ಕಪ್ಪತಗುಡ್ಡಕ್ಕೆ ವನ್ಯಜೀವಿ ಧಾಮ ಕಿರೀಟ

ಗದಗ: ಅಪರೂಪದ ಸಸ್ಯರಾಶಿ ಒಳಗೊಂಡಿರುವ ಕಪ್ಪತಗುಡ್ಡವು ಈಗ ವನ್ಯಜೀವಿ ಧಾಮ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಕಳೆದೆರಡು ದಶಕಗಳಿಂದ ಪರಿಸರವಾದಿಗಳು ನಡೆಸಿದ ಪ್ರಯತ್ನ ಫಲ ನೀಡಿದೆ. ಸರ್ಕಾರವು ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೊಷಿಸುವ ಮೂಲಕ ಗುಡ್ಡದಲ್ಲಿ ನಡೆಯುತ್ತಿದ್ದ ಎಲ್ಲ ತರಹದ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದಂತಾಗಿದೆ.

ಕಪ್ಪತಗುಡ್ಡವು 33 ಸಾವಿರ ಹೆಕ್ಟೇರ್ ಪ್ರದೇಶ ಇದ್ದು, ಈ ಪೈಕಿ 24,415 ಹೆ. ಪ್ರದೇಶವನ್ನು ವನ್ಯಜೀವಿ ಧಾಮವನ್ನಾಗಿ ಘೊಷಣೆ ಮಾಡಲಾಗಿದೆ. ಇದಕ್ಕೂ ಮೊದಲು ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಎಂದು ಸರ್ಕಾರ ಘೊಷಣೆ ಮಾಡಿ ಒಂದೂವರೆ ವರ್ಷ ಕಳೆದರೂ ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಸರ್ಕಾರದ ನಿರ್ಲಕ್ಷ್ಯಂದ ಕಪ್ಪತಗುಡ್ಡದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿಲೇ ಬಂದಿವೆ. ಮುಖ್ಯವಾಗಿ ಗುಡ್ಡದ ಕೆಳಭಾಗದ ನೂರಾರು ಹೆಕ್ಟೇರ್ ಪ್ರದೇಶ ಅತಿಕ್ರಮಣವಾಗಿದೆ. ಇಲ್ಲಿ ಅದಿರು ಗಣಿಗಾರಿಕೆ ಸಂಪೂರ್ಣವಾಗಿ ನಿಂತಿಲ್ಲ. ಯಂತ್ರಗಳ ಮೂಲಕ ಗುಡ್ಡ ಕೊರೆದು ಅಲ್ಲಿನ ಮಣ್ಣನ್ನು ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ಕೆಲಸಗಳಿಗೂ ಬಳಕೆ ಮಾಡುತ್ತಿದ್ದಾರೆ. ಕಪ್ಪತಗುಡ್ಡದ ಸೆರಗಿನಲ್ಲಿರುವ ಕೆಲ ಗ್ರಾಮಗಳಲ್ಲಿ ಜನರು ಗುಡ್ಡದಲ್ಲಿರುವ ಸುರಂಗದಲ್ಲಿ ತೆರಳಿ ಚಿನ್ನಮಿಶ್ರಿತ ಕಲ್ಲು ಮತ್ತು ಮಣ್ಣು ತಂದು ಸಂಸ್ಕರಣೆ ಮಾಡುತ್ತಾರಲ್ಲದೇ, ಅದರಿಂದ ಬಂದಂತಹ ಚಿನ್ನವನ್ನು ಮಾರಾಟ ಮಾಡುವ ದಂಧೆಯೂ ನಡೆದಿದೆ. ಗಿಡಮರಗಳನ್ನು ಕಡಿದು ರಾತ್ರೋರಾತ್ರಿ ಸಾಗಣೆ ಮಾಡುವ ದಂಧೆಗೆ ಅಂಕೆ ಇಲ್ಲದಂತಾಗಿದೆ. ಪ್ರಾಣಿಗಳ ಬೇಟೆಗೆ ಅಡೆತಡೆಯೇ ಇಲ್ಲ. ಇದಲ್ಲದೆ, ಗುಡ್ಡಕ್ಕೆ ಬೆಂಕಿ ಹಚ್ಚಿ ಮೋಜು ನೋಡುವ ಪರಿಪಾಠ ಮುಂದುವರಿದಿದ್ದು, ಪ್ರತಿ ವರ್ಷ ನಡೆಯುವ ಈ ಕೃತ್ಯಕ್ಕೆ ಅತ್ಯಮೂಲ್ಯ ಸಸ್ಯರಾಶಿ ಸುಟ್ಟು ಭಸ್ಮವಾಗುತ್ತಿದೆ. ಇದೆಲ್ಲದರ ಜತೆಗೆ ಗುಡ್ಡದ ಸಾಲಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವಂತಹ ನೂರಾರು ಗಾಳಿ ಯಂತ್ರಗಳು (ವಿಂಡ್ ಮಿಲ್) ಸ್ಥಾಪನೆಯಾಗಿವೆ. ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೊಷಣೆ ನಂತರವೂ ಗಾಳಿ ಯಂತ್ರಗಳ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ಇದೀಗ ವನ್ಯಜೀವಿ ಧಾಮ ಎಂದು ಸರ್ಕಾರ ಘೊಷಿಸಿದ್ದು, ಗಾಳಿಯಂತ್ರಗಳ ಕಾರ್ಯನಿರ್ವಹಣೆ ಸೇರಿ ಅಕ್ರಮ ಚಟುವಟಿಕೆಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆಯೊ ಎಂಬುದು ಕುತೂಹಲ ಮೂಡಿಸಿದೆ.

