ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹ

ಮದ್ದೂರು: ತಾಲೂಕಿನ ಕೆ.ಎಂ.ದೊಡ್ಡಿಯ ಚಾಂಷುಗರ್, ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆಗಳಿಗೆ ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಾಕಿ ಹಣ ನೀಡುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ವಿಶ್ವನಾಥ್ ಮಾತನಾಡಿ, ತಾಲೂಕಿನ ಕೆ.ಎಂ. ದೊಡ್ಡಿಯ ಚಾಂಷುಗರ್ ಕಾರ್ಖಾನೆ ಕಬ್ಬಿನ ಬಾಕಿ ನೀಡಿಲ್ಲ ಎಂದು ರೈತರು ಪ್ರತಿಭಟನೆ ಮಾಡಿದ್ದರು. ಅಂದು ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಗೀತಾ ಅವರು ಬಿಲ್ ಪಾವತಿಸುತ್ತೇನೆ ಅಂತಾ ಮಾತು ಕೊಟ್ಟಿದ್ದರು. ಆದರೆ ಬಿಲ್ ಪಾವತಿ ಆಗದ ಹಿನ್ನಲೆ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಕೊಠಡಿಯಲ್ಲಿ ಕುಳಿತು ಧಿಕ್ಕಾರ ಕೂಗಿದರು. ಕೂಡಲೇ ಕಬ್ಬಿನ ಬಾಕಿ ಹಣ ಪಾವತಿಸಲು ಸೂಚಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಜತೆ ಕಬ್ಬಿನ ಬಾಕಿ ಹಣದ ಸಂಬಂಧ ಚರ್ಚೆ ಮಾಡಿ ಶೀಘ್ರದಲ್ಲೇ ಹಣ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಬಸವರಾಜು, ಬೋರಣ್ಣ, ದರ್ಶನ್, ನಿಂಗೇಗೌಡ, ಶಿವಕುಮಾರ್ ನಾಗರಾಜು ಇನ್ನಿತರರಿದ್ದರು.