ಕಮಲ ಅರಳುವುದೋ, ಕೈ ಮೇಲಾಗುವುದೋ? ಉತ್ತರಕ್ಕಾಗಿ ಕಾಯಬೇಕು ಇನ್ನೊಂದು ತಿಂಗಳು!

ಕಾರವಾರ: ಉತ್ತರ ಕನ್ನಡ ಲೋಕಸಭೆ ಚುನಾವಣೆಯ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಈ ಹೆಚ್ಚಳದಿಂದ ಯಾರಿಗೆ ಲಾಭವಾಗಲಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ. ಆದರೆ, ಈ ನಿಟ್ಟಿನಲ್ಲಿ ನಿಖರ, ಸ್ಪಷ್ಟ ಉತ್ತರಕ್ಕಾಗಿ ಇನ್ನೊಂದು ತಿಂಗಳು ಕಾಯಲೇಬೇಕು. ಏಕೆಂದರೆ, ಮತ ಎಣಿಕೆ ನಡೆಯುವುದು ಮೇ 23ರಂದು.

2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ. 78.3 ರಷ್ಟು ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ, ಮಂಗಳವಾರ ಲೋಕಸಭೆ ಚುನಾವಣೆಗೆ ನಡೆದ ಮತದಾನದ ಪ್ರಮಾಣ ಸ್ವಲ್ಪ ಕಡಿಮೆಯೇ. ಆದರೆ, ಈ ಹಿಂದೆ ಲೋಕಸಭೆಗೆ ಜರುಗಿದ ಚುನಾವಣೆಗಳಲ್ಲಿ ಇಷ್ಟೊಂದು ಪ್ರಮಾಣದ ಮತದಾನ ಆಗಿದ್ದಿಲ್ಲ. ಈ ಬಾರಿ ಶೇ. 74.07 ರಷ್ಟು ಮತದಾನವಾಗಿರುವುದು ಒಂದು ದಾಖಲೆಯೇ ಆಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 69.20ರಷ್ಟು ಮತದಾನ ಆಗಿದ್ದು, ಇದೇ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿ ದಾಖಲಾಗಿತ್ತು. ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಶೇ. 4.87ರಷ್ಟು ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪಟ್ಟಣಿಗರ ಉತ್ಸಾಹ: ಈ ಹಿಂದಿನ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶದ ಕುಗ್ರಾಮಗಳಲ್ಲಿ ಹೆಚ್ಚಿನ ಮತದಾನವಾಗುತ್ತಿತ್ತು. ನಗರ ಪ್ರದೇಶದಲ್ಲಿ ನಾಗರಿಕರು ಮತದಾನಕ್ಕೆ ಆಸಕ್ತಿ ಕಡಿಮೆಯೇ ಇರುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಜಿಲ್ಲೆಯ ವಿವಿಧ ನಗರಗಳಲ್ಲಿ ಬೆಳಗಿನಿಂದಲೇ ಸರತಿ ಸಾಲು ಕಂಡುಬಂತು.

ತಮಗೇ ಲಾಭ: ಹೆಚ್ಚು ಮತದಾನವಾಗಿರುವುದು ತನಗೇ ಲಾಭ ಎಂದು ಬಿಜೆಪಿ ಹೇಳುತ್ತಿದೆ. ಹೆಚ್ಚುವರಿಯಾಗಿ ಮತದಾನ ಮಾಡಿದವರು ಯುವ ಹಾಗೂ ನಗರದ ಮತದಾರರಾಗಿದ್ದಾರೆ. ಅವರು ತಮ್ಮ ಪಕ್ಷಕ್ಕೇ ಮತ ಹಾಕಲಿದ್ದಾರೆ ಎಂಬುದು ಬಿಜೆಪಿಗರ ವಾದ. ಇನ್ನು ಜೆಡಿಎಸ್ ಕಾರ್ಯಕರ್ತರೂ ಇದನ್ನೇ ಹೇಳುತ್ತಿದ್ದಾರೆ.

