ಕಮರದಿರಲಿ ಮಕ್ಕಳ ಕನಸು

|ಕನಕಗಿರಿ ಮನೋಹರ ಬೊಂದಾಡೆ

ನನಗೂ ಎಲ್ಲರಂತೆ ಓದಿ ಇಂಜಿನಿಯರ್ ಆಗುವ ಕನಸಿತ್ತು, ಆದರೆ, ಬಡತನ ಜತೆಗಿತ್ತು. ಇಬ್ಬರು ಅಕ್ಕ, ಒಬ್ಬ ಅಣ್ಣನಿಗೆ ಓದಿಸಲು ಅಪ್ಪ ಬಲು ಕಷ್ಟ ಪಡುತ್ತಿದ್ದರು. ಹೀಗಾಗಿ ನಾನು ಶಾಲೆ ಬಿಟ್ಟು ಅಪ್ಪ, ಅಮ್ಮನ ಜತೆ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದೆ. ಯಾರೋ ನನ್ನನ್ನು ಶಾಲೆ ಸೇರಿಸಿದರು…

11 ವರ್ಷದ ಭವಿತಾ ಎನ್ನುವುದು ಹೀಗೆ. ಹೊಸಪೇಟೆಯ ಡಾನ್ ಬಾಸ್ಕೋ ಕಾರ್ವಿುಕ ಶಾಲೆಯಲ್ಲಿ ಓದುತ್ತಿದ್ದಾಳೆ. ಭವಿತಾ ಅಂಥ ವಿದ್ಯಾರ್ಥಿಗಳು ನಾಡಿನಲ್ಲಿ ಗಲ್ಲಿಗೊಬ್ಬರು ಸಿಗುತ್ತಾರೆ. ಆಶ್ಚರ್ಯವೆಂದರೆ, ಇಂತಹವರನ್ನು ಗುರುತಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಾಲ ಕಾರ್ವಿುಕ ಮುಕ್ತ ಸಮಾಜ ನಿರ್ವಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂ.ವ್ಯಯಿಸುತ್ತಿವೆ. ಆದರೆ, ಅಂದುಕೊಂಡ ಗಮ್ಯ ತಲುಪಿಲ್ಲ.

ಈ ನಾಡಿನ ಪ್ರತಿ ಮಗು ಸುಶಿಕ್ಷಿತವಾಗಬೇಕು, ಯಾವ ಮಗುವೂ ತನ್ನ ಹಕ್ಕಿನಿಂದ ವಂಚಿತವಾಗಬಾರದು, ಮುಖ್ಯವಾಗಿ ಬಾಲ ಕಾರ್ವಿುಕ ಪದ್ಧತಿಗೆ ತಲೆಕೊಡುವಂತಾಗಬಾರದು ಎನ್ನುವ ಹತ್ತಾರು ಆಶಯಗಳೊಂದಿಗೆ ವಿವಿಧ ಯೋಜನೆಗಳು ಅನುಷ್ಠಾನದಲ್ಲಿದ್ದರೂ ಇದಕ್ಕೆ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ.

ಕಾಯ್ದೆ ಏನು ಹೇಳುತ್ತೆ?

