ಕಪ್ಪತಗುಡ್ಡದ ರಸ್ತೆ ಬಂದ್

ಮುಂಡರಗಿ: ಕಪ್ಪತಗುಡ್ಡಕ್ಕೆ ಹೋಗುವ ಪ್ರಮುಖ ರಸ್ತೆ ಮಧ್ಯೆ ಮುಳ್ಳು ಕಂಟಿ ಇಟ್ಟು ತಾಲೂಕಿನ ಡೋಣಿ ಗ್ರಾಮದ ರೈತನೊಬ್ಬ ಸಂಚಾರ ಬಂದ್ ಮಾಡಿದ್ದಾನೆ.

ಕಪ್ಪತಗುಡ್ಡದ ನಂದಿವೇರಿ ಮಠ, ಗಾಳಿಗುಂಡಿ ಬಸವಣ್ಣ ದೇವಸ್ಥಾನಕ್ಕೆ ಹೋಗಲು ಇದೇ ಪ್ರಮುಖ ರಸ್ತೆಯಾಗಿದೆ. ಅಲ್ಲದೆ, ಈ ಮಾರ್ಗದ ಮೂಲಕವೇ ವಿದ್ಯುತ್ ಗಾಳಿಯಂತ್ರ ಸಿಬ್ಬಂದಿ, ಅರಣ್ಯ ಇಲಾಖೆಯವರು ಸಂಚರಿಸುತ್ತಾರೆ. ರಸ್ತೆ ಬಂದ್ ಮಾಡಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ.

ಕಾರಣ: ಡೋಣಿ ಗ್ರಾಮದ ರೈತ ಹನುಮಂತಗೌಡ ಪಿಡ್ಡನಗೌಡ್ರ ಎಂಬುವರ ಜಮೀನಿನಲ್ಲಿ ರಸ್ತೆ ಹಾದು ಹೋಗಿದೆ. ಆದರೆ, ಇದುವರೆಗೆ ಪರಿಹಾರ ನೀಡದ ಕಾರಣ ರಸ್ತೆ ಬಂದ್ ಮಾಡಿದ್ದಾರೆ. ರೈತ ಹನುಮಂತಗೌಡ ಅವರು 2017ರಿಂದ ಪರಿಹಾರಕ್ಕಾಗಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ರಸ್ತೆ ಮಧ್ಯೆ ಟ್ರೆಂಚ್ ಹಾಕಿಸಿ ರಸ್ತೆ ಬಂದ್ ಮಾಡಿದ್ದರು, ಅಂದಿನ ಜಿಲ್ಲಾಧಿಕಾರಿ ಮನೋಜ್ ಜೈನ್ ಹಾಗೂ ತಹಸೀಲ್ದಾರ್ ಅವರು ಸ್ಥಳ ಪರಿಶೀಲಿಸಿ ಜಮೀನು ಸರ್ವೆ ಮಾಡಿಸಲು ಸೂಚಿಸಿದ್ದರು. ಸರ್ವೆ ನಡೆಸಿದಾಗ ಹನುಮಂತಗೌಡ ಅವರ 8 ಗುಂಟೆ ಭೂಮಿ ರಸ್ತೆಗೆ ಹೋಗಿರುವುದು ಸ್ಪಷ್ಟವಾಗಿದೆ. ಅಂದಿನಿಂದ ಹಲವಾರು ಸಲ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಹಾರಕ್ಕೆ ಒತ್ತಾಯಿಸಿದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಮಾ.16ರಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಡೋಣಿ ಗ್ರಾಮಕ್ಕೆ ಭೇಟಿ ನೀಡಿದಾಗ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತ ಹನುಮಂತಗೌಡ ರಸ್ತೆಯಲ್ಲಿ ಮುಳ್ಳಿನ ಕಂಟಿ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಪರಿಹಾರಕ್ಕಾಗಿ ಅಲೆದೂ ಅಲೆದು ಸಾಕಾಗಿದೆ. ವಿತರಣೆ ಕುರಿತು ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗುವುದು.
| ಹನುಮಂತಗೌಡ ಪಿಡ್ಡನಗೌಡ್ರ, ರೈತ

ಅಧಿಕಾರಿಗಳು, ರೈತರು ರ್ಚಚಿಸಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಬೇಕು. ಕಪ್ಪತಗುಡ್ಡ ಹಾಗೂ ನಂದಿವೇರಿ ಮಠಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಸಂಚಾರಕ್ಕೆ ತೊಂದರೆಯಾಗುತ್ತದೆ. ಸಂಬಂಧಿಸಿದವರು ಸಮಸ್ಯೆ ಬಗೆಹರಿಸಲು ಮುಂದಾಗಬೇಕು.
| ಶಿವಕುಮಾರ ಸ್ವಾಮೀಜಿ, ನಂದಿವೇರಿ ಮಠ

ಕಪ್ಪತಗುಡ್ಡ ರಸ್ತೆಗೆ ರೈತನ ಜಮೀನು ಸ್ವಾಧೀನ ಕುರಿತು ಸರ್ವೆ ಮಾಡಿದ ಅಧಿಕಾರಿಗಳು ಹಾಗೂ ರೈತನೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
| ಡಾ. ವೆಂಕಟೇಶ ನಾಯಕ, ತಹಸೀಲ್ದಾರ್