ಕಾರ್ಯಕರ್ತರ ಕೈಗೆ ಸಿಗದ ಅಭ್ಯರ್ಥಿಗಳು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿದ್ದರೂ ಇಬ್ಬರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಪೈಪೋಟಿ. ಚುನಾವಣೆ ಮುಗಿದ ಮರುದಿನವೇ ಇಬ್ಬರೂ ಅಭ್ಯರ್ಥಿಗಳು ಅಭಿಮಾನಿಗಳ, ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ. ಕ್ಷೇತ್ರ ಬಿಟ್ಟು ತೆರಳಿದ್ದಾರೆ. ಅನಂತಕುಮಾರ ಹೆಗಡೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಆನಂದ ಅಸ್ನೋಟಿಕರ್ ಅವರು ಗೋವಾ ಕಾಣಕೋಣಕ್ಕೆ ಖಾಸಗಿ ಹೋಟೆಲ್​ಗೆ ತೆರಳಿ ಕುಟುಂಬದ ಜೊತೆ ಕಾಲ ಕಳೆದರು ಎನ್ನಲಾಗಿದೆ. ಇಬ್ಬರೂ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರಿಗೆ ಕಾರ್ಯಕರ್ತರಿಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ ಅಸ್ನೋಟಿಕರ್ ಮೇ 23 ರವರೆಗೆ ಆರಾಮವಾಗಿ ಕಾಯಿರಿ, ಗೆಲುವಿನ ಉತ್ಸಾಹ ಹೀಗೇ ಇರಲಿ ಎಂದು ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲು: ರಿಕ್ಷಾ ಚಾಲಕನ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ. ಅಂಗವಿಕಲ ಮತದಾರರನ್ನು ಕರೆತರಲು ಇಲಾಖೆಯಿಂದ ನಿಯೋಜನೆಗೊಂಡಿದ್ದ ಆಟೋದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಜಂಟಿ ಅಭ್ಯರ್ಥಿ ಪರ ಕರಪತ್ರಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ನಾಡುಮಾಸ್ಕೇರಿಯ ಜೈನುಲ್ಲಾ ಅಬೀದ್ ಅಬ್ದುಲ್ ಖಾದರ್ ಸಾಬ್ ವಿರುದ್ಧ ಗೋಕರ್ಣ ಠಾಣೆಯಲ್ಲಿ ಸಂಚಾರಿ ಜಾಗೃತ ದಳದ ಅಧಿಕಾರಿ ಹರೀಶ ಗಾಂವಕರ್ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲು: ಮತದಾನ ಮಾಡುವ ಸನ್ನಿವೇಶವನ್ನು ವಿಡಿಯೋ ಮಾಡಿ ವೈರಲ್ ಮಾಡಿದ ಸಂಬಂಧ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ಜಾಗೃತ ದಳದ ಅಧಿಕಾರಿ ಹನುಮಂತಪ್ಪ ಫಕೀರಪ್ಪ ವಕ್ಕುಂದ ದೂರು ದಾಖಲಿಸಿದ್ದು. ಕಸಮಳಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 210ನೇ ಸಂಖ್ಯೆಯ ಮತಗಟ್ಟೆಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಗಿ ತಿಳಿಸಿದ್ದಾರೆ.

ಶಾಸಕಿ ರೂಪಾಲಿ ನಿಂದಿಸಿದವರ ವಿರುದ್ಧ ದೂರು: ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರ ಕಾರನ್ನು ತಡೆದು ಅವರಿಗೆ ನಿಂದಿಸಿದ ಬಗ್ಗೆ ಶಹರ ಠಾಣೆಯಲ್ಲಿ ಇಬ್ಬರ ವಿರುದ್ಧ ಬುಧವಾರ ದೂರು ದಾಖಲಾಗಿದೆ. ಮಂಗಳವಾರ ಮಧ್ಯಾಹ್ನ ನಗರದ ಬೈತಖೋಲ್ ಸಮೀಪ ಶಾಸಕಿ ರೂಪಾಲಿ ನಾಯ್ಕ ತೆರಳುತ್ತಿದ್ದ ಕಾರನ್ನು ಜೆಡಿಎಸ್ ಕಾರ್ಯಕರ್ತರಾದ ಕಿಶನ್ ಹಾಗೂ ದರ್ಶನ್ ಎಂಬುವವರು ತಡೆದು ಅವರನ್ನು ನಿಂದಿಸಿದ್ದರು ಎನ್ನಲಾಗಿದೆ.