1986ರಲ್ಲಿ ಜಾರಿಗೆ ಬಂದ ಬಾಲ ಕಾರ್ವಿುಕ ಕಾಯ್ದೆ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಹಾಗೂ ಅಪಾಯಕಾರಿಯಲ್ಲದ ಉದ್ಯಮಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ಈ ಮಿತಿಯೊಳಗಿನ ಮಗುವನ್ನು ಉದ್ಯಮದಲ್ಲಿ ತೊಡಗಿಸಿಕೊಂಡರೆ ಅಂತಹ ಮಾಲೀಕರಿಗೆ ಒಂದು ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಬೇಕು. ಆದರೆ, ಈಗ ಜಾರಿಯಾದ ಹೊಸ ಕಾಯ್ದೆಯಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡರೆ ಮಾಲೀಕರಿಗೆ 2 ವರ್ಷ ಜೈಲು, 50 ಸಾವಿರ ರೂ, ದಂಡ ವಿಧಿಸಿದೆ. ಆದರೆ, ರಾಜ್ಯದಲ್ಲಿ ಕಾಯ್ದೆಯ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಇದರಡಿ ದಾಖಲಾದ ಪ್ರಕರಣಗಳ ಸಂಖ್ಯೆ ಬೆರಳೆಣಿಕೆಯಷ್ಟು. ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಾಲ ಕಾರ್ವಿುಕ ಪತ್ತೆಗೆ ಸಂಬಂಧಿಸಿ ಮಾಲೀಕರಿಗೆ ದಂಡದ ಜತೆ ಜೈಲು ಶಿಕ್ಷೆಗೆ ಗುರಿ ಮಾಡಿದ ಪ್ರಕರಣಗಳೇ ದಾಖಲಾಗಿಲ್ಲ. ಹಾಗಂತ ಬಾಲ ಕಾರ್ವಿುಕ ಮಕ್ಕಳೇ ಇಲ್ಲವೆಂದಲ್ಲ. ಸಂಬಂಧಿಸಿದ ಇಲಾಖೆ ಸೇರಿದಂತೆ ಯಾರೂ ಪತ್ತೆ ಹಚ್ಚುವ ಗೋಜಿಗೆ ಹೋಗಿಲ್ಲ. ಗ್ಯಾರೇಜ್, ಹೋಟೆಲ್, ಇಟ್ಟಿಗೆಭಟ್ಟಿ ಸೇರಿದಂತೆ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಅನೇಕ ಉದ್ಯಮಗಳಲ್ಲಿ, ಕೈಗಾರಿಕೆಗಳಲ್ಲಿ ಬಾಲ ಕಾರ್ವಿುಕರು ದುಡಿಯುತ್ತಿದ್ದಾರೆ.

11 ಇಲಾಖೆಗಳು ಮೌನ!

ಬಾಲ ಕಾರ್ವಿುಕ ವ್ಯವಸ್ಥೆಯನ್ನು ಸಂಪೂರ್ಣ ನಿಮೂಲನೆ ಮಾಡಲು ಹೊರಟ ಸರ್ಕಾರ ಕಾರ್ವಿುಕ ಇಲಾಖೆ ಜತೆ 11 ಇಲಾಖೆಗಳಿಗೆ ಜವಾಬ್ದಾರಿ ನೀಡಿದೆ. ಆದರೆ, ಕಾರ್ವಿುಕ ಇಲಾಖೆ ಹೊರತು ಪಡಿಸಿ ಬೇರೆ ಇಲಾಖೆಗಳು ಬಾಲ ಕಾರ್ವಿುಕ ನಿಮೂಲನೆಗೆ ಯತ್ನಿಸಿಲ್ಲ ಎಂಬುದಕ್ಕೆ ಬೆರಳೆಣಿಕೆಯಷ್ಟು ಮಾತ್ರ ದಾಖಲಾದ ಪ್ರಕರಣಗಳ ಸಂಖ್ಯೆಯೇ ಸಾಕ್ಷಿಯಾಗಿದೆ. ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗಳ ಮೂಲಕ ಮಕ್ಕಳನ್ನು ಶಾಲೆಗೆ ಸೆಳೆಯಲು ಪ್ರಯತ್ನಿಸಿದಾಗಲೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. 15ರಿಂದ 18ರೊಳಗಿನ ಕಿಶೋರ ಕಾರ್ವಿುಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರ 76 ಉದ್ಯಮಗಳ ಪಟ್ಟಿ ಮಾಡಿ ಮಕ್ಕಳು ಇಲ್ಲಿ ಕೆಲಸ ಮಾಡದಂತೆ ರೂಪಿಸಿದ ಕಾನೂನು, 11 ಪ್ಲಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಂದ ಲೆಕ್ಕಕ್ಕಿಲ್ಲದಂತಾಗಿದೆ. ಬಾಲ ಕಾರ್ವಿುಕ ಕಂಡು ಬಂದ ತಕ್ಷಣವೇ ಮಾಲಿಕನ ಮೇಲೆ ಎಫ್​ಐಆರ್ ದಾಖಲಿಸಲು ಕಾನೂನಿನಲ್ಲಿ ಇರುವ ಅವಕಾಶವನ್ನು ಅಧಿಕಾರಿಗಳು ಬಳಕೆ ಮಾಡುತ್ತಿಲ್ಲ. ಹೀಗಾಗಿ ಅನೇಕ ಉದ್ಯಮಗಳ ಮಾಲೀಕರು ನಿರ್ಭಯದಿಂದ ಮಕ್ಕಳನ್ನು ಉದ್ಯಮಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಕೇವಲ 45 ಶಾಲೆಗಳು