ಅನಿಲ ಕುಂಬ್ಳೆ ವರದಿ:

ಕಪ್ಪತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಮಾಡಬೇಕೆಂಬ ದಶಕಗಳ ಪ್ರಯತ್ನಕ್ಕೆ ಬಿಜೆಪಿ ಸರ್ಕಾರ ಇಂಬು ನೀಡಿತು. ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ ಭರವಸೆಗಳ ಸಮಿತಿ ಸಭೆ ನಡೆಸಿ ಅಹವಾಲು ಸ್ವೀಕರಿಸಿ ಗುಡ್ಡಕ್ಕೆ ಭೇಟಿ ಪರಿಶೀಲನೆ ನಡೆಸಿತು.

2013ರ ಫೆಬ್ರವರಿ 21ರಂದು ಅಂದಿನ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ ಕುಂಬ್ಳೆ ನೇತೃತ್ವದಲ್ಲಿ ಮುಂಡರಗಿ ತಾಲೂಕು ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕಪ್ಪತಗುಡ್ಡ ವನ್ಯಜೀವಿ ಧಾಮವನ್ನಾಗಿ ಘೊಷಣೆ ಮಾಡುವ ಸಲುವಾಗಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಯಿತು. ಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಸೇರಿ ಜಿಲ್ಲೆಯ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯ ನಂತರ ಅನಿಲ ಕುಂಬ್ಳೆ ಅವರು 2013ರ ಫೆಬ್ರವರಿ 22ರಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಕಪ್ಪತಗುಡ್ಡದ ಒಟ್ಟು ಪ್ರದೇಶದ ಪೈಕಿ 17,872 ಹೆಕ್ಟೇರ್ ಪ್ರದೇಶವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ಎ ಕಲಂ 26ಎ ಪ್ರಕಾರ ವನ್ಯಧಾಮ ಎಂದು ಘೊಷಿಸಲು ಯೋಗ್ಯವಾಗಿದೆ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಸರ್ಕಾರ 2015ರಲ್ಲಿ ಸಂರಕ್ಷಿತ ಪ್ರದೇಶ ಎಂದು ಘೊಷಿಸಿತು. ಕೇವಲ ಆರು ತಿಂಗಳ ಅವಧಿಯಲ್ಲಿ ಸಂರಕ್ಷಿತ ಪ್ರದೇಶ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿತು. ಆಗ ಜಿಲ್ಲೆಯ ಅನೇಕ ಮಠಾಧೀಶರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರ ಹೋರಾಟಕ್ಕೆ ಮಣಿದ ಸರ್ಕಾರ ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೊಷಿಸಿತು. ಈ ಎಲ್ಲ ಏರಿಳಿತದ ಜತೆಗೆ ಇದೀಗ ಸರ್ಕಾರ ಕಪ್ಪತಗುಡ್ಡ ವನ್ಯಜೀವಿ ಧಾಮ ಎಂದು ಘೊಷಿಸಿದೆ.

2018ರ ಮಾರ್ಚ್ 23ರಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದ ವಿಧಾನ ಪರಿಷತ್ ಭರವಸೆಗಳ ಸಮಿತಿಯು ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿ, ಕಪ್ಪತಗುಡ್ಡ ವನ್ಯಜೀವಿ ಧಾಮವನ್ನಾಗಿ ಮಾಡುವ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿತು.

