲದ ಪ್ರಶ್ನೆಗೆ ತೆರೆ ಎಳೆದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದ ಕಾರಣ ಕೆಪಿಜೆಪಿ ಮತದಾರರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿಯ ಆರ್.ಶಂಕರ ಅವರು ಆಟೋ ಚಿಹ್ನೆ ಇಟ್ಟುಕೊಂಡು, 63 ಸಾವಿರ ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಜೆಪಿ ಕಾರ್ಯಕರ್ತರ ಬೆಂಬಲ ಯಾರಿಗೆ ಎಂಬುದು ಹಾವೇರಿ-ಗದಗ ಲೋಕಸಭೆ ಕ್ಷೇತ್ರದಲ್ಲಿಯೇ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಪಕ್ಷದ ಕಾರ್ಯಕರ್ತರು ತಮ್ಮ ಬೆಂಬಲ ಬಿಜೆಪಿಗೆ ಎಂದು ಘೊಷಿಸಿಕೊಂಡಿದ್ದಾರೆ.

ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಆರ್. ಶಂಕರ ಅಧಿಕೃತವಾಗಿ ಘೊಷಿಸದಿದ್ದರೂ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರೊಂದಿಗೆ ಬಹಿರಂಗವಾಗಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಬಿಜೆಪಿಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬಿಜೆಪಿಗೆ ಮತ್ತಷ್ಟು ಮತ ಬಲ:
2018ರಲ್ಲಿ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಆರ್. ಶಂಕರ ಒಟ್ಟು 63,910 ಮತ ಪಡೆದು ಜಯ ಗಳಿಸಿದ ಕೆಪಿಜೆಪಿಯ ರಾಜ್ಯದ ಏಕೈಕ ಶಾಸಕ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೇಲಗಾರ ಕೂಡ 48,973 ಮತಗಳನ್ನು ಪಡೆದುಕೊಂಡಿದ್ದರು. ಕೆಪಿಜೆಪಿ ಕಾರ್ಯಕರ್ತರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ರಾಣೆಬೆನ್ನೂರಿನಲ್ಲಿ ಬಿಜೆಪಿಯ ಮತ ಬಲ 1,12,883ಕ್ಕೂ ಅಧಿಕವಾಗಲಿದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ.

ಬಿಜೆಪಿಗೆ ಬೆಂಬಲವೇಕೆ?:
ಕೆಪಿಜೆಪಿ ಕಾರ್ಯಕರ್ತರು ನೇರವಾಗಿ ಬಿಜೆಪಿಗೆ ಬೆಂಬಲ ಸೂಚಿಸಿರುವುದು ಕ್ಷೇತ್ರದ ಮತದಾರರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿಂದಿನಿಂದಲೂ ಕಾಂಗ್ರೆಸ್​ನ ಕೆ.ಬಿ. ಕೋಳಿವಾಡ ಹಾಗೂ ಆರ್. ಶಂಕರ ಎಂದರೆ ಹಾವು-ಮುಂಗುಸಿ ಇದ್ದಂತೆ. ಒಬ್ಬರಿಗೊಬ್ಬರು ಎದುರು-ಬದುರು ಭೇಟಿಯಾದ ಹಾಗೂ ಒಮ್ಮೆಯಾದರೂ ಮಾತನಾಡಿಸಿದ ಉದಾಹರಣೆಗಳೇ ಇಲ್ಲ ಎಂದೆನ್ನಲಾಗುತ್ತದೆ.

ಲೋಕಸಭೆ ಟಿಕೆಟ್ ಅನ್ನು ಕೆ.ಬಿ. ಕೋಳಿವಾಡರ ಸಂಬಂಧಿ ಗದಗಿನ ಡಿ.ಆರ್. ಪಾಟೀಲರಿಗೆ ನೀಡಲಾಗಿದೆ. ಆದ್ದರಿಂದ ಕಾಂಗ್ರೆಸ್​ಗೆ ಬೆಂಬಲ ನೀಡಿದರೆ ತಮ್ಮ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆಯಿರುವ ಕಾರಣ ಆರ್. ಶಂಕರ ಬಹಿರಂಗವಾಗಿ ಘೊಷಿಸದಿದ್ದರೂ ಕಾರ್ಯಕರ್ತರ ಮೂಲಕ ಬಿಜೆಪಿ ಬೆನ್ನಿಗೆ ನಿಂತಿದ್ದಾರೆ ಎನ್ನುವ ಮಾತುಗಳು ಕೇಳಿ ಬರತೊಡಗಿವೆ.

ಬಿಜೆಪಿ ಸೇರುವ ಲೆಕ್ಕಾಚಾರ!
ಶಾಸಕರಾಗಿ ಆಯ್ಕೆಯಾದ ಆರ್. ಶಂಕರ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಬಾಗಿಲು ತಟ್ಟಿ ಕೊನೆಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ಸಚಿವ ಸ್ಥಾನವನ್ನು ಕೆಲವೇ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತುಕೊಂಡಿತು. ಇದೀಗ ಎರಡೂ ಪಕ್ಷದ ಕಡೆಯಿಲ್ಲದೆ ಆರ್. ಶಂಕರ ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಲೆಕ್ಕಾಚಾರ ಹಾಕಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆಯೇ ಎನ್ನುವ ಪ್ರಶ್ನೆ ಕೂಡ ಉದ್ಭವವಾಗಿದೆ.

ಕಾಂಗ್ರೆಸ್​ಗೆ ಹಿನ್ನಡೆ
ಕೆಪಿಜೆಪಿ ಕಾರ್ಯಕರ್ತರು ಬಿಜೆಪಿ ಬೆನ್ನಿಗೆ ನಿಂತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆ.ಬಿ. ಕೋಳಿವಾಡರು 59,572 ಮತಗಳಿಸಿ ಆರ್. ಶಂಕರ ವಿರುದ್ಧ ಸೋಲು ಕಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಂಬಂಧಿ ಡಿ.ಆರ್. ಪಾಟೀಲರೇ ಅಭ್ಯರ್ಥಿ ಆಗಿರುವುದರಿಂದ ಕ್ಷೇತ್ರದಲ್ಲಿ ಭಾರಿ ಮತ ಭೇಟಿ ಶುರು ಮಾಡಿದ್ದಾರೆ. ಆದರೆ, ಕೆಪಿಜೆಪಿ ಹಾಗೂ ಬಿಜೆಪಿ ಒಂದಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆಯಾಗುವ ಸಾಧ್ಯತೆ ಅಧಿಕವಾಗಿದೆ.

ದೇಶದ ಅಭಿವೃದ್ಧಿ ಹಾಗೂ ನರೇಂದ್ರ ಮೋದಿ ನಾಯಕತ್ವದ ದೃಷ್ಟಿಯಿಂದ ಪಕ್ಷದ ಬಹುತೇಕ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಬಿಜೆಪಿಗೆ ಬೆಂಬಲ ಸೂಚಿಸಲು ಮುಂದಾಗಿದ್ದೇವೆ.
| ರಾಜು ಅಡಿವೆಪ್ಪನವರ, ಕೆಪಿಜೆಪಿ ಜಿಲ್ಲಾಧ್ಯಕ್ಷ, ಹಾವೇರಿ

Leave a Reply

Your email address will not be published. Required fields are marked *