ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಬದ್ಧ

ಧಾರವಾಡ: ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಇಟ್ಟುಕೊಳ್ಳುವುದರಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಿಸಲು ಮುಂದಿನ ಹಂಗಾಮಿನಿಂದ ರಾಜ್ಯದಲ್ಲಿ ಎಫ್​ಆರ್​ಪಿ ಕಾನೂನು ಜಾರಿಗೆ ತರಲು ಪ್ರಯತ್ನ ನಡೆಸಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು.

ಕೃವಿವಿ ಶಿಕ್ಷಕರ ಸಂಘವನ್ನು ಶನಿವಾರ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಭೆಗಳನ್ನು ಜರುಗಿಸಲಾಗಿದೆ. ಈ ಕಾನೂನು ಜಾರಿಯಾದರೆ ಬಿಲ್ ಬಾಕಿ ಸಮಸ್ಯೆ ಬರುವುದಿಲ್ಲ. ಬೆಲೆ ನಿಗದಿ, ಬಿಲ್ ಪಾವತಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದೆ. ಕೆಲ ಫ್ಯಾಕ್ಟರಿಗಳ ಮಾಲೀಕರು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳೇ ಮಾಲೀಕರಾದರೂ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡಿದರೆ ಬೆಳೆಗಾರರಿಗೆ ಅನುಕೂಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದೇವೇಳೆ ಹುಬ್ಬಳ್ಳಿ ತಾಲೂಕು ವರೂರಿನ ಪ್ರಕಾಶ ಬಸ್ತಿ, ಅಳ್ನಾವರದ ಯಾಸೀನ್ ಕಾಂಟ್ರಾಕ್ಟರ್ ಅವರಿಗೆ ಸಚಿವರು ಕಬ್ಬು ಕಟಾವು ಯಂತ್ರದ ಕೀಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.

ಕೃಷಿ ವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಹಾಗೂ ಅಧಿಕಾರಿಗಳಿದ್ದರು.

ಸಬ್ಸಿಡಿಯಲ್ಲಿ ಕಟಾವು ಯಂತ್ರ

ಬೆಳೆಗಾರರಿಗೆ ಕಬ್ಬು ಕಟಾವು ಮತ್ತು ಸಾಗಣೆ ದೊಡ್ಡ ಕೆಲಸ. ಇದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಸಬ್ಸಿಡಿ ದರದಲ್ಲಿ ಕಬ್ಬು ಕಟಾವು ಯಂತ್ರಗಳನ್ನು ವಿತರಿಸಲಾಗುತ್ತಿದೆ. ಶನಿವಾರ ಬೆಳಗಾವಿ ಜಿಲ್ಲೆಯ ರೈತರಿಗೆ ತಲಾ 1.20 ಕೋಟಿ ರೂ. ವೆಚ್ಚದ 60 ಯಂತ್ರಗಳನ್ನು ವಿತರಿಸಲಾಯಿತು. ಧಾರವಾಡ ಜಿಲ್ಲೆಯಲ್ಲಿ ಸದ್ಯ 4 ಯಂತ್ರಗಳಿಗೆ ಬೇಡಿಕೆ ಇದ್ದು, ಎಷ್ಟೇ ಬೇಡಿಕೆ ಬಂದರೂ ಶೇ. 40ರ ಸಹಾಯಧನದಲ್ಲಿ ಯಂತ್ರಗಳನ್ನು ವಿತರಿಸಲಾಗುವುದು ಎಂದು ಸಚಿವ ರೆಡ್ಡಿ ತಿಳಿಸಿದರು.