ಗುಡ್ಡದಲ್ಲಿ ಏನೇನಿದೆ?

ಕಪ್ಪತಗುಡ್ಡದಲ್ಲಿ 30ಕ್ಕೂ ಹೆಚ್ಚು ಕೆರೆಗಳು, ಹಳ್ಳಗಳು, ಝುರಿಗಳು, ಕೊಳ್ಳಗಳು ಮತ್ತು ಪಡಿಗಳಿವೆ. ಇವುಗಳು ಕಪ್ಪತ್ತ್ತಗುಡ್ಡದಲ್ಲಿರುವ ಪ್ರಾಣಿ-ಪಕ್ಷಿಗಳ ನೀರಿನ ದಾಹ ಇಂಗಿಸುತ್ತವೆ. ಇಂತಹ ಕೆರೆಗಳಲ್ಲಿ ಆಲದಕೆರೆ, ಬಂಗಾರಕೊಳ್ಳ, ಮಂಜಿನಡೋಣಿ, ಕಾರಿಸಿದ್ದಪ್ಪನ ಪಡಿ, ಹಗಲಬತ್ತಿಯ ಕೆರೆ ಪ್ರಮುಖವಾಗಿವೆ. ಈ ಪ್ರದೇಶದಲ್ಲಿ 2006ರಲ್ಲಿ ಕರ್ನಾಟಕ ಸರ್ಕಾರ ನಡೆಸಿದ ವನ್ಯ ಪ್ರಾಣಿಗಳ ಗಣತಿ ಪ್ರಕಾರ ಸಸ್ಯಾಹಾರಿ ಪ್ರಾಣಿಗಳಾದ ಕೃಷ್ಣಮೃಗ 370, ಕಾಡು ಕುರಿ 66, ಚುಕ್ಕೆ ಜಿಂಕೆ 35, ಮುಳ್ಳ ಹಂದಿ 165, ಕಾಡು ಹಂದಿ 295, ಮಾಂಸಾಹಾರಿ ವನ್ಯ ಪ್ರಾಣಿಗಳಾದ ಚಿರತೆ 4, ಕರಡಿ 4, ತೋಳ 40, ನರಿ 85, ಕತ್ತೆ ಕಿರುಬ 12, ಕಾಡು ಬೆಕ್ಕು 13 ಸೇರಿ 1089 ವನ್ಯ ಪ್ರಾಣಿಗಳಿವೆ. 700 ರಿಂದ 1000ಕ್ಕೂ ಹೆಚ್ಚು ನವಿಲುಗಳು, ಹೈನಾ, ಸಾರಂಗಗಳಿವೆ.

ಬಗರಹುಕುಂ ಸಾಗುವಳಿದಾರರಿಗೆ ಆತಂಕ

ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಸರ್ಕಾರ ಘೊಷಣೆ ಮಾಡಿದ್ದಕ್ಕೆ ಜಿಲ್ಲೆಯ ಜನರು ಖುಷಿಪಡುತ್ತಿದ್ದಾರೆ. ಆದರೆ, ಹಲವಾರು ವರ್ಷಗಳಿಂದ ಅರಣ್ಯ ಭೂಮಿ ಉಳುಮೆ ಮಾಡಿಕೊಂಡು ಅದರಲ್ಲಿಯೇ ಜೀವನ ನಿರ್ವಹಣೆ ಮಾಡುವಂತಹ ನೂರಾರು ಕುಟುಂಬಗಳಿಗೆ ಸರ್ಕಾರದ ತೀರ್ಮಾನ ಆತಂಕಕ್ಕೆ ದೂಡಿದೆ. ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಮಾಡಲು ಯಾವುದೇ ತಕರಾರು ಇಲ್ಲ. ಆದರೆ, ಹಲವಾರು ವರ್ಷಗಳಿಂದ ಗುಡ್ಡದ ಸೆರಗಿನಲ್ಲಿ ಭೂಮಿ ಸಾಗುವಳಿ ಮಾಡಿ ಜೀವನ ಮಾಡುತ್ತಿರುವ ಬಗರ್​ಹುಕುಂ ಸಾಗುವಳಿದಾರರ ಸ್ಥಿತಿ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ವನ್ಯಜೀವಿ ಧಾಮ ಕುರಿತು ಸರ್ಕಾರ ಹೊರಡಿಸಿದ ಘೊಷಣೆಯಲ್ಲಿ ಕಂದಾಯ ಗ್ರಾಮ, ಕಂದಾಯ ಭೂಮಿ ಮತ್ತು ಪಟ್ಟಾ ಭೂಮಿ ಹೊಂದಿರುವ ರೈತರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ನೂರಾರು ವರ್ಷ ಭೂಮಿ ಸಾಗುವಳಿ ಮಾಡಿದ ರೈತನ ಬಳಿ ದಾಖಲೆಗಳು ಇಲ್ಲ. ಸಾಗುವಳಿ ಮಾಡಲಾಗಿರುವ ಭೂಮಿಯು ಸರ್ಕಾರದ ಭೂಮಿ ಎಂದು ದಾಖಲೆಯಲ್ಲಿ ಇರುವುದರಿಂದ ಆತಂಕ ಶುರುವಾಗಿದೆ. ವನ್ಯಧಾಮ ನೆಪದಲ್ಲಿ ಸರ್ಕಾರ ಒಕ್ಕಲೆಬ್ಬಿಸಲು ಮುಂದಾದರೆ ಗತಿ ಏನು ಎಂದು ಅವರು ಚಿಂತಾಕ್ರಾಂತರಾಗಿದ್ದಾರೆ.

ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೊಷಣೆ ಮಾಡಿದ್ದರಿಂದ ಕಪ್ಪತಗುಡ್ಡದ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗುತ್ತದೆ. ತದನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿಯಮಗಳ ಪ್ರಕಾರ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಆಧರಿಸಿ ಕ್ರಿಯಾ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲ ಕಾರ್ಯಗಳಿಗೆ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಸರ್ಕಾರ ಹೊರಡಿಸಿದ ಆದೇಶದಲ್ಲಿ ಕಂದಾಯ, ಪಟ್ಟಾ ಭೂಮಿಗಳು ಇಲ್ಲ. ಹೀಗಾಗಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಸೋನಲ್, ಡಿಎಫ್​ಒ, ಗದಗ

ಎಪ್ಪತ್ತು ಗಿರಿಗಿಂತ ಕಪ್ಪತಗಿರಿ ಲೇಸು ಎನ್ನುವಂತೆ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಸರ್ಕಾರ ಘೊಷಣೆ ಮಾಡಿರುವುದು ಸಂತಸದ ಕಾರ್ಯ. ಕಪ್ಪತಗುಡ್ಡವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು.

ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ, ಮುಂಡರಗಿ

ಕಪ್ಪತಗುಡ್ಡ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಲ್ಲಿರುವ ಔಷಧಿಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನೆಯಾಗಬೇಕು. ಇಲ್ಲಿ ಆಯುರ್ವೆದಿಕ್ ಕಾಲೇಜ್, ಪಾರಂಪರಿಕ ವಿಜ್ಞಾನ ಕೇಂದ್ರ ಆರಂಭಿಸಬೇಕು. ಕಪ್ಪತಗುಡ್ಡದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೊಂದಿಗೆ ಶೀಘ್ರವೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಮುಂದಾಗಬೇಕು.

ಶ್ರೀ ಶಿವಕುಮಾರ ಸ್ವಾಮೀಜಿ ನಂದಿವೇರಿಮಠ, ಕಪೋತಗಿರಿ, ಡೋಣಿ

ಸದ್ಯಕ್ಕೆ ಚಿನ್ನ ಸಂಸ್ಕರಣಾ ಘಟಕ ಸ್ಥಗಿತ

ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಬಳಿಯ ಕಪ್ಪತಗುಡ್ಡದ ಸೆರಗಿನಲ್ಲಿ ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ರಾಮಗಡ ಮಿನರಲ್ಸ್ ಕಂಪನಿ ಚಿನ್ನ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಘಟಕದ ಕಾರ್ಯಚಟುವಟಿಕೆಗಳು ಸದ್ಯಕ್ಕೆ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಆದರೆ, ಸರ್ಕಾರ 33 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 24,415 ಹೆಕ್ಟೇರ್ ಪ್ರದೇಶದಲ್ಲಿ ವನ್ಯಜೀವಿ ಧಾಮ ಮಾಡಬೇಕೆಂದು ಉದ್ದೇಶಿಸಿದೆ. ಉಳಿದ 8.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿರ್ವಹಣೆ ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಚಿನ್ನದ ಸಂಸ್ಕರಣ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸರ್ವೆ ನಂಬರ್​ಗಳು ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಬರಲಿದೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply

Your email address will not be published. Required fields are marked *