ಕಬ್ಬನ್ ಉದ್ಯಾನದಲ್ಲಿ ಸೈಕಲ್ ಸವಾರಿ ಶುರು ಎಂ.ಸಿ. ಮನಗೂಳಿ ಚಾಲನೆ: ಡಿಸ್ಕವರಿ ವಿಲೇಜ್​ನಿಂದ ಬಾಡಿಗೆ ಸೈಕಲ್ ನಿರ್ವಹಣೆ

ಬೆಂಗಳೂರು: ಕಬ್ಬನ್ ಪಾರ್ಕ್ ಅನ್ನು ಸಾರ್ವಜನಿಕರು ಇನ್ನುಮುಂದೆ ಸೈಕಲ್ ಸವಾರಿ ಮಾಡುತ್ತ ವೀಕ್ಷಿಸಬಹುದು. ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ರೂಪಿಸಲಾಗಿರುವ ಈ ಯೋಜನೆಗೆ ಬುಧವಾರ ಸಚಿವ ಎಂ.ಸಿ. ಮನಗೂಳಿ ಚಾಲನೆ ನೀಡಿದರು.

ನಗರದಲ್ಲಿ 80 ಲಕ್ಷಕ್ಕೂ ಹೆಚ್ಚಿನ ವಾಹನಗಳಿದ್ದು, ಮಾಲಿನ್ಯ ಪ್ರಮಾಣ ಮಿತಿಮೀರುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೈಕಲ್ ಸವಾರಿಯನ್ನು ಪ್ರೋತ್ಸಾ ಹಿಸಲಾಗುತ್ತಿದೆ. ಅದರ ಭಾಗವಾಗಿಯೇ ಬಾಡಿಗೆ ಸೈಕಲ್ ಯೋಜನೆ ಜಾರಿಗೆ ಬಂದಿದೆ. ಡಿಸ್ಕವರಿ ವಿಲೇಜ್ ಎಂಬ ಸಂಸ್ಥೆ ಬಾಡಿಗೆ ಸೈಕಲ್​ಗಳನ್ನು ನಿರ್ವಹಿಸುತ್ತಿದ್ದು, ಶೀಘ್ರ ವಿಶೇಷ ಆಪ್ ಬಿಡುಗಡೆಗೊಳ್ಳಲಿದೆ.

ಸದ್ಯ, 25 ಸೈಕಲ್​ಗಳು ಬಾಡಿಗೆಗೆ ಲಭ್ಯವಿವೆ. ಸಾರ್ವಜನಿಕರ ಪ್ರತಿಕ್ರಿಯೆಯನ್ನು ಗಮನಿಸಿ ಸೈಕಲ್​ಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರಸ್ತುತ ಕಬ್ಬನ್ ಪಾರ್ಕ್​ನಲ್ಲಿನ ಸೈಕಲ್ ನಿಲ್ದಾಣದಿಂದ ಮಾತ್ರ ಬಾಡಿಗೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ನಗರ ಭೂಸಾರಿಗೆ ಇಲಾಖೆ (ಡಲ್ಟ್) ಜತೆಗೂಡಿ ನಗರದಾದ್ಯಂತ ಸೇವೆಯನ್ನು ವಿಸ್ತರಿಸುವ ಚಿಂತನೆಯಿದೆ. ಕಬ್ಬನ್

ಪಾರ್ಕ್​ನಲ್ಲಿ ಬಾಡಿಗೆ ಪಡೆದ ಗ್ರಾಹಕರು ತಮಗೆ ಸಮೀಪವಿರುವ ನಿಲ್ದಾಣಕ್ಕೆ ಸೈಕಲ್ ಮರಳಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ. ವೆಂಕಟೇಶ್, ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್, ಉಪ ನಿರ್ದೇಶಕ ಮಹಾಂತೇಶ ಮುರಗೋಡು ಉಪಸ್ಥಿತರಿದ್ದರು.

ಕಬ್ಬನ್ ಪಾರ್ಕ್ ಹೆಸರುಳ್ಳ ಪ್ರವೇಶದ್ವಾರ

ಹೈಕೋರ್ಟ್ ಹಾಗೂ ಹಡ್ಸನ್ ವೃತ್ತದಲ್ಲಿ ಕಬ್ಬನ್ ಪಾರ್ಕ್​ಗೆ ಮುಖ್ಯ ಪ್ರವೇಶದ್ವಾರ ನಿರ್ವಿುಸಲಾಗಿದ್ದು, ‘ಶ್ರೀ ಚಾಮರಾಜೇಂದ್ರ ಉದ್ಯಾನ’ ಎಂದು ನಾಮಫಲಕವನ್ನೂ ಅಳವಡಿಸಿದೆ. ಇದರಿಂದ ಉದ್ಯಾನದ ಆಕರ್ಷಣೆ ಹೆಚ್ಚಿದೆ. 40 ಲಕ್ಷ ರೂ. ವೆಚ್ಚದಲ್ಲಿ ಪ್ರವೇಶದ್ವಾರ ನಿರ್ವಿುಸಲಾಗಿದ್ದು, ಉದ್ಯಾನದ ಚಿತ್ರಣವೇ ಬದಲಾಗಿದೆ. ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿ ಸಲು ಸೈಕಲ್ ಬಳಕೆ ಹೆಚ್ಚಾಗಬೇಕು. ಇದರಿಂದ ಪರಿಸರ ರಕ್ಷಣೆ ಜತೆಗೆ ಸಾರ್ವಜನಿಕರ ಆರೋಗ್ಯವೂ ವೃದ್ಧಿಸುತ್ತದೆ. ಕಬ್ಬನ್ ಪಾರ್ಕ್ ವೀಕ್ಷಿಸಲು ಆಗಮಿಸುವ ಜನರಿಗೆ ಬಾಡಿಗೆ ಸೈಕಲ್ ಯೋಜನೆ ಅನುಕೂಲ ಕಲ್ಪಿಸಲಿದೆ.
| ಎಂ.ಸಿ. ಮನಗೂಳಿ, ತೋಟಗಾರಿಕೆ ಸಚಿವ

ತೋಟಗಾರಿಕೆ ಇಲಾಖೆ ಸೈಕಲ್ ಯೋಜನೆ ಜಾರಿಗೊಳಿಸಿರುವುದು ಉತ್ತರ ನಿರ್ಧಾರ. ಸಾರ್ವಜನಿಕರಲ್ಲಿ ಸೈಕಲ್ ಬಗ್ಗೆ ಅಭಿರುಚಿ ಮೂಡಿಸುವುಕ್ಕೂ ಯೋಜನೆ ಸಹಕಾರಿ.
| ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Leave a Reply

Your email address will not be published. Required fields are marked *