ಶಾಲೆಗಳಿಂದ ಹೊರಗುಳಿದು ಬಾಲ ಕಾರ್ವಿುಕರಾಗಿರುವ ಮಕ್ಕಳನ್ನು ಪತ್ತೆ ಹಚ್ಚುವ ಇಲಾಖೆ ಮತ್ತು ಎನ್​ಜಿಒಗಳು ಬಾಲಕಾರ್ವಿುಕ ವಸತಿಗಳಲ್ಲಿ ದಾಖಲಿಸಿ ಅವರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುತ್ತಿವೆ. ಆದರೆ, ವಾಸ್ತವದಲ್ಲಿ ರಾಜ್ಯಾದಂತ ಈ ಮಕ್ಕಳು ಬಹುಸಂಖ್ಯೆಯಲ್ಲಿದ್ದರೂ ಶಾಲೆಗಳ ಸಂಖ್ಯೆ ಬರೀ 45 ಇವೆ. ಸರ್ಕಾರ ಶಾಲೆಗಳ ಸಂಖ್ಯೆ ಹೆಚ್ಚಿಸಲು ಇಷ್ಟಪಡುತ್ತಿಲ್ಲ. ಇರುವ ಪ್ರತಿ ಶಾಲೆಯಲ್ಲಿ 50 ಮಕ್ಕಳಷ್ಟೇ ಇರಲು ಅವಕಾಶವಿದ್ದು ಬಾಲ ಕಾರ್ವಿುಕರ ಸಂಖ್ಯೆಗನುಗುಣವಾಗಿ ಶಾಲೆಗಳಿಲ್ಲ ಎಂಬುದು ವಿಷಾದದ ಸಂಗತಿ. ‘ಎಲ್ಲೇ ಮಕ್ಕಳನ್ನು ಕಂಡರೂ ಸಾರ್ವಜನಿಕರು ಗಮನಹರಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಇದರಿಂದ ಅವರ ಶಿಕ್ಷಣದ ಕನಸನ್ನು ನನಸು ಮಾಡಲು ಸಾಧ್ಯ’ ಎನ್ನುತ್ತಾರೆ ಡಾನ್ ಬಾಸ್ಕೋ ಶಾಲೆಯ ಶಿಕ್ಷಕಿಯರಾದ ವಿಜಯಲಕ್ಷ್ಮೀ ಮತ್ತು ಲತಾ.

ಬಾಲಕಾರ್ವಿುಕರನ್ನು ಮುಕ್ತಗೊಳಿಸಿ ಮುಖ್ಯವಾಹಿನಿಗೆ ತರುವ ಕೆಲಸ ನಮ್ಮದಲ್ಲ ಎಂದು ಭಾವಿಸುತ್ತಿರುವ ಕಾರಣಕ್ಕೆ ಬಾಲ ಕಾರ್ವಿುಕ ನಿಮೂಲನೆ ಕನಸು ಕನಸಾಗಿ ಉಳಿದಿದೆ. ಇಲ್ಲಿ ಕೇವಲ ಕಾರ್ವಿುಕ ಇಲಾಖೆ, ಎನ್​ಜಿಒ ಮಾತ್ರವಲ್ಲದೇ, ಇಡೀ ಮನುಷ್ಯ ಸಂಕುಲ ಮಕ್ಕಳ ಬಗ್ಗೆ ಭವಿಷ್ಯದ ಬಗ್ಗೆ ಆಲೋಚಿಸಬೇಕಿದೆ.

ಪ್ರತಿ ಮಗುವಿಗೂ ಬಾಲ್ಯವನ್ನು ಸವಿಯುವ ಹಕ್ಕಿದೆ. ಇದನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ಬಡತನವೊಂದೇ ಬಾಲ ಕಾರ್ವಿುಕ ಪದ್ಧತಿಯನ್ನು ಜೀವಂತವಿಟ್ಟಿಲ್ಲ. ಮಕ್ಕಳ ಕುರಿತಾದ ಪ್ರತಿಯೊಬ್ಬರ ನಿರಾಸಕ್ತಿಯೂ ಪ್ರಮುಖ ಕಾರಣವಾಗಿದೆ. ಹೀಗಾಗಿ ಬಾಲಕರ ಕನಸು ಕಮರಲು ಬಿಡಬಾರದು.

Leave a Reply

Your email address will not be published. Required fields are marked *