ಕಮಲಕ್ಕೆ ಚಿಕ್ಕನಗೌಡ್ರೇ ನಿಕ್ಕಿ

ಕುಂದಗೋಳ: ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ದಿ. ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಬಹುತೇಕ ಟಿಕೆಟ್ ಖಚಿತವಾಗಿದೆ.

ಕಳೆದ ಸಲ ಸಿ.ಎಸ್. ಶಿವಳ್ಳಿ ಎದುರು ಕೇವಲ 634 ಮತಗಳಿಂದ ಸೋತಿದ್ದ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಹಾಗೂ ಮುಖಂಡ ಎಂ.ಆರ್. ಪಾಟೀಲರ ಮಧ್ಯೆ ಬಿಜೆಪಿ ಟಿಕೆಟ್​ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟರೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿಯೂ ಆಗಿರುವ ಚಿಕ್ಕನಗೌಡ್ರ ಅವರಿಗೇ ಕೊನೆ ಘಳಿಗೆಯಲ್ಲಿ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಈ ಮಧ್ಯೆ ಇತ್ತೀಚೆಗೆ ಜೆಡಿಎಸ್​ಗೆ ಸೇರಿದ ಹಜರತಲಿ ಜೋಡಮನಿ ಪಕ್ಷ ಟಿಕೆಟ್ ನೀಡದೇ ಇದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಚಿಂತನೆಯಲ್ಲಿದ್ದಾರೆ.

ಇಂದು ನಾಮಪತ್ರ: ಮೈತ್ರಿ ಟಿಕೆಟ್ ಘೊಷಣೆಯಾಗದೇ ಇದ್ದರೂ ಏ. 26ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ಕುಸುಮಾ ಶಿವಳ್ಳಿ ಸಿದ್ಧತೆ ನಡೆಸಿದ್ದಾರೆ. ಕೊನೆಯ ದಿನವಾದ ಏ. 29ರಂದು ಬೃಹತ್ ಮೆರವಣಿಗೆಯಲ್ಲಿ ತೆರಳಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ.

4ನೇ ದಿನವೂ ನಾಮಪತ್ರ ಇಲ್ಲ: ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ 4ನೇ ದಿನವಾದ ಗುರುವಾರವೂ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಏ. 29ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಎಂದು ಚುನಾವಣಾಧಿಕಾರಿ ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ವರಿಷ್ಠರು ನನಗೇ ಟಿಕಿಟ್ ನೀಡುವುದಾಗಿ ನೂರಕ್ಕೆ ನೂರರಷ್ಟು ಭರವಸೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನು ಕೇವಲ 634 ಮತಗಳ ಅಂತರದಿಂದ ಪರಾಭವಗೊಂಡಿದ್ದೇನೆ. ಈ ಬಾರಿ ನನ್ನ ಗೆಲುವು ಖಚಿತ. | ಎಸ್.ಐ. ಚಿಕ್ಕನಗೌಡ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ

Leave a Reply

Your email address will not be published. Required fields are marked *