ಸ್ಟ್ರಾಂಗ್ ರೂಮಲ್ಲಿ ಮತಯಂತ್ರಗಳು ಭದ್ರ: ಸಾರ್ವತ್ರಿಕ ಚುನಾವಣೆ 2019ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ತಾಲೂಕುಗಳ ಮತಗಟ್ಟೆಗಳ ಮತಯಂತ್ರ, ವಿವಿ ಪ್ಯಾಟ್ ಯಂತ್ರಗಳನ್ನು ಕುಮಟಾ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸ್ಟ್ರಾಂಗ್ ರೂಮಲ್ಲಿ ಬುಧವಾರ ಭದ್ರಪಡಿಸಲಾಗಿದೆ.

ಎಲ್ಲ ತಾಲೂಕುಗಳಿಂದ 1,922 ಮತಗಟ್ಟೆಗಳ ಮತಯಂತ್ರಗಳನ್ನು ಆಯಾ ತಾಲೂಕಿಗೆ ನಿಗದಿಪಡಿಸಿದ ಕೊಠಡಿಗಳಲ್ಲಿ ಮಂಗಳವಾರ ರಾತ್ರಿ ಇರಿಸಲಾಗಿತ್ತು. ಬುಧವಾರ ಬೆಳಗ್ಗೆಯಿಂದ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರ ಉಪಸ್ಥಿತಿಯಲ್ಲಿ ಎಲ್ಲ ಸ್ಟ್ರಾಂಗ್ ರೂಮನ್ನು ಮುಚ್ಚಿ, ಅವುಗಳಿಗೆ ಹಲಗೆ ಹೊಡೆದು, ಬೀಗ ಹಾಕಿ, ಸೀಲ್ ಮಾಡಲಾಯಿತು. ಮತಯಂತ್ರವಿರುವ ಪ್ರತಿ ಕೊಠಡಿಗೂ ಸಶಸ್ತ್ರ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ಕಟ್ಟಡದ ಸುತ್ತ ಬೇಲಿ ಹಾಕಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಒಬ್ಬ ಎಸ್​ಪಿ, ಡಿವೈಎಸ್​ಪಿ, ನಾಲ್ವರು ಸಿಪಿಐ, 6 ಜನ ಪಿಎಸ್​ಐ, 150 ಸಿವಿಲ್ ಪೊಲೀಸ್, 100 ಜನರಲ್ ಪೊಲೀಸ್, 100 ಮೀಸಲು ಪೊಲೀಸ್ ಹಾಗೂ 80 ಮಂದಿ (1 ತುಕಡಿ) ಅರೆ ಸೇನಾ ಪಡೆಯ ಸಿಬ್ಬಂದಿ ಕಾವಲು ಇರಲಿದೆ.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಿಪಂ ಸಿಇಒ ಎಂ.ರೋಷನ್, ‘ಎಲ್ಲರ ಸಹಕಾರ ಹಾಗೂ ಜಿಲ್ಲಾಡಳಿತ, ಸ್ವೀಪ್ ಸಮಿತಿ ಪ್ರಯತ್ನದಿಂದ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಅಂಗವಿಕಲರು ಕೂಡ ಶೇ. 97ರಷ್ಟು ಮತದಾನ ಮಾಡಿರುವುದು ಖುಷಿ ತಂದಿದೆ. ಜಿಲ್ಲೆಯ ಮತದಾರರು ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಯತ್ನಕ್ಕೆ ಉತ್ತಮ ಸಹಕಾರ ನೀಡಿದ್ದಾರೆ’ ಎಂದರು.